ಮುದ್ದೇಬಿಹಾಳ: ನಮಗೆ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ ಎಂದು ಆರೋಪಿಸಿ ಪಟ್ಟಣದ ಪುರಸಭೆಯ ವಾರ್ಡ ನಂ ೧೫ ರ ನಿವಾಸಿಗಳು ಪುರಸಭೆ ಕಾರ್ಯಾಲಯಕ್ಕೆ ಖಾಲಿ ಕೊಡಗಳನ್ನು ತಂದು ಮುಖ್ಯದ್ವಾರದ ಬಳಿ ಕುಳಿತು ಗುರುವಾರ ದಿಢೀರನೆ ಪ್ರತಿಭಟನೆ ನಡೆಸಿದರು.
ಬೇಕೆ ಬೇಕೆ ನ್ಯಾಯ ಬೇಕು ಎಂದು ಪುರಸಭೆಗೆ ಧಿಕ್ಕಾರ ಹಾಕುತ್ತಿದ್ದಂತೆಯೇ ಪ್ರತಿಭಟನಾಕಾರರ ಮನವೊಲಿಸಲು ಮುಖ್ಯಾಧಿಕಾರಿ ಆಗಮಿಸಿದರು. ಆಗಿರುವ ತೊಂದರೆಯನ್ನು ನಾನು ಬಗೆಹರಿಸುವೆ, ಮಧ್ಯಾಹ್ನ ೪ಗಂಟೆ ಹೊತ್ತಿಗೆ ನೀರು ಬಿಡಿಸುವ ವ್ಯವಸ್ಥೆ ಮಾಡುತ್ತೇನೆ ದಯಮಾಡಿ ಪ್ರತಿಭಟಿಸಬೇಡಿ ಎಂದು ಕೇಳಿಕೊಂಡರು. ಮುಖ್ಯಾಧಿಕಾರಿಗಳ ಮಾತಿಗೆ ಜಗ್ಗದ ಪ್ರತಿಭಟನಾಕಾರರು ಸುಮಾರು ದಿನಗಳಿಂದ ನಾವು ಈ ಸಮಸ್ಯೆ ಮಾತ್ರವಲ್ಲದೇ ವಿದ್ಯತ್, ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಸೇರಿದಂತೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ನೀವು ಏನೇ ಹೇಳಿದರೂ ನಾವು ಇಲ್ಲಿಂದ ಕದಲುವದಿಲ್ಲ. ಮೊದಲು ನೀರು ಬಿಡುವ ನೌಕರನನ್ನು ಇಲ್ಲಿಗೆ ಕರೆಯಿಸಿ ಯಾಕೆ ನಮಗೆ ನೀರು ಬಿಡಲು ಹಿಂದೇಟು ಹಾಕುತ್ತಾನೆ ಎಂಬ ಬಗ್ಗೆ ಎಲ್ಲರೆದುರು ಪ್ರಶ್ನಿಸಿ ಆತನಿಂದ ಸೂಕ್ತ ಉತ್ತರ ಬಂದರೆ ಮಾತ್ರ ನಾವು ಇಲ್ಲಿಂದ ಕದಲುತ್ತೇವೆ ಎಂದು ಬಿಗಿಪಟ್ಟು ಹಿಡಿದರು.
ಪ್ರತಿಭಟನಾಕಾರರ ಸಮಸ್ಯೆ ಗಂಭೀರವಾದದ್ದು ಎಂದು ಅರಿತ ಮುಖ್ಯಾಧಿಕಾರಿ ಪ್ರತಿಭಟನಾ ನಿರತರ ಸಮಸ್ಯೆಯನ್ನು ಖುದ್ದಾಗಿ ವೀಕ್ಷಿಸುವದಾಗಿ ಹೇಳಿ ಎಲ್ಲರ ಜೊತೆಗೂಡಿ ತಮ್ಮ ಸಿಬ್ಬಂದಿಗಳನ್ನು ಕರೆದುಕೊಂಡು ವಾರ್ಡ ಗೆ ಬಂದರು. ನಂತರ ಒಂದೊಂದೇ ಸಮಸ್ಯೆಯನ್ನು ಆಲಿಸತೊಡಗಿದರು. ದ್ಯಾಮವ್ವ ದೇವಿ ದೇವಸ್ಥಾನದ ಹತ್ತಿರವಿರುವ ಚೌದರಿಯವರ ಮನೆ ಬಳಿ ವಿದ್ಯುತ್ ಚಾಲ್ತಿಯಲ್ಲಿರುವ ಕಂಬವೊಂದು ಬಾಗಿ ಮುಂದಿನ ಗೋಡೆಯ ಆಸರೆಗೆ ನಿಂತು ಅಪಾಯವನ್ನುಂಟುಮಾಡುವ ಸ್ಥಿತಿಯಲ್ಲಿರುವದನ್ನ ಮತ್ತು ಇಲ್ಲಿನ ಖಂದಕ ಬಳಿ ಇರುವ ಹಿಟ್ಟಿನ ಗಿರಣಿಯ ಎದುರು ವಿದ್ಯುತ್ ಕಂಬವೊಂದು ಈಗೋ ಆಗೋ ಬೀಳುವ ಹಂತದಲ್ಲಿರುವದನ್ನು ಗಮನಿಸಿ ಕೂಡಲೇ ಸರಿಪಡಿಸುವಂತೆ ತಮ್ಮ ಸಿಬ್ಬಂದಿಗಳಿಗೆ ತಿಳಿಸಿದರು. ಯಾವ ಪ್ರದೇಶಗಳಲ್ಲಿ ನೀರು ಸರಿಯಾಗಿ ಬರಲ್ಲ ಎಂಬ ಬಗ್ಗೆ, ಯಾವ ಕಾರಣಕ್ಕಾಗಿ ಈ ಸಮಸ್ಯೆಯಾಗುತ್ತಿದೆ ಎಂಬ ಬಗ್ಗೆ ಪರಿಶೀಲಿಸಿ, ಸಮಸ್ಯೆ ಸರಿಪಡಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ತಮ್ಮ ಸಿಬ್ಬಂದಿಗಳಿಗೆ ತಿಳಿಸಿದರು.
ಇಷ್ಟಕ್ಕೇ ಬಿಡದ ಪ್ರತಿಭಟನಾಕಾರರು ಅಧಿಕಾರಿಯನ್ನು ಬಯಲು ಶೌಚದ ಬಳಿ ಕರೆದೊಯ್ದು ಅಲ್ಲಿನ ಗಂಭೀರ ಪರಿಸ್ಥಿಯನ್ನು ಮನವರಿಕೆ ಮಾಡಿಸಿದರು. ಈ ಸ್ಥಳದಲ್ಲಿ ವಿದ್ಯತ್ ವ್ಯವಸ್ಥೆ ಇಲ್ಲದ ಬಗ್ಗೆ ತಿಳಿಸಿದರು. ಇಲ್ಲಿನ ತಿಪ್ಪೆಯನ್ನು ಮೇಲಿಂದ ಮೇಲೆ ಸ್ವಚ್ಛಗೊಳಿಸದ ಕಾರಣ ಇಲ್ಲಿ ಅಲೆದಾಡಲು ಸಾಧ್ಯವಾಗದಷ್ಟು ದುರ್ನಾತ ಬೀರುತ್ತದೆ. ಇಲ್ಲಿ ಶೇಖರಣೆಯಾಗುವ ಕಸವನ್ನು ಪ್ರತಿದಿನ ಸ್ವಚ್ಛಗೊಳಿಸುವಂತೆ ನಿಮ್ಮ ಸಿಬ್ಬಂದಿಗೆ ಸೂಚಿಸಿ ಎಂದು ಒತ್ತಾಯಿಸಿದರು. ಅಲ್ಲದೇ ಹತ್ತಿರದ ಮುಖ್ಯ ರಸ್ತೆಯಲ್ಲಿರುವ ಟ್ಯಾಂಕ್ ಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸಿದ್ದು ವರ್ಷಗಳೇ ಕಳೆದರೂ ಮತ್ತೆ ಸಂಪರ್ಕ ಜೋಡಿಸಿಲ್ಲ. ಇದರಿಂದ ಹತ್ತಿರದ ನಿವಾಸಿಗಳಿಗೆ ಬಳಕೆಯ ನೀರಿನ ಅಭಾವ ಉಂಟಾಗಿದ್ದು ವಯೋವೃದ್ಧರು ದಿನಂಪ್ರತಿ ಪರದಾಡುವಂತಾಗಿದೆ. ಕಾರಣ ಕೂಡಲೇ ಈ ಟ್ಯಾಂಕ್ ನ ಸಂಪರ್ಕವನ್ನು ಜೋಡಿಸಿ ಮೊದಲಿನಂತೆ ನೀರು ಬರುವಹಾಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ನಂತರ ಸುದ್ದಿಗಾರರರೊಂದಿಗೆ ಮಾತನಾಡಿದ ಪ್ರತಿಭಟನಾಕಾರರು, ಮುಖ್ಯಾಧಿಕಾರಿಗಳು ಖುದ್ದು ತಾವೇ ಬಂದು ನಮ್ಮ ಸಮಸ್ಯೆಯನ್ನು ಆಲಿಸಿ ಸೂಕ್ತ ಪರಿಹಾರ ಮಾಡುವದಾಗಿ ಹೇಳಿದ್ದರಿಂದ ಸಧ್ಯ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯುತ್ತಿದ್ದೇವೆ. ನಮ್ಮ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರತರೆ ನಾವು ಪ್ರತಿಭಟನೆಯನ್ನು ಕೈಬಿಡುತ್ತೇವೆ. ನಿಷ್ಕಾಳಗಿ ವಹಿಸಿ ಇದೇ ರೀತಿ ಮುಂದುವರೆದಲ್ಲಿ ಈ ಬಾರಿ ಜಿಲ್ಲಾಧಿಕಾರಿಗಳು ಬರೋವರೆಗೂ ನಮ್ಮ ಹೋರಾಟವನ್ನು ನಿಲ್ಲಿಸಲ್ಲ ಎಂದರು.
ಹೋರಾಟದಲ್ಲಿ ಯಾಸೀನ ಅತ್ತಾರ, ಮಾಂತು ಕಡಿಬಾಗಿಲ, ಮಲಕಾಜಿ ಸಜ್ಜನ, ಮಾಂತು ಹೂಗಾರ, ರಫೀಕ ಬೀಳಗಿ, ಸುಹೇಲ ಚೌದರಿ, ಯುನುಸ ಹುಂಚಾಳ, ಅಬ್ಬಾಸ ಹುಂಚಾಳ, ಖಾಜೇಸಾಬ ಮಳಗಿ, ಲಾಡಲೇಮಶಾಕ ಬಳಗಾನೂರ, ಫೈಜಲ ಮ್ಯಾಗೇರಿ, ರುಶಾನ ಮೋಮಿನ, ಇಮಾಮಹುಸೇನ ಬಾಗವಾನ, ಸುಹೇಲ ಬಾಗವಾನ, ಬೀಬಿಮರಿಯಂ ಚೌದರಿ, ಹೀನಾ ಮಳಗಿ, ಫಾತೀಮಾ ಮಳಗಿ, ನಜಮಾ ಬಾಗವಾನ, ಬೋರಮ್ಮ ಹೂಗಾರ, ಸುನಿತಾ ಕತ್ತಿ, ಪಮ್ಮಕ್ಕ ಚಿನಿವಾರ, ನಜಮಾ ಮಳಗಿ, ಅಬೇದಾ ಬಾಗವಾನ, ನೂರಜಾನ ಮುಜಾವರ, ಕುಲಸುಮಾ ಬಾಗವಾನ, ನಜಮಾ ಮೇಲಿನಮನಿ, ಎಸ್.ಎಸ್.ಚಿನಿವಾರ, ಶಿವಗಂಗಪ್ಪ ಚಿನಿವಾರ ಸೇರಿದಂತೆ ಮತ್ತೀತರರು ಭಾಗಿಯಾಗಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

