ಸಿಂದಗಿ: ಹುಬ್ಬಳ್ಳಿಯ ಅಂಜಲಿ ಅಂಬಿಗೇರಳನ್ನು ಪ್ರೀತಿ ನಿರಾಕರಣೆಯ ನೆಪದಲ್ಲಿ ಹಂತಕ ಗಿರೀಶ ಸಾವಂತ ಚಾಕುವಿನಿಂದ ಇರಿದು ಕೊಲೆಗೈದಿರುವ ಹೇಯ ಕೃತ್ಯವನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ರಾಜ್ಯ ಸಮಿತಿಯು ಖಂಡಿಸುತ್ತದೆ. ಹಾಗೂ ಹತ್ಯೆ ಗೈದ ಆರೋಪಿ ಗಿರೀಶ ಸಾವಂತನನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ವಿಧಿಸಬೇಕು ಎಂದು ಕರ್ನಾಟಕ ರಾಜ್ಯ ಸಮಿತಿ ಸದಸ್ಯ ರಮೇಶ ಸಾಸಾಬಾಳ ಆಗ್ರಹಿಸಿದ್ದಾರೆ.
ಕೆಟರಿಂಗ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಅಂಜಲಿಗೆ ಪ್ರೀತಿಸುವಂತೆ ಗಿರೀಶ ಪೀಡಿಸುತ್ತಿದ್ದು, ಆಕೆ ಪ್ರೀತಿಯನ್ನು ನಿರಾಕರಿಸಿದ್ದಾಳೆಂದು ಬೆಳಗಿನ ಜಾವ ಅವಳ ಮನೆಗೆ ನುಗ್ಗಿ ಹತ್ಯೆಗೈದಿದ್ದಾನೆ. ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾಳ ಕೊಲೆ ಮಾಸುವ ಮುನ್ನವೇ ಅದೇ ಭೂಮಿಯಲ್ಲಿ ಮತ್ತೊಬ್ಬ ಯುವತಿಯ ಹತ್ಯೆ ನಡೆದಿರುವುದು ಅಘಾತಕಾರಿ. ಇಂತಹ ಘಟನೆಗಳು ಯುವತಿಯರಿಗೆ ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಮರೀಚಿಕೆಯಾಗುತ್ತಿದೆ ಎಂಬುದನ್ನು ತೆರೆದಿಟ್ಟಂತಿದೆ.
ರಾಜ್ಯದಲ್ಲಿ ದಿನನಿತ್ಯ ಹೆಣ್ಣು ಮಕ್ಕಳಿಂದ ಹಿಡಿದು ವಯೋವೃದ್ಧ ಮಹಿಳೆಯರವರೆಗೂ ಒಂದಿಲ್ಲೊಂದು ರೀತಿಯ ಹಿಂಸೆ, ದೌರ್ಜನ್ಯದಂತಹ ಘಟನೆಗಳು, ಹತ್ಯೆಗಳು ಅವ್ಯಾಹತವಾಗಿ, ಅನಿಯಂತ್ರಿತವಾಗಿ ನಡೆಯುತ್ತಿವೆ. ದೌರ್ಜನ್ಯ ಎಸಗುವವರಿಗೆ ಕಾನೂನಿನ ಭಯವೇ ಇಲ್ಲವೇನು ಎಂಬಂತಾಗಿದೆ. ಮಹಿಳೆಯರ ಮೇಲಿನ ದೌರ್ಜನ್ಯಗಳನ್ನು ನಿಯಂತ್ರಿಸಲು ಸರಕಾರ ಇನ್ನಷ್ಟು ಕಠಿಣ ಕ್ರಮ ಕೈಗೊಳ್ಳಬೇಕು. ಹಾಗೂ ಈ ಹಿಂಸೆ ದೌರ್ಜನ್ಯಗಳನ್ನು ತಡೆಗಟ್ಟಲು ರಾಜ್ಯದಲ್ಲಿ ಉಗ್ರಪ್ಪ ಸಮಿತಿ ನೀಡಿರುವ ವರದಿಯನ್ನು ಸಮರ್ಪಕವಾಗಿ ಜಾರಿಗೆ ತರಲು ಅಗತ್ಯ ಕ್ರಮ ಕೈಗೊಳ್ಳಬೇಕು.
ಕೊಲೆಗೈದ ಹಂತಕ ಗಿರೀಶನನ್ನು ಕೂಡಲೇ ಬಂಧಿಸಿ, ಕಠಿಣ ಶಿಕ್ಷೆ ಕೊಡಬೇಕು. ಕೊಲೆಯಾಗಿರುವ ಅಂಜಲಿಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು. ಇಂತಹ ಪ್ರಕರಣಗಳನ್ನು ದೀರ್ಘಕಾಲ ನಡೆಸದೇ ಶೀಘ್ರವಾಗಿ ಇತ್ಯರ್ಥಪಡಬೇಕು. ಈ ಕೇಸಗಳನ್ನು ತ್ವರಿತ ನ್ಯಾಯಾಲಯಕ್ಕೆ ನೀಡಬೇಕು. ಈ ಮೂಲಕ ದುರುಳರಿಗೆ ಶಿಕ್ಷೆಯನ್ನು ಮತ್ತು ಸಂತ್ರಸ್ತ ಕಟುಂಬಗಳಿಗೆ ನ್ಯಾಯ ಒದಗಿಸಬೇಕು. ಸರಕಾರ ಹೆಚ್ಚಿನ ಸಂಖ್ಯೆಯಲ್ಲಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು ಡಿವೈಎಫ್ಐ ರಾಜ್ಯ ಸಮಿತಿಯು ಒತ್ತಾಯಿಸುತ್ತದೆ ಎಂದಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

