ದೇವರಹಿಪ್ಪರಗಿ: ಗ್ರಾಮೀಣ ಪ್ರದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟ ತಡೆದು ಬಡ ಕುಟುಂಬಗಳ ಸುಗಮ ಸಂಸಾರ ನಿರ್ವಹಣೆಗೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ ಮಹಿಳೆಯರು ಹಾಗೂ ಗ್ರಾಮಸ್ಥರು ತಹಶೀಲ್ದಾರ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.
ಪಟ್ಟಣದ ತಹಶೀಲ್ದಾರ ಕಚೇರಿಗೆ ಮಂಗಳವಾರ ಆಗಮಿಸಿದ ದೇವೂರ, ದೇವೂರ ಎಲ್.ಟಿ ೧ ಮತ್ತು ೨ ರ ಮಹಿಳೆಯರು ಗ್ರಾಮ ಹಾಗೂ ತಾಂಡಾಗಳಲ್ಲಿ ಮಾಡಲಾಗುತ್ತಿರುವ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಮಹಿಳಾ ಅಧ್ಯಕ್ಷೆ ರೇಣುಕಾ ಪಾಟೀಲ ಮಾತನಾಡಿ, ದೇವೂರ ಗ್ರಾಮ ಮತ್ತು ತಾಂಡಾಗಳಲ್ಲಿ ಅಕ್ರಮವಾಗಿ ಸಾರಾಯಿ ತಯಾರಿಸಿ ಸಿದ್ಧಾರೂಢ ಬೋರಗಿ, ಅನಸೂಬಾಯಿ ಮಾದೇವಪ್ಪ ಸುಂಬಡ ಮಾಲೀಕತ್ವದ ಕಿರಾಣಿ ಅಂಗಡಿ, ಅಪ್ಪಾಸಾಹೇಬಗೌಡ ಪಾನ್ ಶಾಪ್, ಬಾಸು ರಾಠೋಡ, ಶಂಕರ ರಾಠೋಡ ಸಂತೋಷ ರಾಠೋಡರ ದಾಬಾಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಪ್ರಶ್ನೀಸಿದರೆ ನೀವಾರು ಕೇಳುವವರು ಎಂದು ನಮಗೆ ದಬಾಯಿಸುತ್ತಾರೆ. ಅಕ್ರಮ ಮದ್ಯ ಮರಾಟದ ಫಲವಾಗಿ ಸ್ಥಳೀಯ ೮ ರಿಂದ ೧೦ ವರ್ಷದ ಮಕ್ಕಳು ಕುಡಿಯುವ ಚಟಕ್ಕೆ ಅಂಟಿಕೊಂಡಿದ್ದಾರೆ ಇದರಿಂದ ಮನೆ ನಿರ್ವಹಣೆ ಮಾಡುವ ಮಹಿಳೆಯರು ಭಯಭೀತರಾಗಿದ್ದಾರೆ. ಮನೆಯಲ್ಲಿ ಗಂಡ ಮತ್ತು ಮಕ್ಕಳ ಕುಡಿಯುವ ಚಟಕ್ಕೆ ಮಹಿಳೆಯರು ಮಂಗಳಸೂತ್ರ, ಕಾಲುಂಗರ ಸೇರಿದಂತೆ ಆಭರಣಗಳನ್ನು ಕಳೆದುಕೊಳ್ಳುವಂತಾಗಿದೆ. ಕೂಡಲೇ ತಾಲ್ಲೂಕಾಡಳಿತ ಈ ಕುರಿತು ಕ್ರಮ ವಹಿಸುವಂತೆ ಆಗ್ರಹಿಸಿದರು.
ದಲಿತ ಸಂಘರ್ಷ ಸಮಿತಿ ಬೆಳಗಾವಿ ವಿಭಾಗೀಯ ಸಂಚಾಲಕ ರಾವುತ ತಳಕೇರಿ ಮಾತನಾಡಿ, ಅಕ್ರಮ ಮದ್ಯ ಮಾರಾಟ ಕೇವಲ ಈ ಗ್ರಾಮಗಳಲ್ಲಿ ಮಾತ್ರ ನಡೆಯುತ್ತಿಲ್ಲ. ಪಟ್ಟಣ, ಪಡಗಾನೂರ ಸೇರಿದಂತೆ ಹಲವು ಗ್ರಾಮಗಳಲ್ಲಿ ನಿರ್ಭಯವಾಗಿ ಜರುಗುತ್ತಿದೆ. ಇದಕ್ಕೆ ಕಡಿವಾಣ ಹಾಕದಿದ್ದರೇ ಗ್ರಾಮೀಣ ಬಡಕುಟುಂಬಗಳು ಹಾಳಾಗುವುದರಲ್ಲಿ ಸಂದೇಹವಿಲ್ಲ. ಆದ್ದರಿಂದ ಅಬಕಾರಿ ಇಲಾಖೆ ಈ ಕುರಿತು ತುರ್ತು ಕ್ರಮವಹಿಸಬೇಕು ಎಂದರು. ನಂತರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ತಹಶೀಲ್ದಾರ ಅಬಕಾರಿ ಇಲಾಖೆಯೊಂದಿಗೆ ಸೇರಿ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಮಾದೇವಿ ಬಿರಾದಾರ, ಮಲಕಮ್ಮ ಪಾಟೀಲ, ಚಂದಮ್ಮಾ ಬಿರಾದಾರ, ಸುಂದ್ರಾಬಾಯಿ ಪಾಟೀಲ, ಶೋಭಾ ಬಿರಾದಾರ, ಅವ್ವಮ್ಮ ಪಾಟೀಲ, ಮಂಜುಳಾ ಬಿರಾದಾರ, ಗೌರಾಬಾಯಿ ಗೊಡ್ಯಾಳ, ಪಾರ್ವತಿ ಪಾಟೀಲ, ಬಿಸ್ಮಿಲ್ಲಾ ನದಾಫ್, ಮಹಾದೇವಿ ಪಾಟೀಲ, ಹಣಮಂತ್ರಾಯಗೌಡ ಪಾಟೀಲ, ಶಿವಪುತ್ರಗೌಡ ಪಾಟೀಲ, ಎಸ್.ಎಸ್.ಸಜ್ಜನ, ಎಸ್.ಕೆ.ಉಪ್ಪಾರ, ಸಿದ್ಧನಗೌಡ ಬಿರಾದಾರ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

