ನ್ಯಾಯಾಧೀಶ ಸಂತೋಷ ಎಸ್ ಕುಂದರ್ ರಿಗೆ ಕಾವ್ಯಾರ್ಪಣೆ ಮೂಲಕ ಬೀಳ್ಕೊಡುಗೆ
ವಿಜಯಪುರ: ಸೊನ್ನೆಯಿಂದಲೇ ಪರಿಶ್ರಮಿಸಿ ಆರಂಭಿಸಿದ ಕಾರ್ಯ ನೂರಕ್ಕೆ ನೂರು ಯಶಸ್ವಿ ಆಗಲು ಸಾಧ್ಯವಾಗುತ್ತದೆ ಎಂದು ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ನ್ಯಾಯಾಧೀಶ ಸಂತೋಷ ಎಸ್ ಕುಂದರ್ ಅವರು ಹೇಳಿದರು.
ನ್ಯಾಯಾಧೀಶರಾದ ಕುಂದರ ಅವರು ವರ್ಗಾವಣೆ ಆಗಿರುವ ನಿಮಿತ್ಯ ಅವರಿಗೆ ಇಲ್ಲಿನ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರೊಬೊನೊ, ಪೆನಲ್, ಡಿಫೆನ್ಸ್ ಕೌಂಸಿಲ್, ಮದ್ಯಸ್ಥಗಾರ ವಕೀಲರು ಇವರುಗಳ ಸಂಯುಕ್ತ ಆಶ್ರಯದಲ್ಲಿ ಕಾನೂನು ಸೇವಾ ಪ್ರಾಧಿಕಾರದ ಸಭಾಂಗಣದಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಕಾವ್ಯಾರ್ಪಣೆ ಮತ್ತು ಸನ್ಮಾನ ಸ್ವೀಕರಿಸಿ ಅವರು ಮಾತನಾಡುತ್ತಿದ್ದರು.
ಸಮಾಜದಲ್ಲಿರುವ ವಿವಿಧ ಕಾಯಕ ನಿರತರು ತಮ್ಮ ಕಾರ್ಯವನ್ನು ಪ್ರಮಾಣಿಕವಾಗಿ ನೂರಕ್ಕೆ ನೂರರಷ್ಟು ಅದರಲ್ಲೇ ತಲ್ಲೀನರಾಗಿ ಶ್ರಮಿಸಿದರೆ ಯಶಸ್ಸು ಹುಡುಕಿಕೊಂಡು ಬರುತ್ತದೆ, ನಾವು ಮಾಡುವ ಕೆಲಸ ಸಮಾಜಕ್ಕೆ ದಾರಿ ದೀಪವಾಗಬೇಕು ಎಂದ ಅವರು ವಿಜಯಪುರದ ಜನರ ಹೃದಯ ವಿಶಾಲತೆ ಮೆಚ್ಚುವಂತಹದ್ದು, ಇಲ್ಲಿಯ ಉತ್ತಮ ಸಂಸ್ಕಾರ ಶ್ಲಾಘನಿಯ ಎಂದು ಬಣ್ಣಿಸಿದ ಅವರು ವಿಜಯಪುರ ಜಿಲ್ಲಾ ಕಾನೂನು ಸೇವ ಪ್ರಾಧಿಕಾರಕ್ಕೆ ಪ್ರೊಬೊನೊ ವಕಿಲರನ್ನು ಅಂದರೆ ಯಾವುದೇ ಗೌರವ ಧನವಿಲ್ಲದೇ ಉಚಿತವಾಗಿ ಕಾನೂನು ಸೇವೆ ಮಾಡುವ ಜನಸ್ನೇಹಿ [ಪ್ರೊಬೊನೊ] ವಕೀಲರನ್ನು ನನ್ನ ಕಾರ್ಯಾವಧಿಯಲ್ಲಿ ನೇಮಿಸಿದ್ದು, ಅದರಲ್ಲೂ ಹಿರಿಯ ನ್ಯಾಯವಾದಿ ಮಲ್ಲಿಕಾರ್ಜುನ ಭೃಂಗಿಮಠ ಅವರು ಜಿಲ್ಲೆಯಲ್ಲಿ ಪ್ರಥಮವಾಗಿ ಪ್ರೊಬೊನೊ ವಕೀಲರಾಗಿ ನೇಮಕವಾದ ವಕೀಲರಾಗಿದ್ದಾರೆ. ಅಲ್ಲದೇ ಇತರೇ ಇಬ್ಬರನ್ನು ಸಹ ನೇಮಿಸಲಾಗಿದ್ದು, ರಾಜ್ಯ ಕಾನೂನು ಸೇವಾ ಪ್ರಾಧಿಕಾರದಿಂದ ನೇಮಕಾತಿ ಮಾನ್ಯವಾಗಿದ್ದು ವಿಶೇಷವಾಗಿದೆ ಎಂದ ಅವರು ಜಿಲ್ಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ಜನಸ್ನೇಹಿ ಆಗಿ ಕಾರ್ಯ ನಿರ್ವಹಿಸಿದ್ದು ಜನರು ಸಹ ಉತ್ತಮ ಸಹಕಾರ ನೀಡಿದ್ದಾರೆ ಎಂದರು.
ಇನ್ನೋರ್ವ ಹಿರಿಯ ಶ್ರೇಣಿ ನ್ಯಾಯಾಧೀಶೆ ಶ್ರೀಮತಿ ಕೆ ಉಮಾ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿ, ವಿಜಯಪುರಕ್ಕೆ ಬರುವಾಗ ಇಲ್ಲಿನ ಭಾಷೆ ಮತ್ತು ಜನರ ಕುರಿತು ಸ್ವಲ್ಪ ಆತಂಕ ಮನದಲ್ಲಿತ್ತು ಆದರೆ ಇಲ್ಲಿ ಬಂದು ಮೂರು ವರ್ಷ ಸೇವೆ ಸಲ್ಲಿಸಿದ ನಂತರ ಇಲ್ಲಿನ ಜನರಲ್ಲಿ ನ್ಯಾಯದ ಬಗ್ಗೆ ನ್ಯಾಯಾಲಯದ ಬಗ್ಗೆ ಇರುವ ಗೌರವ ಹೆಮ್ಮೆ ಕಂಡು ನಮಗೆ ಇನ್ನು ಉತ್ತಮವಾಗಿ ಕೆಲಸ ಮಾಡಲು ಸಾಧ್ಯವಾಯಿತು ಎಂದರು.
ಹಿರಿಯ ಪ್ರೊಬೋನೋ ನ್ಯಾಯವಾದಿ ಮಲ್ಲಿಕಾರ್ಜುನ ಜಿ ಭೃಂಗಿಮಠ ಅವರು ಕಾವ್ಯಭಾಷೆಯಲ್ಲೇ ಮಾತನಾಡಿ, ನ್ಯಾಯಾಧೀಶರಾದ ಕುಂದರ ಅವರು ಜಿಲ್ಲೆಯಲ್ಲಿ ಆಡದೇ ಕೆಲಸ ಮಾಡಿ ತೋರಿಸಿದ ಸಾಧಕರು, ಅವರ ಅವಧಿಯಲ್ಲಿ ಪ್ರಾಧಿಕಾರವು ಜನರಿಗೆ ಕಾನೂನು ಅರಿವು ನೆರವು ನೀಡುವುದರ ಜೊತೆಗೆ ಅಲ್ಲಲ್ಲಿ ಇದ್ದ ಸಾಮಾಜಿಕ ಸಮಸ್ಸೆಗಳನ್ನು ಬಗೆ ಹರಿಸುವಲ್ಲಿ ಉತ್ತಮ ಕೆಲಸ ಮಾಡಿದ್ದಾರೆ. ವಿಜಯಪುರ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಇತಿಹಾಸದಲ್ಲೇ ಪ್ರೊಬೊನೋ ವಕೀಲರನ್ನು ನೇಮಿಸಲು ಕಾರಣಿಗರಾದ ಕೀರ್ತಿ ಇವರ ಅವಧಿಗೆ ಸಲ್ಲುತ್ತದೆ ಎಂದರು.
ನ್ಯಾಯವಾದಿಗಳಾದ ಆರ್.ಎಸ್. ನಂದಿ, ಲಾಹೋರಿ, ಬಸವರಾಜ ಮಠ ಹಾಗೂ ಮಸೂತಿ ಮಾತನಾಡಿದರು.
ಕಾನೂನು ಮಹಾವಿದ್ಯಾಯದ ಪ್ರಾಚಾರ್ಯೆ ಸುಮಾ ದೇಸಾಯಿ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ವಕೀಲರ ಸಂಘದ ಗೌರವ ಕಾರ್ಯದರ್ಶಿ ಅಶೋಕ ಜೈನಾಪೂರ ವಂದಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ನ್ಯಾಯವಾದಿಗಳಾದ ಕೆ.ಎಫ್. ಅಂಕಲಗಿ, ರಾಜು ಬಿದರಿ ಮುಂತಾದವರು ಇದ್ದರು.

