೨ ದಿನದಲ್ಲಿ ಕೆರೆಗೆ ನೀರು ತುಂಬಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆರೆಯಲ್ಲಿಯೆ ಕುಳಿತು ಧರಣಿ ಸತ್ಯಾಗ್ರಹದ ಎಚ್ಚರಿಕೆ
ವಿಜಯಪುರ: ಜಂಬಗಿ ಕೆರೆ ಜಿಲ್ಲೆಯಲ್ಲಿಯೇ ೨ನೇ ಅತೀದೊಡ್ಡ ಕೆರೆಯಾಗಿದ್ದು, ಹಾಗೂ ಹುಣಶ್ಯಾಳ (ಮಾದಾಳ) ಕೆರೆಗಳಲ್ಲಿ ನೀರು ತುಂಬಿದರೆ ಸುತ್ತಮುತ್ತಲಿನ ೫-೬ ಹಳ್ಳಿಗಳ ರೈತರಿಗೆ ಜನ ಜಾನುವಾರುಗಳಿಗೆ ಕುಡಿಯಲು ನೀರಿನ ಅನುಕೂಲವಾಗುವುದು ಮಾತ್ರವಲ್ಲದೇ, ಅಂತರ್ಜಲ ಮಟ್ಟ ಹೆಚ್ಚಾಗಿ ನೀರಿನ ಮೂಲಗಳು ಅಭಿವೃದ್ಧಿ ಹೊಂದುತ್ತವೆ. ಇದರಿಂದ ರೈತರಿಗೆ ಕೃಷಿ ಚಟುವಟಿಕೆ ಮಾಡಲು ಅನುಕೂಲವಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಈ ವೇಳೆ ಆಹೇರಿ ಗ್ರಾಮದ ಮಾಜಿ ಗ್ರಾ.ಪಂ ಚೇರಮನ್ ಬಸವರಾಜ ಗಾಣಿಗೇರ ಮಾತನಾಡಿ, ಜಿಲ್ಲೆಯ ಎಲ್ಲಾ ಕೆರೆಗಳು ತುಂಬುತ್ತಿದ್ದರೂ ಜಂಬಗಿ ಹಾಗೂ ಹುಣಶ್ಯಾಳ ಕೆರೆ ಮಾತ್ರ ತುಂಬದೇ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಲ್ಲಿಯವರೆಗೆ ಕೆರೆ ನೀರು ತುಂಬದೇ ಪುರಾಣ ಹೇಳುತ್ತಿದ್ದಾರೆ, ಕೇಳಿದರೆ ನಿಮಗೆ ನೀರು ಬರುವುದಿಲ್ಲ, ನೀವು ಮೇಲಿನ ಅಧಿಕಾರಿಗಳಿಗೆ ಕೇಳಿ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ ಎಂದರು.
ವಿಜಯಪುರ ತಾಲೂಕಾ ಉಪಾಧ್ಯಕ್ಷ ಮಹಾದೇವಪ್ಪ ತೇಲಿ ಅವರು ಮಾತನಾಡಿ, ೨ ದಿನದಲ್ಲಿ ಕೆರೆ ನೀರು ತುಂಬಿಸದಿದ್ದರೆ ಸಾವಿರಾರು ರೈತರೊಂದಿಗೆ ಕೆರೆಯಲ್ಲಿಯೆ ಕುಳಿತು ಧರಣಿ ಸತ್ಯಾಗ್ರಹ ಮಾಡಲಾಗುವುದು. ರೈತರ ನಿರ್ಣಯದಿಂದ ಅದು ಮುಂದೆ ಅಮರಣ ಉಪವಾಸ ಸತ್ಯಾಗ್ರಹ ಮಾಡಬಹುದು, ಅದಕ್ಕೆ ಅವಕಾಶ ನೀಡದೇ ಜಿಲ್ಲಾಧಿಕಾರಿಗಳು ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಕೆರೆ ತುಂಬಿಸುವಂತೆ ಆದೇಶ ನೀಡಬೇಕಾಗಿ ಸಮಸ್ತ ರೈತರೊಂದಿಗೆ ಆಗ್ರಹಿಸುತ್ತಾ ಇದ್ದೇವೆ ಎಂದರು.
ಈ ವೇಳೆ ಜಿಲ್ಲಾ ಗೌರವಾಧ್ಯಕ್ಷ ಕಲ್ಲಪ್ಪ ಪಾರಶೆಟ್ಟಿ, ಜಿಲ್ಲಾ ಸಂಚಾಲಕ ರಾಮನಗೌಡ ಪಾಟೀಲ, ತಾಲೂಕಾ ಉಪಾಧ್ಯಕ್ಷ ಪ್ರಕಾಶ ತೇಲಿ, ಸದಸ್ಯರಾದ ಪ್ರಭು ಕಾರಜೋಳ, ಬಸವರಾಜ ಮಸೂತಿ, ಶರಣಪ್ಪ ಜಮಖಂಡಿ, ಜಯಸಿಂಗ ರಜಪೂತ, ಸಂತೋಷ ಮುಡಗಿ, ಅನಮೇಶ ಜಮಖಂಡಿ, ರಾಮಸಿಂಗ ರಜಪೂತ, ಅಮೀತ ಡಿಗ್ಗಾಯಿ, ಮಹಾಂತೇಶ ಮಾಗಣಗೇರಿ, ಬಸವರಾಜ ಭೈರವಾಡಗಿ, ಆತ್ಮಾನಂದ ಭೈರವಾಡಗಿ, ರೇವಣಸಿದ್ಧ ಪೂಜಾರಿ, ಸಿದ್ಧಪ್ಪ ಕಾರಜೋಳ, ಸಂಗಪ್ಪ ಕೊಣಸಿರಸಗಿ, ಯಲ್ಲಪ್ಪ ದಿನ್ನಿ, ಬಸವಂತ ತೇಲಿ, ಗಣೇಶ ಸಮಗಾರ, ಕಲ್ಲಪ್ಪ ಸೋಲಾಪುರ, ಲಚ್ಚಾರಾಮ ರಜಪೂತ ಸೇರಿದಂತೆ ಅನೇಕರು ಇದ್ದರು.
” ಜಿಲ್ಲೆಯ ಎಲ್ಲಾ ೧೪೯ ಕೆರೆಗಳನ್ನು ತುಂಬಿದ್ದೇವೆ ಎಂದು ಹೇಳುತ್ತಿರುವ ಅಧಿಕಾರಿಗಳು ಖುದ್ದಾಗಿ ಸಮೀಕ್ಷೆ ಮಾಡಿ ಇದರಲ್ಲಿ ಅರ್ಧ ಮಾತ್ರ ಕೆರೆ ನೀರು ತುಂಬಿರುತ್ತಾರೆ, ಉಳಿದ ಅರ್ಧ ಕೆರೆ ತುಂಬದೇ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ, ಇದರಿಂದ ಜನ ಜಾನುವಾರುಗಳಿಗೆ ಈ ಭೀಕರ ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದೇ ಸಾಕಷ್ಟು ಕಷ್ಟ ಅನುಭವಿಸುವಂತಾಗಿದೆ. ಕೂಡಲೇ ಜಿಲ್ಲಾಧಿಕಾರಿಗಳು ಜಿಲ್ಲೆಯ ೧೪೯ ಕೆರೆಗಳನ್ನು ತುಂಬಿಸಿ ರೈತರಿಗೆ ಅನುಕೂಲಮಾಡಬೇಕು.”
– ಸಂಗಮೇಶ ಸಗರ,
ಜಿಲ್ಲಾಧ್ಯಕ್ಷರು, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

