ಬರ ಪರಿಸ್ಥಿತಿ ನಿರ್ವಹಣೆ-ಕುಡಿಯುವ ನೀರಿನ ಸ್ಥಿತಿಗತಿ ಕುರಿತು ವಿವರಣೆ
ವಿಜಯಪುರ: ಜಿಲ್ಲೆಯಲ್ಲಿ ಸಮರ್ಪಕವಾಗಿ ಬರ ಪರಿಸ್ಥಿತಿ ನಿರ್ವಹಣೆ ಹಾಗೂ ಕುಡಿಯುವ ನೀರಿನ ಸ್ಥಿತಿಗತಿ ಕುರಿತು ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿ ಟಿ.ಭೂಬಾಲನ್ ಅವರು ಇಂದು ವಿಡಿಯೋ ಸಂವಾದದ ಮೂಲಕ ಮಾಹಿತಿ ಒದಗಿಸಿದರು.
ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ಮಾರ್ಚ್-೨೦೨೪ರಿಂದ ಮೇ. ತಿಂಗಳ೨೨ರವರೆಗೆ ವಾಡಿಕೆ ಮಳೆ ೪೧.೦೦ ಮಿ.ಮೀ. ಇದ್ದು, ೬೯.೦೦ ಮೀ.ಮೀ. ಮಳೆಯಾಗುವ ಮೂಲಕ ಶೇ.೬೬ ರಷ್ಟು ಹೆಚ್ಚಿನ ಮಳೆಯಾಗಿದೆ. ಪ್ರಕೃತಿ ವಿಕೋಪದಡಿ ಹಾನಿಗೊಳಗಾದ ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಶೇಂಗಾ, ಹತ್ತಿ ಮತ್ತು ಕಬ್ಬು, ಉಳ್ಳಾಗಡ್ಡಿ, ಮೆಣಸಿನಕಾಯಿ, ಟೊಮೆಟೊ ಬದನೆ, ಬೀನ್ಸ್, ನಿಂಬೆ ಸೇರಿದಂತೆ ಕೃಷಿ ಹಾಗೂ ತೋಟಗಾರಿಕೆ ಬೆಳೆಯ ಒಟ್ಟು ೨೬೭೭೨೦ ಫಲಾನುಭವಿಗಳ ಪೈಕಿ ೨,೫೦,೦೬೩ ರೈತರಿಗೆ ೪೧೩೪೮.೭೬ ಲಕ್ಷ ರೂ. ಪರಿಹಾರ ಧನ ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡಲಾಗಿದೆ. ಒದಗಿಸಲಾಗಿದೆ. ೩೨೭೮ ವಿವಿಧ ಪ್ರಕರಣಗಳು ಬಾಕಿ ಉಳಿದಿದ್ದು, ಮೇ.೨೨ ರಂದು ೧೩೨೯ ಫಲಾನುಭವಿಗಳ ಪಟ್ಟಿಯನ್ನು ಅನುಮೋದಿಸಿ ಸಲ್ಲಿಸಲಾಗಿದೆ. ಜಿಲ್ಲೆಗೆ ರಾಜ್ಯದಲ್ಲಿಯೇ ಅತಿ ಹೆಚ್ಚು ಪರಿಹಾರ ಧನ ಬೆಳೆ ಹಾನಿ ಜಮೆಯಾಗಿರುವುದಕ್ಕೆ ಕಂದಾಯ ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.
ಜಿಲ್ಲೆಯ ವಿವಿಧ ತಾಲೂಕಿನ ೧೧೯ ಗ್ರಾಮ, ೬೫೪ ಜನವಸತಿಗಳಿಗೆ ೨೯೪ ಟ್ಯಾಂಕರ್‌ಗಳ ಮೂಲಕ ೫೮೮ ಟ್ರಿಪ್ ಕುಡಿಯುವ ನೀರು ಸರಬರಾಜ ಮಾಡಲಾಗಿದೆ. ಆಲಮಟ್ಟಿ ಜಲಾಶಯದಲ್ಲಿ ಜನ ಜಾನುವಾರುಗಳ ಕುಡಿಯುವ ನೀರಿನ ಸಲುವಾಗಿ ಚಿಮ್ಮಲಗಿ ಏತ ನೀರಾವರಿ ಯೋಜನೆಯಡಿ ೨೭ ಕೆರೆಗಳಿಗೆ ಹಾಗೂ ಮುಳವಾಡ ಹಂತ-೩ರಡಿ ೭೨ ಕೆರೆಗಳನ್ನು ತುಂಬಿಸಲು ೬ ಟಿಎಂಸಿ ನೀರು ಕಾಯ್ದಿರಿಸಲಾಗಿದ್ದು, ನೀರನ್ನು ಹಂತ ಹಂತವಾಗಿ ಪ್ರಾದೇಶಿಕ ಆಯುಕ್ತರಿಂದ ಅನುಮತಿ ಪಡೆದು ಕಾಲುವೆಗಳಿಗೆ ಹರಿಸಲಾಗಿದೆ. ನಾರಾಯಣಪುರ ಜಲಾಶಯದಿಂದ ಐಬಿಸಿ ಮತ್ತು ಐಎಲ್‌ಸಿ ಕಾಲುವೆಗಳಿಗೆ ೩.೪೭ ಟಿಎಂಸಿ ನೀರು ಹರಿಸಲಾಗಿದೆ. ನಗರದ ಭೂತನಾಳ ಕೆರೆಗೆ ಮುಳವಾಡ ಏತ ನೀರಾವರಿ ಕಾಲುವೆಯಿಂದ ನೀರು ಹರಿಸಲಾಗಿದ್ದು, ಕುಡಿಯುವ ನೀರಿನ ಯಾವುದೇ ತೊಂದರೆಯಿಲ್ಲ. ಜಿಲ್ಲೆಯಲ್ಲಿ ಜೂನ್-೩೦ರವರೆಗೆ ಸಾಕಾಗುವಷ್ಟು ನೀರು ಸಂಗ್ರಹವಿದ್ದು, ಕುಡಿಯುವ ನೀರಿನ ಯಾವುದೇ ಸಮಸ್ಯೆ ಜಿಲ್ಲೆಯಲ್ಲಿ ಇಲ್ಲ ಎಂದು ಅವರು ಮಾಹಿತಿ ನೀಡಿದರು.
ಅದರಂತೆ ಜಿಲ್ಲೆಯಲ್ಲಿ ೩,೧೩,೬೫೨ ಮೆಟ್ರಿಕ್ ಟನ್ ಮೇವು ಲಭ್ಯವಿದ್ದು, ಇದನ್ನು ೧೬ ವಾರಗಳವರೆಗೆ ಉಪಯೋಗಿಸಹುದಾಗಿದೆ. ೩೫,೮೦೮ ಮೇವಿನ ಬಿಜಗಳ ಮಿನಿಕಿಟ್ ಸರಬರಾಜಾಗಿದ್ದು, ಎಲ್ಲ ಕಿಟ್‌ಗಳನ್ನು ರೈತರಿಗೆ ವಿತರಿಸಲಾಗಿದೆ. ಬರ ಹಿನ್ನಲೆಯಲ್ಲಿ ಅಂತರರಾಜ್ಯ ಮೇವು ಸಾಗಾಣಿಕೆ ನಿಷೇಧಿಸಿದೆ. ಜಿಲ್ಲೆಯಲ್ಲಿ ೧೨ ಚೆಕ್ ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ. ಮೇವು ಲಭ್ಯತೆ ಇರುವ ಕಡೆಗಳಲ್ಲಿ ಒಟ್ಟು ೦೨ ಮೇವು ಬ್ಯಾಂಕ್ ಸ್ಥಾಪಿಸಲಾಗಿದೆ. ಬರ ಪರಿಸ್ಥಿತಿ ನಿರ್ವಹಣೆಗೆ ಒಟ್ಟು ೧೮೦೦.೦೦ ಲಕ್ಷ ಅನುದಾನ ಬಿಡುಗಡೆಯಾಗಿದ್ದು, ೩೩೧.೨೯ ಲಕ್ಷ ರೂ.ಗಳಲ್ಲಿ ಒಟ್ಟು ೨೩೮ ಕಾಮಗಾರಿಗಳಿಗೆ ಅನುಮೋದನೆ ನೀಡಲಾಗಿದೆ. ಟ್ಯಾಂಕ್‌ರ್ ಮತ್ತು ಮೇವಿಗಾಗಿ ಇದುವರೆಗೆ ತಹಶೀಲ್ದಾರರಿಗೆ ೩೫೦ ಲಕ್ಷ ರೂ. ಬಿಡುಗಡೆಗೊಳಿಸಲಾಗಿದೆ. ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ ೪೨೬೮.೬೩ ಲಕ್ಷ ಅನುದಾನ ಲಭ್ಯವಿದೆ. ಜಿಲ್ಲೆಯ ಎಲ್ಲ ತಹಶೀಲ್ದಾರ ಖಾತೆಗಳಲ್ಲಿ ೫೧೦.೧೮ ಲಕ್ಷ ರೂ. ಅನುದಾನವಿದೆ ಎಂದು ಅವರು ತಿಳಿಸಿದರು.
ಬೀಜ-ರಸಗೊಬ್ಬರ ದಾಸ್ತಾನು : ಮುಂಗಾರು ಹಂಗಾಮಿನ ಬಿತ್ತನೆ ಬೀಜಗಳಾದ ಹೆಸರು, ತೊಗರಿ, ಮೆಕ್ಕೆಜೋಳ, ಸಜ್ಜೆ, ಸೂರ್ಯಕಾಂತಿ, ಬಿತ್ತನೆಬೀಜ ಲಭ್ಯವಾಗಲಿದ್ದು, ಸಧ್ಯ ಒಟ್ಟು ೫೭೪೧.೫೦ ಕ್ವಿಂಟಾಲ್ ಮತ್ತು ೯೧೯೬೯ ಮೆ.ಟನ್ ರಸಗೊಬ್ಬರ ದಾಸ್ತಾನಿದೆ. ಸದ್ಯಕ್ಕೆ ಯಾವುದೇ ಕೊರತೆ ಇಲ್ಲ.
ಪ್ರಕೃತಿ ವಿಕೋಪದಿಂದ ಜಿಲ್ಲೆಯಲ್ಲಿ ೪ ಜೀವಗಹಾನಿಯಾಗಿದ್ದು, ಎಲ್ಲ ಪ್ರಕರಣಗಳಿಗೆ ಪರಿಹಾರ ಧನ ಒದಗಿಸಲಾಗಿದೆ. ೪೭ ಜಾನುವಾರುಗಳ ಜೀವಹಾನಿಯಾಗಿದ್ದು, ೪೦ ಪ್ರಕರಣಗಳಲ್ಲಿ ಎಸ್‌ಡಿಆರ್‌ಎಫ್ ಮಾರ್ಗಸೂಚಿಯನ್ವಯ ೮.೫೪ ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. ಜಿಲ್ಲೆಯಲ್ಲಿ ೧೪೧ ಮನೆಗಳೂ ಭಾಗಶ: ಹಾನಿಗೊಳಗಾಗಿದ್ದು, ಅರ್ಹ ೬ ಮನೆಗಳಿಗೆ ೦.೨೪ ಲಕ್ಷ ರೂ. ಪರಿಹಾರ ಒದಗಿಸಲಾಗಿದೆ. ಅಕಾಲಿಕ ಮಳೆಯಿಂದ ೬೮.೫೦ ಹೇ. ಪ್ರದೇಶ ತೋಟಗಾರಿಕೆ ಬೆಳೆ ಹಾನಿಗೊಳಗಾಗಿದ್ದು, ಅರ್ಹ ೨೦೧ ರೈತರಿಗೆ ಮಾರ್ಗಸೂಚಿಯನುಸಾರ ೧೪.೩೬ ಲಕ್ಷ ರೂ. ಪರಿಹಾರ ಧನ ವಿತರಿಸಲಾಗಿದೆ. ಪೂರ್ವ ಮುಂಗಾರು ಮುನ್ಸೂಚನೆ ಕುರಿತು ಈಗಾಗಲೇ ಜಿಲ್ಲಾ ವಿಪತ್ತು ಪ್ರಾಧಿಕಾರ ರಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವಿಡಿಯೋ ಸಂವಾದ ಸಭೆಯಲ್ಲಿ ಜಿಲ್ಲೆಯ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

