ವಿಜಯಪುರ ಜಿಲ್ಲೆಯಲ್ಲಿ ೨೦೨೪-೨೫ನೇ ಸಾಲಿನಲ್ಲಿ ೪೦ ಬಾಲ್ಯವಿವಾಹ ತಡೆ
ವಿಜಯಪುರ: ಬಾಲ್ಯವಿವಾಹಕ್ಕೆ ಪ್ರೋತ್ಸಾಹ ನೀಡುವುದು ಹಾಗೂ ಅದರ ಆಚರಣೆಗೆ ಒಪ್ಪಿಗೆ ನೀಡಿದರೆ ಬಾಲ್ಯ ವಿವಾಹ ನಿಷೇಧ ಕಾಯ್ದೆ-೨೦೦೬ರ ಕಲಂ ೯, ೧೦ ಹಾಗೂ ೧೧ರ ಪ್ರಕಾರ ಎರಡು ವರ್ಷಗಳ ಕಾಲ ವಿಸ್ತರಿಸಬಹುದಾದ ಕಠಿಣ ಕಾರಾಗೃಹ ಶಿಕ್ಷೆ ಮತ್ತು ಒಂದು ಲಕ್ಷ ರೂಗಳವರೆಗೂ ವಿಸ್ತರಿಸಬಹುದಾದ ದಂಡವಿರುತ್ತದೆ ಎಂದು ಜಿಲ್ಲಾ ಮಕ್ಕಳ ರಕ್ಷಣ ಘಟಕದ ಅಧ್ಯಕ್ಷರು ಆದ ಜಿಲ್ಲಾಧಿಕಾರಿ ಟಿ.ಭೂಬಾಲನ್ ತಿಳಿಸಿದ್ದಾರೆ.
ಬಾಲ್ಯ ವಿವಾಹ ಒಂದು ಸಾಮಾಜಿಕ ಪಿಡುಗು ಆಗಿದ್ದು, ಬಾಲ್ಯವಿವಾಹ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದ ಅಧಿಕಾರಿಗಳಿಗೆ ಬಾಲ್ಯವಿವಾಹ ನಿಷೇಧ ಕಾಯ್ದೆ ಕುರಿತು ತರಬೇತಿಯನ್ನು ನೀಡಲಾಗಿದೆ. ಅದಲ್ಲದೇ ಜಾಥಾ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಗಿದೆ. ಅದರ ಪ್ರತಿಫಲ ವಿಜಯಪುರ ಜಿಲ್ಲೆಯಲ್ಲಿ ೨೦೨೩-೨೪ನೇ ಸಾಲಿನಲ್ಲಿ ಒಟ್ಟು ೧೪೦ ದೂರುಗಳು ಮಕ್ಕಳ ಸಹಾಯವಾಣಿ-೧೦೯೮/೧೧೨ ಸ್ವೀಕರಿಸಿದ್ದು, ಅದರಲ್ಲಿ ೧೨೫ ಬಾಲ್ಯವಿವಾಹಗಳನ್ನು ಸಂಬಂಧಪಟ್ಟ ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಸಹಯೋಗದೊಂದಿಗೆ ತಡೆಗಟ್ಟಿದ್ದು, ೦೯ ಬಾಲ್ಯವಿವಾಹ ಪ್ರಕರಣಗಳಲ್ಲಿ ಎಫ್.ಐ.ಆರ್ ದಾಖಲಿಸಲಾಗಿದೆ. ಉಳಿದ ೦೬ ಪ್ರಕರಣಗಳು ಬೇರೆ ಬೇರೆ ಜಿಲ್ಲೆಗಳಿಗೆ ವರ್ಗಾವಣೆ ಮಾಡಲಾಗಿದೆ.
ಅದರಂತೆ ೨೦೨೪-೨೫ನೇ ಸಾಲಿನಲ್ಲಿ ಒಟ್ಟು ೪೦ ದೂರುಗಳು ಮಕ್ಕಳ ಸಹಾಯವಾಣಿ-೧೦೯೮/೧೧೨ ಸ್ವೀಕರಿಸಿದ್ದು, ಅದರಲ್ಲಿ ೪೦ ಬಾಲ್ಯವಿವಾಹಗಳನ್ನು ಸಂಬಂಧಪಟ್ಟ ಎಲ್ಲ ಬಾಲ್ಯವಿವಾಹ ನಿಷೇಧಾಧಿಕಾರಿಗಳ ಸಹಯೋಗದೊಂದಿಗೆ ತಡೆಗಟ್ಟಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಯಾರಾದರೂ ಬಾಲ್ಯವಿವಾಹವನ್ನು ನೆರವೇರಿಸಿದ್ದು, ನಿರ್ದೇಶಿಸಿದ್ದು ಅಥವಾ ನೆರವು ನೀಡಿದ್ದೇ ಆದಲ್ಲಿ ಅವರು ಅದು ಬಾಲ್ಯವಿವಾಹ ಅಲ್ಲವೆಂದು ನಿರೂಪಿಸಲು ಸಾಕಷ್ಟು ಪುರಾವೆಗಳನ್ನು ಒದಗಿಸದಿದ್ದಲ್ಲಿ ಹಾಗೂ ಯಾವುದೇ ಮಗು ಬಾಲ್ಯವಿವಾಹಕ್ಕೆ ಒಳಗಾದರೆ, ಮಗು ಸುಪರ್ಧಿಯಲ್ಲಿರುವ ವ್ಯಕ್ತಿ, ಸಂಸ್ಥೆ ಅಥವಾ ಸಂಘಗಳ ಸದಸ್ಯರೂ ಸೇರಿದಂತೆ ತಂದೆ ತಾಯಿ ಮತ್ತು ಪೋಷಕರು ಅಥವಾ ಯಾವುದೇ ವ್ಯಕ್ತಿ ಯ ವಿರುದ್ದ ಕಟ್ಟುನಿಟ್ಟಾಗಿ ಕ್ರಮ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಕಾರಣ ೧೮ ವರ್ಷದೊಳಗಿನ ಹೆಣ್ಣು ಮಕ್ಕಳಿಗೆ ಹಾಗೂ ೨೧ ವರ್ಷದೊಳಗಿನ ಗಂಡು ಮಕ್ಕಳಿಗೆ ವಿವಾಹ ಮಾಡದಂತೆ ಸಾರ್ವಜನಿಕರಲ್ಲಿ ಈ ಮೂಲಕ ತಿಳಿಸಿದೆ. ಇನ್ನೂ ಸಾರ್ವಜನಿಕರಲ್ಲಿ ಬಾಲ್ಯವಿವಾಹ ನಿಷೇಧ ಕುರಿತು ಅರಿವು ಮೂಡಿಸುವುದರೊಂದಿಗೆ ಬಾಲ್ಯವಿವಾಹ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಎಲ್ಲ ಸಂಬಂಧಪಟ್ಟ ಇಲಾಖೆಯ ಬಾಲ್ಯವಿವಾಹ ನಿಷೇಧಾಧಿಕಾರಿಗಳು ಕ್ರಮ ವಹಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

