ಕಾಲೇಜುಗಳಲ್ಲಿ ರೋಸ್ಟರ ಪ್ರಕಾರ ಪ್ರವೇಶ ವಿವರಕ್ಕೆ ದವಿಪ ಆಗ್ರಹ
ವಿಜಯಪುರ: ೨೦೨೪-೨೫ ನೇ ಶೈಕ್ಷಣಿಕ ಸಾಲಿನ ಪ್ರಥಮ ಪಿಯುಸಿ ಹಾಗೂ ದ್ವಿತೀಯ ಪಿಯುಸಿ ತರಗತಿಗಳಿಗೆ ಪ್ರವೇಶ ಪ್ರಾಂರಭವಾಗಿದ್ದು, ಬಹುತೇಕ ಖಾಸಗಿ ಅನುದಾನರಹಿತ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಪ್ರವೇಶ ಪಡೆದ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರದರ್ಶನ ಮಾಡದೇ ಈಗಾಗಲೇ ಪ್ರವೇಶ ಮುಕ್ತಾಯವಾಗಿವೆ, ಸೀಟ್ ಭರ್ತಿಯಾಗಿವೆ ಎಂಬ ಸಿದ್ದ ಉತ್ತರವನ್ನು ಶಿಕ್ಷಣ ಸಂಸ್ಥೆಗಳು ನೀಡುತ್ತಿದ್ದು, ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಅನುಭವಿಸುವಂತಾಗಿದೆ ಎಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಆಕ್ರೋಶ ವ್ಯಕ್ತಪಡಿಸಿದೆ.
ಕೆಲ ಖಾಸಗಿ ಶಿಕ್ಷಣ ಸಂಸ್ಥೆಗಳು ಇಲಾಖೆಯ ಸುತ್ತೋಲೆಯ ಪ್ರಕಾರ ಪ್ರವೇಶ ಪ್ರಕ್ರಿಯೆ ನಡೆಸದೆ ಶಿಕ್ಷಣವನ್ನು ವ್ಯಾಪಾರೀಕರಣ ಮಡಿಕೊಂಡಂತೆ ವರ್ತಿಸುತ್ತಿದ್ದಾರೆ. ಇಲಾಖೆಯ ನಿಯಮಾನುಸಾರ ರೋಸ್ಟರ್ ಪಾಲಿಸದೆ. ನಿಯಮ ಮೀರಿ ಬೇಕಾಬಿಟ್ಟಿಯಾಗಿ ಡೊನೇಷನ್ ಹೆಸರಿನಲ್ಲಿ ಹಣ ಸುಲಿಗೆ ಮಾಡುತ್ತಿದ್ದಾರೆ. ಇದರಿಂದ ದಲಿತ, ಹಿಂದುಳಿದ, ಅಲ್ಪಸಂಖ್ಯಾತ, ಸಾಮಾನ್ಯ ವರ್ಗಗಳ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಘಟಕ ಮುಖಂಡರೊಳಗೊಂಡು ನಿಯೋಗವು ಇಂದು ಜಿಲ್ಲಾ ಉಪನಿರ್ದೇಶಕರು ಶಾಲ ಶಿಕ್ಷಣ ಇಲಾಖೆ (ಪದವಿ ಪೂರ್ವ) ಅಧಿಕಾರಿಗಳಿಗೆ ಭೇಟಿ ಆಗ್ರಹಿಸಿದೆ. ನಿಯೋಗವು, ಈ ವಿಷಯವನ್ನು ಗಂಬೀರವಾಗಿ ಪರಿಗಣಿಸಿ ಜಿಲ್ಲೆಯ ಎಲ್ಲ ಖಾಸಗಿ ಅನುದಾನರಹಿತ ಪದವಿ ಪೂರ್ವ ಕಾಲೇಜುಗಳಿಗೆ ಕಟ್ಟುನಿಟ್ಟಿನ ಸುತ್ತೋಲೆಯನ್ನು ಹೊರಡಿಸುವ ಮೂಲಕ ಸೂಕ್ತ ಕ್ರಮಕೈಗೊಳ್ಳಲು ಜಿಲ್ಲಾ ಉಪನಿರ್ದೇಶಕರು ಶಾಲ ಶಿಕ್ಷಣ ಇಲಾಖೆ (ಪದವಿ ಪೂರ್ವ) ಇವರಿಗೆ ಮನವಿ ನೀಡಿ ಆಗ್ರಹಿಸಲಾಗಿದೆ.
ಈ ವೇಳೆ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ, ಮುಖಂಡರಾದ ಆನಂದ ಮುದೂರ, ಮಾದೇಶ ಛಲವಾದಿ, ಯಾಶಿನ್ ಇನಾಮದಾರ, ಯುವರಾಜ್ ಓಲೇಕಾರ್, ಶಂಕರ್, ಅಜಯ್ ರಾಥೋಡ್, ಮಹಾಂತೇಶ್ ಛಲವಾದಿ, ಯಮನುರಿ ಮಾದರ್, ಮುಂತಾದವರು ಉಪಸ್ಥಿತರಿದ್ದರು.

