ವಿಶೇಷಚೇತನರಿಗೆ ಉದ್ಯೋಗ ನೀಡಿಕೆ :ತಿಕೋಟಾ ತಾಲೂಕು ಮುಂಚೂಣಿ
ತಿಕೋಟಾ: ತಾಲೂಕಿನ ಬಿಜ್ಜರಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯ ಮಾಹಿತಿ, ಶಿಕ್ಷಣ ಮತ್ತು ಸಂವಹನ ಕಾರ್ಯಕ್ರಮದಡಿ ಗ್ರಾಮ ಪಂಚಾಯತಿ ವತಿಯಿಂದ ಜರುಗಿದ ರೋಜಗಾರ್ ದಿವಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ ತಾಲೂಕು ಪಂಚಾಯತಿಯ ಸಹಾಯಕ ನಿರ್ದೇಶಕ ಶೋಭಕ್ಕ ಶಿಳೀನ ಅವರು ಮಾತನಾಡಿದರು.
ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಬಿಜ್ಜರಗಿ ಗ್ರಾಮದಲ್ಲಿ ಸುಮಾರು ೨೫ಕ್ಕೂ ಅಧಿಕ ಜನ ವಿಶೇಷಚೇತನರು ಕೂಲಿ ಕೆಲಸ ನಿರ್ವಹಿಸಿ, ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿಯೇ ವಿಶೇಷಚೇತನರಿಗೆ ಉದ್ಯೋಗ ನೀಡಿಕೆಯಲ್ಲಿ ತಿಕೋಟಾ ತಾಲೂಕು ಮುಂಚೂಣಿಯಲ್ಲಿದೆ. ಯೋಜನೆಯಡಿ ತಾಲೂಕು ವ್ಯಾಪ್ತಿಯಲ್ಲಿ ೪೭೨ ವಿಶೇಷಚೇತನರಿಗೆ ಉದ್ಯೋಗ ಖಾತ್ರಿ ಕಾರ್ಡ್ ನೀಡಲಾಗಿದ್ದು, ಈಗಾಗಲೇ ೮೪ ಜನರು ಕೆಲಸ ನಿರ್ವಹಿಸಿದ್ದು, ೯೯೩ ಮಾನವ ದಿನಗಳನ್ನು ಸೃಜನೆ ಮಾಡಿದ್ದಾರೆ. ಜಿಲ್ಲೆಯಲ್ಲಿಯೇ ಅಧಿಕ ಮಾನವ ದಿನ ಸೃಜನೆಯಾಗಿದ್ದು ನಮ್ಮ ತಾಲೂಕಿನಲ್ಲಿಯೇ ಎಂದರು. ಇದರಲ್ಲಿ ಬಿಜ್ಜರಗಿಯಲ್ಲಿಯೇ ೬೦ ಜನ ನೋಂದಣಿ ಮಾಡಿಕೊಂಡಿದ್ದು ಅದರಲ್ಲಿ ೨೫ ಜನರಿಗೆ ಈಗಾಗಲೇ ಉದ್ಯೋಗ ನೀಡಲಾಗಿದ್ದು ಅವರೇ ೩೪೨ ಮಾನವ ದಿನಗಳನ್ನು ಸೃಜನೆ ಮಾಡಿರುತ್ತಾರೆ ಎಂದರು. ಮುಂದಿನ ದಿನಮಾನದಲ್ಲಿ ಎಲ್ಲ ವಿಕಲಚೇತನರಿಗೂ ನರೇಗಾ ಯೋಜನೆಯಡಿ ಕೆಲಸ ಒದಗಿಸಲು ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದರ ಜೊತೆಗೆ ಮಹಿಳಾ ಭಾಗವಹಿಸುವಿಕೆಯನ್ನು ಸಹ ನಾವು ಗಣನೀಯವಾಗಿ ಹೆಚ್ಚಿಸಿದ್ದು ಪ್ರಸ್ತುತ ನರೇಗಾ ಯೋಜನೆಯಡಿ ಸರಾಸರಿ ೬೦% ಮಹಿಳೆಯರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಾದ ಜೆ.ಎ.ದಶವಂತ ಅವರು ಮಾತನಾಡಿ, ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಯ ಅಧಿಕಾರಿಗಳ ಸಹಕಾರದಿಂದ ಬಿಜ್ಜರಗಿಯಲ್ಲಿ ಕಳೆದ ಮೂರು ವರ್ಷಗಳಿಂದ ವಿಶೇಷಚೇತನರಿಗೆ ಸಮಗ್ರ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಉದ್ಯೋಗ ನೀಡಲಾಗುತ್ತಿದೆ. ಈ ವರ್ಷ ಈಗಾಗಲೇ ೨೫ ಜನರಿಗೆ ಉದ್ಯೋಗ ನೀಡಲಾಗಿದ್ದು, ಬಾಕಿ ಉಳಿದಿರುವ ವಿಶೇಷಚೇತನರಿಗೂ ಉದ್ಯೋಗ ನೀಡುವ ಪ್ರಯತ್ನದಲ್ಲಿದ್ದೇವೆ. ಶೀಘ್ರದಲ್ಲಿಯೇ ೧೦೦% ವಿಶೇಷಚೇತನರಿಗೆ ಉದ್ಯೋಗ ನೀಡುವ ಗುರಿ ಹೊಂದಲಾಗಿದೆ ಎಂದರು.
ಜೊತೆಗೆ ಮಹಿಳೆಯರಿಗೂ ಈ ಯೋಜನೆಯಡಿ ಹಲವಾರು ಅವಕಾಶಗಳಿದ್ದು, ಅವರಿಗೂ ಮಹಿಳಾ ಸಂಘದ ಸಭೆ, ಮನೆ-ಮನೆ ಭೇಟಿಯಂತಹ ವಿಶೇಷ ಐಇಸಿ ಚಟುವಟಿಕೆಗಳ ಮೂಲಕ ಜಾಗೃತ್ತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ವಿಶೇಷ ಚೇತನ ಫಲಾನುಭವಿ ಹಾಗೂ ಪದವೀಧರರಾದ ತೇಜಪ್ಪ ತೋಳೆಯವರು ಮಾತನಾಡಿ, ನಾನು ನನ್ನ ಜೀವನದ ಸಾರ್ಥಕತೆಗೊಸ್ಕರ ಪದವಿ (ಬಿಎ, ಡಿ.ಇಡಿ) ಪಡೆದರು ಸಹಿತ ನನಗೆ ಯಾವದೇ ಉದ್ಯೋಗ ಸಿಕ್ಕಿರಲಿಲ್ಲ. ಅಲ್ಪ ಅವಧಿಗೆ ಸಿಕ್ಕರೂ ಸಹಿತ ಅವ್ಯಾವು ನನ್ನ ಆರ್ಥಿಕ ಸ್ಥಿತಿಯನ್ನು ಹೆಚ್ಚಿಸಲಿಲ್ಲ. ಇದರಿಂದ ಮನನೊಂದು, ತಂದೆಯಿಂದ ದುಡಿಸಿ ಮನೆಯಲ್ಲಿ ಕುಳಿತು ತಿಂದು-ತಿಂದು ಜೀವನದಲ್ಲಿ ತುಂಬಾ ತಾತ್ಸಾರ ಉದ್ಧವಿಸಿತು. ಪ್ರಸ್ತುತ ನರೇಗಾ ಯೋಜನೆಯಡಿ ವರ್ಷಕ್ಕೆ ೧೦೦ ದಿನ ಕೆಲಸ ಹಾಗೂ ಪ್ರತಿ ದಿನ ೩೪೯ ಕೂಲಿ ಮೊತ್ತ ಸಿಗುವುದು ಖಾತ್ರಿಯಾದ ಬಳಿಕ ನನ್ನ ಜೀವನದಲ್ಲಿ ಹೊಸ ಚೈತನ್ಯ ತುಂಬಿದೆ. ಕಳೆದ ೦೩ ವರ್ಷದಿಂದ ಈ ಯೋಜನೆಯಡಿ ಕೆಲಸ ನಿರ್ವಹಿಸುತ್ತಿದ್ದೇನೆ. ಪ್ರಸ್ತುತ ನನಗೆ ನನ್ನ ಕುಟುಂಬ ನಿರ್ವಹಣೆ, ನನ್ನ ವೈಯಕ್ತಿಕ ಖರ್ಚು, ಮಕ್ಕಳ ವೈದ್ಯಕೀಯ ಖರ್ಚು & ಇನ್ನೀತರ ಖರ್ಚಿಗೆ ಈ ಕೂಲಿ ಹಣ ತುಂಬಾ ಸಹಕಾರಿಯಾಗಿದೆ. ಈಗ ನಾನು ಯಾರ ಹಂಗಿಲ್ಲದೇ ಸುಖಕರ ಜೀವನ ಸಾಗಿಸುತ್ತಿದ್ದೇನೆ. ಅಷ್ಟೇ ಅಲ್ಲದೇ, ನರೇಗಾದಲ್ಲಿ ವಿಕಲಚೇತನರಿಗೆ ಕೆಲಸ ನೀಡುವ ಜೊತೆ ಕೆಲಸದಲ್ಲಿ ವಿನಾಯಿತಿ ನೀಡಿರುವುದು ನಮಗೆ ತುಂಬಾ ಖುಷಿಯಾಗಿದೆ. ಕೆಲಸದ ಸ್ಥಳದಲ್ಲಿ ನೆರಳಿನ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಪ್ರಥಮ ಚಿಕಿತ್ಸೆ ಸೇರಿ ಎಲ್ಲ ಸೌಲಭ್ಯಗಳನ್ನು ಒದಗಿಸಿರುವದರಿಂದ ನಮ್ಮಲ್ಲಿ ಕೆಲಸ ಮಾಡಲು ಹೆಚ್ಚಿನ ಆಸಕ್ತಿ ಬರುತ್ತಿದೆ. ಈ ಯೋಜನೆಯಡಿ ನಮ್ಮನ್ನು ಗುರುತಿಸಿ ಉದ್ಯೋಗ ನೀಡಿದ ಎಲ್ಲರಿಗೂ ಧನ್ಯವಾದಗಳು ಎಂದರು.
ಈ ಸಂದರ್ಭದಲ್ಲಿ ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ತಾಂತ್ರಿಕ ಸಹಾಯಕ ಅಭಿಯಂತರ ಶ್ರೀಧರ ಸಾವಳಗಿ, ಬಿ.ಎಫ್.ಟಿ ಸಿದ್ರಾಯ ದಾಶ್ಯಾಳ, ಕಾಯಕ ಬಂಧು ವಿನಾಯಕ ಕುಂಬಾರ, ವಿ.ಆರ್.ಡಬ್ಲೂ ನೀಲವ್ವ ತೋಳೆ , ಕೂಲಿಕಾರರು & ಗ್ರಾಮ ಪಂಚಾಯತಿ ಸಿಬ್ಬಂದಿಗಳು ಸೇರಿ ಇತರರು ಹಾಜರಿದ್ದರು.

