೫ ನೇ ದಿನಕ್ಕೆ ಕಾಲಿಟ್ಟ ಜಂಬಗಿ(ಆ), ಹುಣಶ್ಯಾಳ(ಮಾದಾಳ) ಕೆರೆ ನೀರು ತುಂಬಿಸುವ ಸತ್ಯಾಗ್ರಹ
ವಿಜಯಪುರ : ಜಂಬಗಿ (ಆ), ಮಾದಾಳ, ಹುಣಶ್ಯಾಳ ಕೆರೆಗೆ ನೀರು ಹರಿಸಬೇಕೆಂದು ಕಳೆದ ೪ ದಿನಗಳಿಂದ ನಡೆಯುತ್ತಿರುವ ಅನಿರ್ಧಿಷ್ಟ ಧರಣಿ ಸತ್ಯಾಗ್ರಹವು ಸೋಮವಾರ ೫ನೇ ದಿನಕ್ಕೆ ಕಾಲಿಡಲಾಗಿದೆ. ಜಿಲ್ಲಾಡಳಿತ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಇಲ್ಲಿಯವರೆಗೆ ಕೆರೆ ನೀರು ತುಂಬದಿರುವ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರೈತರೊಂದಿಗೆ ಹೋರಾಟ ನಡೆಸುತ್ತಿದ್ದು, ಕೂಡಲೇ ನೀರು ಹರಿಸಬೇಕು ಇಲ್ಲ ಹೋರಾಟ ನಿಲ್ಲಿಸುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ರೈತ ಸಂಘದ ವಿಜಯಪುರ ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ ಅವರು ಮಾತನಾಡುತ್ತಾ ಜಂಬಗಿ ಕೆರೆಗೆ ನೀರು ತುಂಬಿಸಬೇಕು, ಇಲ್ಲವಾದಲ್ಲಿ ಬುಧವಾರದಂದು ನೂರಾರು ರೈತರೊಂದಿಗೆ ಜಿಲ್ಲಾಧಿಕಾರಿಗಳ ಕಛೇರಿ ಮುತ್ತಿಗೆ ಹಾಕಿ ಜಂಬಗಿ ಕೆರೆಗೆ ನೀರು ತುಂಬಿಸಬೇಕು ಎಂದು ಆಗ್ರಹಿಸುತ್ತೇವೆ. ನೀರು ಹರಿಸುವವರೆಗೂ ಅಲ್ಲಿಯೇ ಕುಳಿತು ಮಕ್ಕಳು, ಮಹಿಳೆಯರು ಹಾಗೂ ಧನಕರುಗಳೊಂದಿಗೆ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದರು.
ಆಹೇರಿ ಗ್ರಾ.ಪಂ ಮಾಜಿ ಅಧ್ಯಕ್ಷರಾದ ಬಸವರಾಜ ಗಾಣಗೇರ ಅವರು ಮಾತನಾಡುತ್ತಾ, ಕೆರೆಗೆ ನೀರು ಹರಿಸಬೇಕೆಂದು ಈಗಾಗಲೇ ಸಾಕಷ್ಟು ಭಾರಿ ಮನವಿ ನೀಡಲಾಗಿದ್ದು, ಅಧಿಕಾರಿಗಳು ಅಲ್ಲಲ್ಲಿ ನೀರು ಸಾಕಷ್ಟು ಪೋಲಾಗುತ್ತಿದ್ದು, ಅವುಗಳನ್ನು ಬಂದ್ ಮಾಡಿದರೆ ನೇರವಾಗಿ ಜಂಬಗಿ ಕೆರೆಗೆ ನೀರು ಬರುವುದರಲ್ಲಿ ಸಂಶಯವಿಲ್ಲ, ಆದರೆ ಅಧಿಕಾರಿಗಳ ಬೇಜವ್ದಾರಿಯಿಂದಾಗಿ ಮಧ್ಯದಲ್ಲಿ ನೀರು ಪೋಲಾಗುತ್ತಿದೆ, ಕೂಡಲೇ ಅಧಿಕಾರಿಗಳು ಅದನ್ನು ಬಂದ್ ಮಾಡಿಸಬೇಕು, ಆದರೆ ಪ್ರಭಾವಿಗಳು ತಮ್ಮ ಪ್ರಭಾವದಿಂದ ನೀರು ಬೀಡಿಸಿಕೊಳ್ಳುತ್ತಿದ್ದಾರೆ, ಇದನ್ನು ನಿಲ್ಲಿಸಬೇಕಾದ ಅಧಿಕಾರಿಗಳು ಸಬೂಬ ಹೇಳುತ್ತಾ ವೇಳೆ ಹಾಳು ಮಾಡುತ್ತಿದ್ದಾರೆ, ಅಂತವರ ವಿರುದ್ಧ ಕೂಡಲೇ ಕ್ರಮ ಕೈಕೊಂಡು ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಹಿರಿಯ ರೈತ ಹೋರಾಟಗಾರರಾದ ಗುರಪ್ಪ ಸೋಂಪುರ ಮಾತನಾಡುತ್ತಾ, ಜಂಬಗಿ ಸಮೀಪದ ಹುಣಶ್ಯಾಳ (ಮಾದಾಳ) ಕೆರೆಯೂ ಒಮ್ಮಿಯೂ ತುಂಬಿಲ್ಲ, ಈ ಕೆರೆಯನ್ನು ಅಧಿಕೃತವಾಗಿ ಕೆರೆ ನೀರು ತುಂಬುವ ಯೋಜನೆ ಯಡಿ ಸೇರಿಸಿ, ನೀರು ತುಂಬಿದರೆ ಈ ಭಾಗದ ಸಾಕಷ್ಟು ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಎಂದರು
ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ, ವಿಜಯಪುರ ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ, ಜಿಲ್ಲಾ ಸಂಚಾಲಕರಾದ ರಾಮನಗೌಡ ಪಾಟೀಲ, ಮಹಿಬೂಬ ಬಾಷಾ ಮನಗೂಳಿ, ಚನ್ನಪ್ಪ ತೇಲಿ, ಭೀಮಶಂಕರ ರಜಪೂರ, ಚನ್ನಪ್ಪ ವಾಡೇದ, ಸಿದ್ದು ತೇಲಿ, ಬಸವರಾಜ ಗುದಳೆ, ಸದಾಶಿವ ಕೊಣಸಿರಸಗಿ, ಸಂಗಮೇಶ ತೇಲಿ, ಪ್ರಭು ಕಾರಜೋಳ, ಸಾಯಬಣ್ಣ ಸಮಗೊಂಡ, ಕರೆಪ್ಪ ಸೋಲಾಪುರ, ಬಸವರಾಜ ಮಸಳಿ, ಸುಭಾಸ ಪೂಜಾರಿ, ಚನ್ನಪ್ಪ ಜಮಖಂಡಿ, ಸಂಗಮೇಶ ಜಮಖಂಡಿ, ಶ್ರೀಶೈಲ ದಿನ್ನಿ, ಪಾಂಡು ಗೊರನಾಳ, ಸಿದ್ದು ಕಾಪಸೆ, ಶ್ರೀಶೈಲ ಸಾಲಿ, ಅಮಿತ ಡಿಗ್ಗಾವಿ, ರಾಕೇಶ ಡೊಣೂರ, ರಾಮಸಿಂಗ ರಜಪೂತ, ಅನಮೇಶ ಜಮಖಂಡಿ, ಮಲ್ಲಿಕಾರ್ಜುನ ಬಳವಲ, ಬಸವರಾಜ ಹಡಪದ, ಮುತ್ತು ಕಂಬಾರ, ಯಲ್ಲಪ್ಪ ನಿವಳಖೇಡ, ಆದಮಸಾಬ ಡೋಣೂರ, ಶಿವಪದ್ಮಾ ತೋರವಿ, ಸೇರಿದಂತೆ ಅನೇಕರು ಇದ್ದರು.

