ವಿಜಯಪುರ: ಇತ್ತೀಚಿಗೆ ಯಾವ ಕೊಲೆ ಪ್ರಕರಣಗಳಲ್ಲಿ ಮುಸ್ಲಿಂ ಆರೋಪಿ ಇದ್ದರೆ ಮಾತ್ರ ಪ್ರತಿಭಟನೆ ಮಾಡುವ ಮೂಲಕ ಬಿಜೆಪಿ ಹೆಣಗಳ ಮೇಲೆಯೂ ರಾಜಕಾರಣ ಮಾಡುವ ಕೆಟ್ಟ ಪರಂಪರೆಗೆ ಮುಂದಾಗಿದೆ ಎಂದು ಅಹಿಂದ ವಿಜಯಪುರ ಜಿಲ್ಲಾ ಘಟಕದ ಧುರೀಣ ಎಸ್.ಎಂ. ಪಾಟೀಲ ಗಣಿಹಾರ
ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ
ಅಂಜಲಿ ಅಂಬಿಗೇರ ಅವರ ಸಾವನ್ನು ಖಂಡಿಸಿ ಬಿಜೆಪಿ ಏಕೆ ಧರಣಿ ನಡೆಸುತ್ತಿಲ್ಲ, ಆಕ್ರೋಶ ಹೊರಹಾಕುತ್ತಿಲ್ಲ, ಅವರು ಹಿಂದೂಗಳು ಅಲ್ಲವೇ? ಅಲ್ಲಿ ಮುಸ್ಲಿಂ ಆರೋಪಿ ಇಲ್ಲ ಎನ್ನುವ ಕಾರಣಕ್ಕೆ ಈ ರೀತಿ ಮಾಡಲಾಗುತ್ತಿದ್ದೆಯೇ? ಎಂದು ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಅಂಜಲಿ ಅಂಬಿಗೇ, ನೇಹಾ ಹಿರೇಮಠ, ರುಕ್ಸಾನಾ, ಮಂಗಳೂರು ಸೇರಿದಂತೆ ಅನೇಕ ಯುವತಿಯರ ಕೊಲೆ ನಡೆದಿರುವುದು ನೋವಿನ ಸಂಗತಿ, ಅಪರಾಧಿಗಳಿಗೆ ಜಾತಿ ಇಲ್ಲ, ಅಪರಾಧಿಗಳು ಅಪರಾಧಿಗಳೇ ಎಂದರು.
ಮಣಿಪುರದಲ್ಲಿ ಯುವತಿ ಮೇಲೆ ಅಮಾನವೀಯವಾದ ದೌರ್ಜನ್ಯ ನಡೆದರೂ ಐವತ್ತಾರೂ ಇಂಚಿನ ಪ್ರಧಾನಿ ತುಟಿ ಪಿಟಕ್ ಎನ್ನಲಿಲ್ಲ, ದೇಶ ಕಂಡ ಅತ್ಯಂತ ಅಶಕ್ತ ಪ್ರಧಾನಿ ಮೋದಿ ಎಂದರು.
ನೇಹಾ ಹಿರೇಮಠ ಅವರ ಕೊಲೆ ಖಂಡನೀಯ, ಅವರ ಮನೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭೇಟಿ ನೀಡಿ ಸಾಂತ್ವನ ನೀಡಿದರು. ಆದರೆ ಅಂಜಲಿ ಅವರ ಮನೆಗೆ ಏಕೆ ಭೇಟಿ ನೀಡಲಿಲ್ಲ ಎಂದರು.
ಅಹಿಂದ ಮುಖಂಡರಾದ ಸೋಮನಾಥ ಕಳ್ಳೀಮನಿ ಮಾತನಾಡಿ, ಕೊಲೆಗೀಡಾಗಿರುವ ಅಂಜಲಿ ಅಂಬಿಗೇರ ಅವರ ಕುಟುಂಬ ಅತ್ಯಂತ ಬಡತನದಿಂದ ಕೂಡಿದೆ, ಮನೆ ಕೊಡುವುದರ ಜೊತೆಗೆ ಅವರ ಕುಟುಂಬದ ಸದಸ್ಯರೊಬ್ಬರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದರು.
ಮುಸ್ಲಿಂರು ಆರೋಪಿಯಾಗಿದ್ದರೆ ಪ್ರತಿಭಟನೆ, ಆಕ್ರೋಶ, ಆದರೆ ಹಿಂದೂ ಆರೋಪಿಯಾಗಿದ್ದರೆ ಬಿಜೆಪಿ ಪಾಲಿಗೆ ಬಾರಾ ಖೂನ್ ಮಾಫ್ ಎಂದು ಆಕ್ರೋಶ ಹೊರಹಾಕಿದರು. ಟೀಕೆ ಬರಬಹುದು ಎಂಬ ಕಾರಣಕ್ಕೆ ವಿಜಯಪುರ ನಗರ ಶಾಸಕ ಯತ್ನಾಳ ಅಂಜಲಿ ಅವರ ಮನೆಗೆ ಕಾಟಾಚಾರಕ್ಕೆ ಹೋಗಿದ್ದಾರೆ ಎಂದರು.
ಅಹಿಂದ ಮುಖಂಡ ಶಿವಾಜಿ ಮೆಟಗಾರ ಮಾತನಾಡಿ, ಕೊಲೆಗಡುಕರ ಮೇಲೆ ಕಠಿಣ ಕ್ರಮ ನಡೆಯಬೇಕು, ಪ್ರೀತಿ ದೊರಕಲಿಲ್ಲ ಎಂದು ಯುವತಿಯರಿಗೆ ಕೊಲೆ ಮಾಡಿದ ಕೊಲೆಗಡುಕರಿಗೆ ಎನಕೌಂಟರ್ ಮಾಡಿ ಬಿಸಾಕಬೇಕು ಎಂದರು.
ಆದರೆ ಕೊಲೆಗೀಡಾಗಿರುವವರು ಹಿಂದುಳಿದ ವರ್ಗಗಳಿಗೆ ಸೇರಿದ್ದರೆ ಪ್ರತಿಭಟನೆಯ ದೊಡ್ಡ ಧ್ವನಿ ಮೊಳಗುವುದೇ ಇಲ್ಲ ಎಂದು ವಿಷಾದಿಸಿದರು.
ಕೃಷ್ಣಾ ಕಾಡಾ ಮಾಜಿ ಅಧ್ಯಕ್ಷ ಜಕ್ಕಪ್ಪ ಯಡವೆ, ನಾಗರಾಜ ಲಂಬು, ಡಾ.ರವಿ ಬಿರಾದಾರ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

