ಎಸ್ಸೆಸ್ಸೆಲ್ಸಿ-೨ ಪರೀಕ್ಷೆಗೆ ವಿಶೇಷ ತರಗತಿ ನಡೆಸುವಂತೆ ಸರ್ಕಾರ ನೀಡಿದ ನಿರ್ದೇಶನ ಹಿಂಪಡೆಯಲು ಆಗ್ರಹ
ಬೆಂಗಳೂರು: ಎಸ್.ಎಸ್.ಎಲ್.ಸಿ ಎರಡನೇ ಅವಧಿಯ ಪರೀಕ್ಷೆಗಾಗಿ ‘ವಿಶೇಷ ತರಗತಿ’ ಗಳನ್ನು ನಡೆಸುವಂತೆ ನೀಡಿರುವ ನಿರ್ದೇಶನ ಮತ್ತು ಜ್ಞಾಪನ ಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ಕನಾಟಕ ರಾಜ್ಯ ಮಾಧ್ಯಮಿಕ ಶಿಕ್ಷಕ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪೂರ ಮತ್ತು ಸಂಘದ ರಾಜ್ಯಾಧ್ಯಕ್ಷ ಸಂದೀಪ ಬೂದಿಹಾಳ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಅವರು, 2023-24ನೇ ಶೈಕ್ಷಣಿಕ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆ-1 ರಲ್ಲಿ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳಿಗೆ ‘ವಿಶೇಷ ತರಗತಿ’ ಗಳನ್ನು ನಡೆಸುವಂತೆ ನೀಡಿರುವ ನಿರ್ದೇಶನ ಶಿಕ್ಷಕ ಸಮೂಹಕ್ಕೆ ತೀವ್ರ ಆಘಾತವುಂಟಾಗಿದೆ. ಪರೀಕ್ಷೆ, ಮೌಲ್ಯಮಾಪನ ಕಾರ್ಯ ಮತ್ತು ಚುನಾವಣಾ ಕರ್ತವ್ಯ ನಿರ್ವಹಿಸಿ ಈಗಷ್ಟೇ ಬೇಸಿಗೆ ರಜೆ ಮೇಲೆ ತೆರಳಿರುವ ಶಿಕ್ಷಕರು ಈ ರೀತಿಯ ಸುತ್ತೋಲೆಗಳಿಂದ ತಿನ್ನತೆಗೆ ಒಳಾಗಾಗಿದ್ದಾರೆ. ಶಿಕ್ಷಕರು ರಜಾ ಸಹಿತ ನೌಕರರ ವರ್ಗಕ್ಕೆ ಸೇರಿದ್ದು, ರಜಾ ಅವಧಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳು, ಕುಟುಂಬ ಪ್ರವಾಸ ಮತ್ತು ಕೌಟುಂಬಿಕ ಪೂರ್ವ ನಿಯೋಜಿತ ಕಾರ್ಯಗಳಿಗೆ ಬೇರೆ ಬೇರೆ ಸ್ಥಳಗಳಿಗೆ ತೆರಳಿರುವುದರಿಂದ ಈ ಸಮಯದಲ್ಲಿ ಶಾಲಾ ಕರ್ತವ್ಯಕ್ಕೆ ಹಾಜರಾಗಿ ವಿಶೇಷ ತರಗತಿ ನಡೆಸಲು ಸಾಧ್ಯವಾಗುವುದಿಲ್ಲ. ಕೇವಲ 14 ದಿವಸ ಮಾತ್ರ ಬೇಸಿಗೆ ರಜೆ ಉಳಿದಿರುವುದರಿಂದ ತಾವು ನೀಡಿರುವ ನಿರ್ದೇಶನವನ್ನು ಹಿಂಪಡೆದು ಶಿಕ್ಷಕರಿಗೆ ಮತ್ತು ಅವರ ಕುಟುಂಬಕ್ಕೆ ನೆಮ್ಮದಿಯ ವಾತಾವರಣ ಕಲ್ಪಿಸಬೇಕೆಂದು ಆಗ್ರಹಿಸಿದರು.

