ವಿಜಯಪುರ: ಸಾಧನೆಗೆ ಸೌಕರ್ಯಗಳಿಗಿಂತ ಆತ್ಮಸ್ಥೈರ್ಯ, ಕಠಿಣ ಪರಿಶ್ರಮ, ಛಲ ಬಹಳ ಮುಖ್ಯ. ಉನ್ನತ ಗುರಿ ಸಾಧಿಸಲು ವಿದ್ಯಾರ್ಥಿಗಳಿಗೆ ಬಡತನ ಅಡ್ಡಿ ಆಗಬಾರದು. ನಿರಂತರ ಅಧ್ಯಯನಶೀಲರಾದಾಗ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.
ಶನಿವಾರದಂದು ತಾಲೂಕಿನ ನಾಗಠಾಣ ಗ್ರಾಮದಲ್ಲಿ 2023-24 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳ ಶುಭಹಾರೈಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಸಂಸ್ಕಾರಯುತವಾಗಿ ದೃಢ ಸಂಕಲ್ಪದೊಂದಿಗೆ ಗುರಿ ಸಾಧನೆಗೆ ಮುಂದಾಗಬೇಕು. ನಿರಂತರ ಪರಿಶ್ರಮ ಶ್ರದ್ಧೆಯಿಂದ ಪ್ರಯತ್ನಪಟ್ಟಲ್ಲಿ ಗುರಿ ಸಾಧನೆ ಸುಲಭವಾಗುತ್ತದೆ. ಕಡು ಬಡತನವು ಸಾಧನೆಗೆ ಪ್ರೇರಕ ಶಕ್ತಿ ಎಂಬುದಕ್ಕೆ ದಾನಮ್ಮ ಕುಂಬಾರ ಅವಳೇ ಪ್ರತ್ಯಕ್ಷ ಸಾಕ್ಷಿ ಎಂದು ಹೇಳಿದರು.
ಶಾಲೆಗೆ ಟಾಪರ್ ವಿದ್ಯಾರ್ಥಿನಿ ದಾನಮ್ಮ ಕುಂಬಾರ ಮಾತನಾಡಿ, ನನ್ನ ತಂದೆ-ತಾಯಿ ಇಬ್ಬರೂ ಪಾರ್ಶ್ವವಾಯು ಪೀಡಿತರಾಗಿ ಕುಟುಂಬ ನಿರ್ವಹಣೆ ದುಸ್ತರವಾಗಿದ್ದರೂ ಸಹಿತ ಅವರ ಆರೈಕೆ ಮಾಡುತ್ತಾ ನಿರಂತರ ಪ್ರಯತ್ನಶೀಲತೆ ಗುಣವನ್ನು ಮೈಗೂಡಿಸಿಕೊಂಡು ಶಾಲೆಗೆ ಪ್ರಥಮ ಸ್ಥಾನ ಪಡೆದದ್ದು ನನಗೆ ಹೆಮ್ಮೆ ತಂದಿದೆ ಎಂದು ಹೇಳಿದರು.
ಡಿಸಿಸಿ ಬ್ಯಾಂಕ್ ಮ್ಯಾನೇಜರ್ ಸಾಯಬಣ್ಣ ಗೌಡೆನ್ನವರ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಮೆಟ್ಟಿ ನಿಲ್ಲಬೇಕು. ಸವಾಲುಗಳನ್ನು ಧೈರ್ಯದಿಂದ ಎದುರಿಸಿ ಹೋರಾಡಿ ಗುರಿ ಮುಟ್ಟಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪಬ್ಲಿಕ್ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದ ದಾನಮ್ಮ ಕುಂಬಾರ(88.64), ದ್ವಿತೀಯ ಸ್ಥಾನ ಪಡೆದ ಭಾಗ್ಯಶ್ರೀ ಕುಂಬಾರ (88) ಅವರನ್ನು ಸನ್ಮಾನಿಸಲಾಯಿತು.
ಗ್ರಾಮದ ರಾಜು ಕತ್ನಳ್ಳಿ, ಅಮೋಘಸಿದ್ದ ಕುಂಬಾರ, ಸುರೇಶ ಕತ್ನಳ್ಳಿ, ಸಾಯಬಣ್ಣ ಕುಂಬಾರ, ಸುರೇಖಾ ಬಂಡೆ, ಸುಜಾತಾ ಗಿರಿಸಾಗರ, ಅನಿಲ ಬಗಲಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

