ವಿಜಯಪುರ: ಇಂದು ಜಾನಪದ ಕಲಾವಿದರು ಕಷ್ಟದಲ್ಲಿದ್ದಾರೆ. ಕಲೆಯ ಬೆನ್ನುಹತ್ತಿ ಬಡತನದಲ್ಲಿ ಬದುಕು ಸಾಗಿಸುತ್ತಿದ್ದಾರೆ. ಕಲೆಯ ಬಗ್ಗೆ ಅಭಿಮಾನ ಇದ್ದವರೆ ನಮಗೆ ಆಸ್ತಿ ಆಗಿದ್ದಾರೆ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ನೂತನ ಸದಸ್ಯೆ, ಪಾರಿಜಾತ ಕಲಾವಿದೆ ಅನಸುಬಾಯಿ ವಡ್ಡರ ಹೇಳಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾ ಘಟಕ ನಗರದ ಪರಿಷತ್ ಕಾರ್ಯಾಲಯದಲ್ಲಿ ಏರ್ಪಡಿಸಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಶಿಷ್ಟ ಕಲಾವಿದರ ಗೌರವ ಜನಪದ ಕಲಾವಿದರಿಗೆ ಇಲ್ಲ. ಜನಪದ ಕಲಾವಿದರನ್ನು ಅನಾದರದಿಂದ ನೋಡಲಾಗುತ್ತದೆ. ಜನಪದ ಕಲಾವಿದರು ಮೂಲ ಕಲಾವಿದರಾಗಿದ್ದಾರೆ. ಅವರನ್ನು ಉಳಿಸಿ ಬೆಳೆಸಲು ಜಿಲ್ಲೆಯಲ್ಲಿ ಬಾಳನಗೌಡ ಪಾಟೀಲರ ನೇತೃತ್ವದ ಕನ್ನಡ ಜಾನಪದ ಪರಿಷತ್ ಶ್ರಮಿಸುತ್ತಿರುವುದು ಸಂತೋಷ ತಂದಿದೆ ಎಂದರು.
ಸನ್ಮಾನ ನೆರವೇರಿಸಿ ಮಾತನಾಡಿದ ಪ್ರವಚನಕಾರ ಬಾಬುರಾವ್ ಮಹಾರಾಜರು ಜಾನಪದ ಕಲೆ ಮತ್ತು ಕಲಾವಿದರು ನಮ್ಮ ದೇಶದ ಸನಾತನ ಸಂಸ್ಕೃತಿಯ ಕುರುಹು. ಕಲಾವಿದರು ಕಷ್ಟದಲ್ಲಿರಬಾರದು. ಕಲಾವಿದರನ್ನು ಗೌರವದಿಂದ ಕಾಣಬೇಕು ಅಂದಾಗ ಸಂಸ್ಕೃತಿ ಉಳಿಯುತ್ತದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ, ಕನ್ನಡ ಜಾನಪದ ಪರಿಷತ್ತು ಕಲಾವಿದರಿಗಾಗಿ ಮತ್ತು ಜನಪದ ಕಲೆ ಉಳಿಸುವುದಕ್ಕಾಗಿ ಹುಟ್ಟಿದ ಸಂಘಟನೆಯಾಗಿದೆ. ಜಿಲ್ಲೆಯಲ್ಲಿ ಮುನ್ನೂರಕ್ಕೂ ಹೆಚ್ಚು ಕಾರ್ಯಕ್ರಮ ಸಂಘಟಿಸಿ ಕಲಾವಿದರಿಗೆ ವೇದಿಕೆ, ಸನ್ಮಾನ, ಪ್ರಶಸ್ತಿ ಒದಗಿಸಿ ಮಾಶಾಸನಕ್ಕೂ ಅನುಕೂಲ ಕಲ್ಪಿಸಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಹಿತಿ ಶಂಕರ ಬೈಚಬಾಳ, ಸಾಂಸ್ಕೃಿತಿಕ ಚಿಂತಕ ಮೋಹನ ಕಟ್ಟಿಮನಿ, ಕ ಜಾ ಪ ಜಿಲ್ಲಾ ಖಜಾಂಚಿ ಪ್ರೊ ಎಸ್ ಎಲ್ ಮೇತ್ರಿ, ಕಾರ್ಯದರ್ಶಿ ಡಾ ರಮೇಶ ತೇಲಿ, ಸಂಚಾಲಕ ಪ್ರೊ ಗುರುರಾಜ ಹಳ್ಳೂರ, ಇಂಡಿ ತಾಲೂಕಾಧ್ಯಕ್ಷ ಆರ್ ವಿ ಪಾಟೀಲ, ಮುದ್ದೇಬಿಹಾಳ ತಾಲೂಕಾಧ್ಯಕ್ಷ ಎ ಆರ್ ಮುಲ್ಲಾ ಉಪಸ್ಥಿತರಿದ್ದರು.
ಜಿಲ್ಲಾ ಘಟಕದ ಸದಸ್ಯ ಎಸ್ ಅಯ್ ಬಿರಾದಾರ ಸ್ವಾಗತಿಸಿ ನಿರೂಪಿಸಿದರು. ಸದಸ್ಯ ಮೌಲಾಸಾಹೇಬ ಜಹಾಗೀರದಾರ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

