ಬಸವನಬಾಗೇವಾಡಿ: ಪಟ್ಟಣದ ಬಸವ ನಗರದಲ್ಲಿರುವ ರೇಣುಕಾ ಯಲ್ಲಮ್ಮದೇವಿ ಜಾತ್ರಾಮಹೋತ್ಸವ ಗುರುವಾರ ಸಂಭ್ರಮ,ಸಡಗರದಿಂದ ಜರುಗಿತು. ದೇವಿಗೆ ಜಾತ್ರಾಮಹೋತ್ಸವದಂಗವಾಗಿ ವಿಶೇಷ ಪೂಜೆ ನೆರವೇರಿತು. ಜನತೆ ಕುಟುಂಬ ಸದಸ್ಯರೊಂದಿಗೆ ಆಗಮಿಸಿ ದೇವಿಯ ದರ್ಶನ ಪಡೆದು ತಮ್ಮ ಹರಕೆ ಸಲ್ಲಿಸಿದರು.
ಬೆಳಗ್ಗೆ ಜಾತ್ರಾಮಹೋತ್ಸವದಂಗವಾಗಿ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನದಿಂದ ರೇಣುಕಾ ಯಲ್ಲಮ್ಮದೇವಿ ಪಲ್ಲಕ್ಕಿ ಉತ್ಸವವು ಕುಂಭಮೇಳ, ಜೋಗಮ್ಮಗಳ ಜೌಡಕಿ ಕುಣಿತ, ಡೊಳ್ಳು ಹಾಗೂ ತಳೇವಾಡದ ಹಣಮಂತ ಭಜಂತ್ರಿಯವರ ಕರಡಿ ಮಜಲು ತಂಡದೊಂದಿಗೆ ಹೊರಟು ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಬಸವೇಶ್ವರ ದೇವಸ್ಥಾನದ ಬಸವ ತೀರ್ಥ ಬಾವಿಯಲ್ಲಿ ಗಂಗಸ್ಥಳ ಪೂಜೆ ಮುಗಿಸಿಕೊಂಡ ನಂತರ ಪ್ರಮುಖ ಬೀದಿಗಳ ಮೂಲಕ ದೇವಸ್ಥಾನಕ್ಕೆ ಆಗಮಿಸಿತು. ಪಲ್ಲಕ್ಕಿ ಉತ್ಸವವು ದೇವಸ್ಥಾನಕ್ಕೆ ಆಗಮಿಸಿದ ನಂತರ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯ ಹಾಗೂ ತೊಟ್ಟಿಲು ಕಾರ್ಯಕ್ರಮ ಜರುಗಿತು.
ಪಲ್ಲಕ್ಕಿ ಉತ್ಸವದಲ್ಲಿ ಶರಣಪ್ಪ ಬೆಲ್ಲದ, ಬಸವರಾಜ ಟಕ್ಕಳಕಿ, ಹಣಮಂತ ಹತ್ತಿ, ಮಹಾಂತೇಶ ಹಂಜಗಿ, ಬಸವರಾಜ ಕಾಮನಕೇರಿ, ರಮೇಶ ಪವಾರ, ಸಂಗಮೇಶ ದೊಡ್ಡಮನಿ, ಕೊಟೆಪ್ಪ ಬಿರಾದಾರ, ಮಹೇಶ ಸಾಲವಾಡಗಿ, ಭೀಮು ಗೊಳಸಂಗಿ, ಶಿವು ಜೀರ, ಭೀಮಶಿ ಮದರಕಿ, ಲಕ್ಷ್ಮೀಬಾಯಿ ಬೆಲ್ಲದ, ಉಮಕ್ಕ ಹತ್ತಿ ಸೇರಿದಂತೆ ಇತರರು ಭಾಗವಹಿಸಿದ್ದರು. ಭಕ್ತರಿಗೆ ಅನ್ನಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
ಜಾತ್ರಾಮಹೋತ್ಸವದಂಗವಾಗಿ ರಾಯಭಾಗ ತಾಲೂಕಿನ ಆಲಖನೂರಿನ ಮಲ್ಲಿಕಾರ್ಜುನ ನಾಟ್ಯ ಸಂಘದಿಂದ ಮಗ ಹೋದರೂ ಮಾಂಗಲ್ಯ ಬೇಕು ಎಂಬ ಸಾಮಾಜಿಕ ನಾಟಕ ಪ್ರದರ್ಶನಗೊಂಡಿತು.
Subscribe to Updates
Get the latest creative news from FooBar about art, design and business.
Related Posts
Add A Comment

