ಚಡಚಣ ತಾಲೂಕಿನ ರೇವತಗಾಂವದ ಶ್ರೀ ರೇವಣಸಿದ್ದೇಶ್ವರ ಜಾತ್ರೆ ಸಂಪನ್ನ
ಚಡಚಣ: ಗ್ರಾಮೀಣ ಸೊಗಡನ್ನು ಉಳಿಸುವ ನಿಟ್ಟಿನಲ್ಲಿ ಕುಸ್ತಿ ಪಂದ್ಯಾವಳಿ ಉತ್ತಮ ಪ್ರಯೋಗವಾಗಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚು ಜನಪ್ರಿಯವಾಗಿರುವ ಕುಸ್ತಿ ಕ್ರೀಡೆ ಇತ್ತೀಚಿನ ದಿನಗಳಲ್ಲಿ ಅವನತಿ ಅಂಚಿನಲ್ಲಿ ಸಾಗುತ್ತಿದೆ. ಅದನ್ನು ಉಳಿಸಿ ಬೆಳೆಸುವ ಅಗತ್ಯವಿದೆ ಎಂದು ಮಾಜಿ ಕುಸ್ತಿ ಪೈಲ್ವಾನರು ಚನ್ನಪ್ಪ ಹತ್ತಳ್ಳಿಯವರು ಹೇಳಿದರು.
ಶುಕ್ರವಾರದಂದು ಗ್ರಾಮದ ಶ್ರೀ ರೇವಣಸಿದ್ದೇಶ್ವರ ಜಾತ್ರೆಯ ಅಂಗವಾಗಿ ಹಮ್ಮಿಕೊಂಡಿದ್ದ ಜಂಗೀ ನಿಕಾಲಿ ಕುಸ್ತಿ ಪಂದ್ಯಾವಳಿಯ ವೇಳೆಯ ನಿರ್ಣಾಯಕರಾಗಿ ಮಾತನಾಡಿದ ಅವರು. ಇಂದಿನ ಮಕ್ಕಳು ಮೊಬೈಲ್‌ಗೆ ದಾಸರಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ದುಷ್ಚಟಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ತಂದೆ-ತಾಯಿ ಎಚ್ಚೆತ್ತುಕೊಂಡು ಮಕ್ಕಳನ್ನು ಪೈಲ್ವಾನರಾಗಲು ಹುರಿದುಂಬಿಸಬೇಕು. ದೇಹ ದಂಡಿಸಿ ಗಟ್ಟಿಮುಟ್ಟಾಗಿ ಕುಸ್ತಿ ಪಟುವಾಗಲು ಮುಂದಾಗಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನ ಕಮೀಟಿ ಅಧ್ಯಕ್ಷರಾದ ಪ್ರಕಾಶ ಜೀಗಜೇವಣಿಯವರು ಮಾತನಾಡುತ್ತ. ದೈಹಿಕ ಕಸರತ್ತು ತಾಕತ್ತು ತೋರಿಸುವ ರೈತರ ಹಾಗೂ ಯುವಕರ ಕ್ರೀಡೆಗಳಲ್ಲೊಂದಾದ ಕುಸ್ತಿ ಕರಡಿ ಮನೆಗಳು ಅಳಿವಿನಂಚಿನಲ್ಲಿವೆ. ಇದು ಗ್ರಾಮೀಣ ಕ್ರೀಡೆ ನಾವೇಲ್ಲರೂ ಸೇರಿ ಕಾಪಾಡಿ, ಉಳಿಸಿ ಬೆಳಸಬೇಕು ಮತ್ತು ನಶಿಸಿ ಹೋಗುತ್ತಿರುವ ಗರಡಿ ಮನೆಗಳ ಅಭಿವೃದ್ಧಿಗಾಗಿ ಸರ್ಕಾರ ಮುಂದಾಗಬೇಕು. ಗರಡಿ ಮನೆಗಳು ಹೆಚ್ಚಾಗಬೇಕು ಎಂದು ಹೇಳಿದರು.
ಕುಸ್ತಿ ಅಖಾಡದಲ್ಲಿ ಪೈಲ್ವಾನರು ಎದುರಾಳಿ ಮಣಿಸಲು ಪಟ್ಟು ಹಾಕುತ್ತಿದ್ದರೆ, ಸುತ್ತಲೂ ನೆರೆದಿದ್ದ ಪ್ರೇಕ್ಷಕರು ಕೇಕೆ ಹಾಕಿ ಚಪ್ಪಾಳೆ ತಟ್ಟುತ್ತಾ ಪೈಲ್ವಾನರನ್ನು ಹುರಿದುಂಬಿಸುತ್ತಿದ್ದರು. ನೆಚ್ಚಿನ ಪೈಲ್ವಾನರು ನೆಲಕ್ಕುರುಳಿದಾಗ ಓಹೋ.. ಎಂದು ಉದ್ಗಾರ ತೆಗೆಯುತ್ತಿದ್ದರು. ಮೈನವಿರೇಳಿಸುವಂತಿದ್ದ ಪೈಲ್ವಾನರ ಸೆಣಸಾಟಕ್ಕೆ ಸಾಕ್ಷಿಯಾಗಿದ್ದು ರೇವತಗಾಂವದ ಶ್ರೀ ರೇವಣಸಿದ್ದೇಶ್ವರ ದೇವಾಸ್ಥಾನ ಆವರಣ. ನೆರೆಯ ಮಹಾರಾಷ್ಟ್ರ ಹಾಗೂ ರಾಜ್ಯದ ವಿವಿಧ ಭಾಗದ ಕುಸ್ತಿಪಟುಗಳು ಸೆಣಸಾಡಿದರು.
ಶುಕ್ರವಾರದಂದು ನಸುಕಿನ ಜಾವ ೦೫ ಗಂಟೆಗೆ ಶ್ರೀ ರೇವಣಸಿದ್ದೇಶ್ವರರಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ ಜರುಗಿತು. ಬೆಳಗ್ಗೆ ೬ ಗಂಟೆಗೆ ಭಕ್ತರಿಂದ ಸಕ್ಕರೆ-ಬೆಲ್ಲ ಹಂಚುವ ಕಾರ್ಯಕ್ರಮ ನೆರವೇರಿತು.
೦೭ ಗಂಟೆಗೆ ವಿವಿಧ ವಾದ್ಯವೈಭವಗಳೊಂದಿಗೆ ಶ್ರೀ ರೇವಣಸಿದ್ದೇಶ್ವರರ ಪಲ್ಲಕ್ಕಿ ಸಬೀನ ತಿರುಗುವ ಕಾರ್ಯಕ್ರಮ ನಡೆಯಿತು. ರಾತ್ರಿ ೧೦ ಗಂಟೆಗೆ ಶ್ರೀ ಬಸವೇಶ್ವರ ನಾಟ್ಯ ಸಂಘ ರೆಬಿನಾಳದ ಶ್ರೀಶೈಲ ಅಂಗಡಿಯವರ ನಿರ್ದೇಶನದಲ್ಲಿ ‘ಮಹಾಶಿವಶರಣೆ ಹೇಮರೆಡ್ಡಿ ಮಲ್ಲಮ್ಮ’ ಎಂಬ ಭಕ್ತಿಮಯ ಸುಂದರ ನಾಟಕ ಜರುಗಿತು.

