ಅಂತರಂಗದಾ ಮೃದಂಗ ನಾದ
ಮನದ ರಾಗದಿ ಬೆಸೆಯಿತು |
ಭಾವ ತಾಳಗಳ ಕಾವ್ಯ ಹೊಮ್ಮಿ
ಒಲವ ಗಾನಕೆ ನಾಂದಿಯಾಯ್ತು ||
ಮಧುರ ಪ್ರೀತಿ ಗಾನದೊನಲು
ಸವಿ ಸುಧೆಯನು ಸ್ಪುರಿಸಿತು |
ಉಲಿವ ಇಂಪಿನ ಪ್ರತಿ ಸ್ವರಕೂ
ಪ್ರೀತಿಯೊಲುಮೆ ಶೃತಿಯಾಯ್ತು ||
ಬೆರೆತ ಹೃದಯ ಬಿಗಿದ ಬಂಧ
ಬಿಡಿಸಲಾರದಂತೆ ಬೆರೆಯಿತು |
ಯಾವ ಜನ್ಮದ ಮೈತ್ರಿ ಇಂದು
ಜೀವದುಸಿರನು ಬೆರೆಸಿತು ||
ಚೈತ್ರ ಬನದಿ ಕೋಗಿಲೆಯ ಉಲಿ
ಇಂಪು ಇಂಪಾಗಿ ಹೊಮ್ಮಿತು |
ನಿನ್ನ ಇರುವಲಿ ಹೊಸೆದ ಹಾಡಲಿ
ಪ್ರೇಮ ಭಾಷ್ಯವ ಬರೆಸಿತು ||
ಮಾಮರವು ಚಿಗುರಿ ಕಂಪ ಬೀರಿ
ಪರಿಮಳವ ಸುತ್ತಲೂ ಹರಡಿತು |
ಬದುಕ ಪಯಣದಿ ಜೊತೆಯಾಗಿ
ಸಾಗುವ ಬಯಕೆಯ ತಂದಿತು ||
ಕಡಲ ಮೊರೆತದ ಸದ್ದು ಕೇಳುತ
ಬಾನು ಬೆರೆಯಲು ಬಯಸಿತು |
ಮುಗಿಲ ಮರೆಯ ಚಂದ್ರ ಬಿಂಬ
ಬೆಳದಿಂಗಳ ಸುರಿಸುತ ನಕ್ಕಿತು ||
ಕನಸುಗಳ ಹಾದಿಯಲಿ ಹೃದಯ
ಹೊಸ ಕಲ್ಪನೆಗಳನು ಚಿತ್ರಿಸಿತು |
ಒಲವಿನೊಡಲ ಹರುಷದೊನಲು
ನಿನ್ನೊಲುಮೆಗೆ ಸಾಕ್ಷಿಯಾಯ್ತು ||