ವಿದ್ಯಾರ್ಥಿ, ಪಾಲಕರಿಗೆ ಅನುಕೂಲವಾಗಲು ಹೆಲ್ಪ್ ಲೈನ್ ಆರಂಭಿಸಲು ಸರ್ಕಾರಕ್ಕೆ ಮನವಿ
ವಿಜಯಪುರ: ಜಿಲ್ಲೆಯಲ್ಲಿ ಡೊನೇಷನ್ ಹಾವಳಿ ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಡೊನೇಷನ್ ವಿರುದ್ಧ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಿಧ್ಯಾರ್ಥಿ, ಪಾಲಕರಿಗೆ ಅನುಕೂಲವಾಗಲು ಸರ್ಕಾರ ಕೊಡಲೇ ಹೆಲ್ಪ್ಲೈನ್ ಆರಂಭಿಸಬೇಕೆಂದು ದಲಿತ ವಿದ್ಯಾರ್ಥಿ ಪರಿಷತ್ ಶನಿವಾರ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮತ್ತು ಶಿಕ್ಷಣ ಸಚಿವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ಮನವಿ ಸಲ್ಲಿಸಿ ಮಾತನಾಡಿದ ದಲಿತ ವಿದ್ಯಾರ್ಥಿ ಪರಿಷತ್ ಜಿಲ್ಲಾ ಸಂಚಾಲಕ ಅಕ್ಷಯ್ ಕುಮಾರ್ ಅಜಮನಿ, ಜಿಲ್ಲೆಯಲ್ಲಿ ದುಡ್ಡು ಇದ್ದವರಿಗೆ ಮಾತ್ರ ವಿದ್ಯಾಭ್ಯಾಸ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಪ್ರಕಟವಾಗಿ ಮುಂದಿನ ಶಿಕ್ಷಣಕ್ಕೆ ಅಣಿಯಾಗುತ್ತಿದ್ದಂತೆ ವಿದ್ಯಾರ್ಥಿಗಳು ಮತ್ತು ಪಾಲಕರು ಡೊನೇಶನ್ ಹಾವಳಿ ಎದುರಿಸಬೇಕಾಗಿದೆ. ಇದರಿಂದ ಎಷ್ಟೋ ಜನ ವಿದ್ಯಾರ್ಥಿಗಳ ಶಿಕ್ಷಣದ ಕನಸು ಕಮರುತ್ತಿದೆ. ವಿದ್ಯಾರ್ಥಿಗಳಿಂದ ಕಡಿಮೆ ಶುಲ್ಕ ಪಡೆದು ಉತ್ತಮ ಶಿಕ್ಷಣ ನೀಡಬೇಕಾದ ವಿದ್ಯಾಸಂಸ್ಥೆಗಳು ಸರಕಾರದ ನಿಯಮಾವಳಿಗಳನ್ನು ಗಾಳಿಗೆ ತೂರಿ ಹಣ ವಸೂಲಿ ಮಾಡುತ್ತಿವೆ. ಡೊನೇಷನ್ ಹೆಸರಿನಲ್ಲಿ ಹಗಲು ದರೋಡೆ ನಡೆಸುತ್ತಿದ್ದರೂ ಸರ್ಕಾರದ ಇಲಾಖೆಗಳು ಕ್ರಮ ಕೈಗೊಳ್ಳದೆ ಮೌನವಾಗಿದ್ದು ಖಂಡನೀಯ ಎಂದರು.
ಡೊನೇಷನ್ ಹಾವಳಿ ತಡೆಗಟ್ಟಲು ಸರಕಾರದ ಸುತ್ತೋಲೆಗಳು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಮನಬಂದಂತೆ ಶುಲ್ಕ ನಿಗದಿ ಮಾಡಿಕೊಳ್ಳುತ್ತಿವೆ. ಡೊನೇಷನ್ ಹಾವಳಿ ತಡೆಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಲೇಬೇಕು. ಖಾಸಗಿ ಕಾಲೇಜುಗಳು ರೋಸ್ಟರ್ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತಿಳಿಸಬೇಕು. ಸರಕಾರಿ ಕಾಲೇಜುಗಳ ಸಂಖ್ಯೆ ಹೆಚ್ಚಿಸಿ ಮೂಲಭೂತ ಸೌಲಭ್ಯ ನೀಡಬೇಕು. ಮೇಲೆ ಹೇಳಿದಂತೆ ಖಾಸಗಿ ಕಾಲೇಜುಗಳು ಮನ ಬಂದಂತೆ ಡೊನೇಷನ್ ವಸೂಲಿ ಮಾಡುತ್ತಿವೆ. ಇದನ್ನು ತಡೆಯಲು ಸರಕಾರ ಕೂಡಲೇ ಮುಂದಾಗಬೇಕು ಎಂದರು.
ಶಿಕ್ಷಣ ವ್ಯಾಪಾರೀಕರಣಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ಸರಕಾರ ಹಲವು ಕಾಯಿದೆ ಜಾರಿಗೆ ತಂದಿದೆ. ಇದರ ಪ್ರಕಾರ ಅನುದಾನಿತ ಸಂಸ್ಥೆಗಳು, ಅನುದಾನರಹಿತ ಸಂಸ್ಥೆಗಳು ಅಭಿವೃದ್ಧಿ ಶುಲ್ಕವನ್ನು ಸರ್ಕಾರ ನಿಗದಿತ ಶುಲ್ಕ ಮಾತ್ರ ಸಂಗ್ರಹಿಸಲು ಅವಕಾಶವಿದೆ. ಹೆಚ್ಚು ಸಂಗ್ರಹಿಸುವುದು ಕಾನೂನು ಪ್ರಕಾರ ಅಪರಾಧವಾಗಿದೆ. ಆದ್ರೂ ಸರ್ಕಾರದ ನಿಯಮ ಉಲ್ಲಂಘಿಸಿ ಅಭಿವೃದ್ಧಿ ಶುಲ್ಕದ ಹೆಸರಿನಲ್ಲಿ ವಿಧ್ಯಾರ್ಥಿ, ಪಾಲಕರಿಂದ ಮನಸ್ಸಿಗೆ ಬಂದಂತೆ ಶುಲ್ಕ ಸಂಗ್ರಹಿಸಲಾಗುತ್ತಿದೆ. ಜಿಲ್ಲಾ ಮಟ್ಟದಲ್ಲಿ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿ ಪ್ರತಿನಿಗಳು, ಪೋಷಕರು ಹಾಗೂ ಸಂಸ್ಥೆಗಳನ್ನೊಳಗೊಂಡ ಸಮಿತಿ ರಚಿಸಿ ಅಲ್ಲಿ ಇದರ ಬಗ್ಗೆ ಚರ್ಚಿಸಬೇಕು. ಈ ಪ್ರಕ್ರಿಯೆ ಎಲ್ಲಿಯೂ ಜಾರಿಗೆ ಬರುತ್ತಿಲ್ಲ. ಈ ಪ್ರಕ್ರಿಯೆ ಜಾರಿಯಾಗದ ಪರಿಣಾಮ ಮನ ಬಂದಂತೆ ವಂತಿಗೆ ವಸೂಲಿ ಮಾಡಲಾಗುತ್ತಿದೆ. ಕಾರಣ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಶಿಕ್ಷಣ ರೆಗ್ಯುಲೇಟಿಂಗ್ ಸಮಿತಿ ರಚಿಸಬೇಕು. ಕಾಲೇಜುಗಳ ಮಕ್ಕಳ ಸಂಖ್ಯೆ ಪ್ರಕಾರ ಸಂಸ್ಥೆಯ ಆದಾಯ ಕ್ರೂಢಿಕರಿಸಿ ಇಲಾಖೆಯೇ ಶುಲ್ಕ ನಿಗದಿ ಮಾಡಬೇಕು. ಸಂಘಟನೆಗಳ, ಪಾಲಕರ ಜಂಟಿ ಸಭೆ ಕರೆದು ವಿದ್ಯಾರ್ಥಿಗಳು ಎದುರಿಸುವ ಸಮಸ್ಯೆ ಚರ್ಚಿಸುವಂತಾಗಬೇಕು. ಡೊನೇಷನ್ ಹಾವಳಿ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ವಿಧ್ಯಾರ್ಥಿ ಹಾಗೂ ಪಾಲಕರಿಗೆ ಮಾಹಿತಿ ನೀಡಲು ಸರ್ಕಾರ ಹೊಸದಾಗಿ ಆದೇಶ ಹೊರಡಿಸಬೇಕು. ಡೊನೇಷನ್ ವಸೂಲಿ ತಡೆಯಲು ಕೊಡಲೇ ಸರ್ಕಾರ ವಿಧ್ಯಾರ್ಥಿ ಹಾಗೂ ಪಾಲಕರಿಗೆ ಡೊನೇಷನ್ ವಿರುದ್ಧ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಅರಿವು ಮೂಡಿಸಲು ಉಚಿತ ಹೆಲ್ಪ್ ಲೈನ್ (ದೂರವಾಣಿ) ಆರಂಭಿಸಬೇಕು. ಕನಿಷ್ಠ ಪಕ್ಷ ಇದರಿಂದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತುಂಬಾ ಸಹಾಯಕವಾಗಬಹುದು ಎಂದರು.
ಡೊನೇಷನ್ ಹಾವಳಿ ತಡೆಯಲು ಕಟ್ಟುನಿಟ್ಟಿನ ಸರ್ಕಾರ ಕ್ರಮ ಕೈಗೊಳ್ಳಬೇಕು. ಈ ವಿಚಾರದಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸಿದರೆ ಮುಂದಿನ ದಿನಗಳಲ್ಲಿ ದಲಿತ ವಿದ್ಯಾರ್ಥಿ ಪರಿಷತ್ ಅಲ್ಲದೇ ವಿದ್ಯಾರ್ಥಿ, ಪಾಲಕರೊಂದಿಗೆ ಜೊತೆಗೂಡಿ ಡೊನೇಷನ್ ಹಾವಳಿ ವಿರುದ್ಧ ಬೀದಿಗೆ ಇಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ದಲಿತ ವಿದ್ಯಾರ್ಥಿ ಪರಿಷತ್ನ ಮುಖಂಡರಾದ ಆನಂದ ಮುದೂರ, ಮಾದೇಶ ಛಲವಾದಿ, ಯಾಶಿನ್ ಇನಾಮದಾರ, ಯುವರಾಜ್ ಓಲೇಕಾರ್, ಅಜಯ್ ರಾಥೋಡ್, ಮಹಾಂತೇಶ್ ಛಲವಾದಿ, ಯಮನುರಿ ಮಾದರ್, ಮುಂತಾದವರು ಉಪಸ್ಥಿತರಿದ್ದರು.

