ತಂಪೆರೆದ ಮಳೆ | ಕೃಷಿ ಚಟುವಟಿಕೆ ಚುರುಕು | ಉತ್ತಮ ಮಳೆ-ಬೆಳೆಯ ನಿರೀಕ್ಷೆ
– ಇಲಾಹಿ ಇ. ಜಮಖಂಡಿ
ಚಿಮ್ಮಡ: ಕಳೆದ ನಾಲ್ಕು ದಿನಗಳಲ್ಲಿ ಸುರಿದ ಮಳೆಯಿಂದ ಕೆಂಡದಂತಾಗಿದ್ದ ಈ ಭಾಗದ ವಾತಾವರಣ ತಂಪೆರೆದಂತಾಗಿದ್ದು ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಖುಷಿಯಿಂದಲೇ ಅವರು ಬಿತ್ತನೆ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಜಮೀನಗಳನ್ನು ಹದಮಾಡಿ ಗದ್ದೆಗಳಲ್ಲಿ ತಿಪ್ಪೆಗೊಬ್ಬರವನ್ನು ಮಿಶ್ರಣಗೊಳಿಸಿಕೊಂಡು ಮಳೆಗಾಗಿ ಜಾತಕ ಪಕ್ಷಿಯಂತೆ ಕಾಯುತಿದ್ದ ರೈತರಿಗೆ ಕಳೆದ ಮಂಗಳವಾರ ಹಾಗೂ ಗುರುವಾರ ರಾತ್ರಿ ಸುರಿದ ಮಳೆ ಅವರಲ್ಲಿ ಆಶಾ ಭಾವನೆ ಮೂಡಿಸಿದ್ದು ವರುಣದೇವನ ಮೇಲೆ ಭಾರ ಹಾಕಿ ಬಹುತೇಕ ರೈತರು ಕೃಷಿ ಚಟುವಟಿಕೆ ಪ್ರಾರಂಭಿಸಿದ್ದಾರೆ.
ಕಳೆದ ಎಪ್ರಿಲ್ ನಲ್ಲಿಯೇ ಸುರಿಯುವ ಅಶ್ವಿನಿ, ಭರಣಿ ಮಳೆಗಳು ಕೈಕೊಟ್ಟರೂ ಮುಂಗಾರು ಪೂರ್ವ ಕೃತ್ತಿಕಾ ಮಳೆ ಪ್ರಾರಂಭಗೊಂಡಿದ್ದು ರೈತರಲ್ಲಿ ಉತ್ತಮ ಮಳೆ, ಬೆಳೆಯ ನಿರೀಕ್ಷೆ ಮೂಡಿಸಿದೆ.
ಈ ಬಾರಿಯೂ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಇಲ್ಲಿನ ಘಟಪ್ರಭಾ ಎಡದಂಡೆ ಕಾಲುವೆಗೆ ಹತ್ತು ದಿನದಗಳಂತೆ ಎರಡುಬಾರಿ ನೀರು ಹರಿಸಿದ್ದರಿಂದ ಈ ಭಾಗದ ಕೆರೆಗಳು ಭರ್ತಿಯಾಗಿದ್ದು ಬಾವಿ, ಕೊಳವೆ ಬಾವಿಗಳ ಅಂತರ್ಜಲಮಟ್ಟ ಹೆಚ್ಚಿದೆ, ಪ್ರಸಕ್ತ ಮಳೆಯೂ ಈ ಭಾಗದಲ್ಲಿ ರಣಬಿಸಿಲ ತಾಪದಿಂದ ತತ್ತರಿಸುತಿದ್ದ ಜನರಿಗೆ ಧಗೆಯಿಂದ ಮುಕ್ತಿ ದೊರೆತಂತಾಗಿದ್ದು ಬಹುತೇಕ ರೈತರು ಬಿತ್ತನೆ ಕಾರ್ಯವನ್ನು ಚುರುಕುಗೊಳಿಸಿದ್ದು. ಇದರಿಂದ ಕಳೆದ ಎರಡು ತಿಂಗಳಿನಿಂದ ಕೆಲಸವಿಲ್ಲದೆ ಕಂಗಾಲಾಗಿದ್ದ ಕೂಲಿಕಾರರಿಗೂ ಕೆಲಸ ದೊರೆತಂತಾಗಿದ್ದು ಅವರೂ ಖುಷಿಯಿಂದಲೇ ಗದ್ದೆಗಳತ್ತ ಹೆಜ್ಜೆ ಹಾಕುತ್ತಿದ್ದಾರೆ.
“ರೈತರು ಈಗಷ್ಟೆ ಜಮೀನು ಹದಗೊಳಿಸುವ ಕಾರ್ಯ ಆರಂಭಿಸಿದ್ದು ಕೃಷಿ ಇಲಾಖೆಯಿಂದ ಇನ್ನೆರಡು ದಿನದಲ್ಲಿ ಬಿತ್ತನೆ ಬೀಜಗಳಾದ ಹೆಸರು, ಉದ್ದು, ಸೋಯಾಬಿನ್, ಗೋವಿನಜೋಳ, ಸೇರಿದಂತೆ ಹಲವು ಬೀಜಗಳು ಹಾಗೂ ಬೆಳೆಗೆ ಅಗತ್ಯವಿರುವ ಲಘು ಪೋಷಕಾಂಶಗಳ ದಾಸ್ತಾನು ಬರಲಿದೆ. ರೈತರು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಹೊರಗಡೆಯಿಂದ ಖರೀದಿಸುವ ಅವಶ್ಯವೆನಿಸಿದರೆ ಅಧಿಕೃತ ಪರವಾನಿಗೆ ಪಡೆದ ಮಳಿಗೆಗಳಲ್ಲಿ ಮಾತ್ರ ಖರೀದಿಸಬೇಕು ಅಧಿಕೃತ ಬಿಲ್ಲುಗಳನ್ನು ಪಡೆಯಬೇಕು.
– ಎಸ್.ಎಂ. ಬಿರಾದಾರ
ಕೃಷಿ ಅಧಿಕಾರಿಗಳು, ತೇರದಾಳ ವಲಯ.
” ಮುಂಗಾರು ಪೂರ್ವ ಮಳೆ ಸಮರ್ಪಕವಾಗಿ ಸುರಿಯುವ ಆಶಾಭಾವಣೆಯಿಂದ ಇದ್ದರೂ ಬಾವಿ, ಬೊರವೆಲ್‌ಗಳ ಆಸರೆಯಿರುವ ರೈತರು ಅರಿಷಿನ, ಕಬ್ಬು ಬಿತ್ತನೆ ಮಾಡಿದ್ದು ಮಳೆಯನ್ನೆ ನಂಬಿರೈತರು ಗೋವಿನಜೋಳ ಸೇರಿದಂತೆ ಹಲವು ಮಿಶ್ರ ಬೆಳೆಗಳ ಬಿತ್ತನೆ ಕಾರ್ಯ ಪ್ರಾರಂಭಿಸಿದ್ದಾರೆ ಮುಂಬರುವ ಮಳೆಗಳು ಸಮರ್ಪಕವಾಗಿ ಸುರಿದರೆ ಬರಗಾಲ ಛಾಯೆಯಿಂದ ರೈತರು ಹೊರಬರಲಿದ್ದಾರೆ.”
– ಸುರೇಶ ಅಥಣಿ ಪ್ರಗತಿಪರ ರೈತರು, ಚಿಮ್ಮಡ.

