ಬಸವನಬಾಗೇವಾಡಿ: ಜಗತ್ತಿನಲ್ಲಿ ಭಕ್ತಿ ಭಾವ ಕಡಿಮೆಯಾದರೆ ಸಮಾಜಕ್ಕೆ ಕಂಟಕವಾಗುತ್ತದೆ. ಈ ನಿಟ್ಟಿನಲ್ಲಿ ಭಕ್ತಿ ಭಾವ ಕಡಿಮೆಯಾಗದಂತೆ ಜನರು ಗಮನ ಹರಿಸುವುದು ತುಂಬಾ ಅಗತ್ಯವಿದೆ ಎಂದು ಸಿಂದಗಿಯ ಸಾರಂಗಮಠದ ಡಾ.ಪ್ರಭುಸಾರಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಉತ್ನಾಳ ಗ್ರಾಮದ ಮಹಾಲಕ್ಷ್ಮೀದೇವಿಯ ೩೧ ನೇ ಜಾತ್ರಾಮಹೋತ್ಸವದಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಧರ್ಮಸಭೆ, ಮುತ್ತೈದೆಯರ ಉಡಿ ತುಂಬುವ ಕಾರ್ಯಕ್ರಮ, ಶ್ರೀಮಠದ ಪುಸ್ತಕ ಬಿಡುಗಡೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಅನೇಕ ಮಠ-ಮಾನ್ಯಗಳು ಭಕ್ತರಿಗೆ ಅನೇಕ ಧಾರ್ಮಿಕ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತವೆ. ಇಂತಹ ಕಾರ್ಯಕ್ರಮಗಳಲ್ಲಿ ಜನರು ಹೆಚ್ಚು ಭಾಗವಹಿಸುವ ಮೂಲಕ ಧರ್ಮ ಮತ್ತು ಸಂಸ್ಕ್ರತಿಯನ್ನು ಅರಿತು ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸುಂದರವಾದ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕು. ಈಚೆಗೆ ಧರ್ಮ ಮತ್ತು ಸಂಸ್ಕ್ರತಿ ಮೊದಲಿನಂತೆ ಉಳಿಯುತ್ತಿಲ್ಲ. ಇದನ್ನು ಹೀಗೆ ಮುಂದುವರಿಯಲು ಬಿಟ್ಟರೆ ಸಮಾಜಕ್ಕೆ ಕಂಟಕವಾಗುತ್ತದೆ. ಇದನ್ನು ಅರಿತುಕೊಂಡು ಪ್ರತಿಯೊಬ್ಬರೂ ಧರ್ಮ, ಸಂಸ್ಕ್ರತಿಯನ್ನು ಉಳಿಸಿ ಬೆಳೆಸುವ ಕಾರ್ಯದಲ್ಲಿ ತೊಡಗಿಕೊಳ್ಳಬೇಕೆಂದರು.
ಪ್ರತಿವರ್ಷ ಉತ್ನಾಳದ ಹಿರೇಮಠವು ಮಹಾಲಕ್ಷ್ಮೀದೇವಿ ಜಾತ್ರಾಮಹೋತ್ಸವದಂಗವಾಗಿ ವಿವಿಧ ಧಾರ್ಮಿಕ, ಸಾಂಸ್ಕ್ರತಿಕ, ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡುವ ಮೂಲಕ ಎಲ್ಲ ಜನರಿಗೆ ಒಳಿತು ಮಾಡುತ್ತಿರುವ ಕಾರ್ಯ ಶ್ಲಾಘನೀಯ ಎಂದರು.
ಸಾನಿಧ್ಯ ವಹಿಸಿದ್ದ ಶಹಾಪುರದ ಸೂಗೂರೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಭೂಮಿಯಲ್ಲಿ ಜನ್ಮವೆತ್ತಿದ ಪ್ರತಿಯೊಂದು ಜೀವರಾಶಿಗೆ ಬದುಕು ನೀಡುವ ತಾಯಿ ಪೂಜನೀಯ. ಇಂತಹ ತಾಯಿಗೆ ಉಡಿ ತುಂಬುವ ಮೂಲಕ ಅವಳಿಗೆ ಕೃತಜ್ಞತೆಯನ್ನು ಸಲ್ಲಿಸಬೇಕು. ಭೂ ತಾಯಿಗೂ ಎಳ್ಳಅಮವಾಸ್ಯೆ ದಿನದಂದು ಉಡಿ ತುಂಬಿದರೆ, ಜೀವಂತ ತಾಯಂದಿರಿಗೆ ಪ್ರತಿಯೊಂದು ಪುಣ್ಯ ಕಾರ್ಯದಲ್ಲಿ ಉಡಿ ತುಂಬುವ ಮೂಲಕ ಧನ್ಯತಾ ಭಾವ ಅನುಭವಿಸುವದನ್ನು ನೋಡುತ್ತೇವೆ. ಈ ಜಾತ್ರಾಮಹೋತ್ಸವದಲ್ಲಿ ಸಾವಿರಾರು ಮುತ್ತೈದೆಯರಿಗೆ ಪ್ರತಿವರ್ಷ ಉಡಿ ತುಂಬುವ ಕಾರ್ಯ ನಡೆಯುತ್ತಿರುವದು ಶ್ಲಾಘನೀಯ ಎಂದರು.
ಕಾರ್ಯಕ್ರಮದಲ್ಲಿ ನಾಗಣಸೂರಿನ ಬೊಮ್ಮಲಿಂಗೇಶ್ವರ, ಬೃಹನ್ಮಠದ ಶ್ರೀಕಂಠ ಶಿವಾಚಾರ್ಯರು, ಕಲಕೇರಿಗೆಯ ಮಡಿವಾಳೇಶ್ವರ ಶಿವಾಚಾರ್ಯರು, ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಇದ್ದರು. ನೇತೃತ್ವವನ್ನು ಶ್ರೀಮಠದ ಮಹಾಲಕ್ಷ್ಮೀದೇವಿ ಆರಾಧಕ ಶಿವಪುತ್ರಯ್ಯ ಹಿರೇಮಠ ವಹಿಸಿದ್ದರು.
ನಿವೃತ್ತ ಎಸ್ಪಿ ಬಿ.ಐ.ಬೆಳ್ಳುಬ್ಬಿ,ಪ್ರಭು ಎಂ., ಎಸ್.ಎಸ್.ಗೊಳಸಂಗಿ, ಎಂ.ಬಿ.ಜಮಖಂಡಿ, ಬಿ.ಬಿ.ಬೋಸ್ಲೆ, ಶರಣಯ್ಯ ಹಿರೇಮಠ, ರವಿಕುಮಾರ ನಾಗೂರ, ಶರಣು ಮನ್ನಿಕಟ್ಟಿ, ಅಂಕಣಕಾರ ಪ್ರಶಾಂತ ರಿಪ್ಪನಪೇಟ, ಶರಣು ಸಜ್ಜನ, ಡಾ.ಪ್ರಶಾಂತ ಕಮತಗಿ, ಡಾ.ಸುನೀಲ ಪಾಟೀಲ, ಮಲ್ಲು ಅಲ್ಲಾಪುರ, ಶಶಿಕಲಾ ಹಿರೇಮಠ,ಗುರುಬಸಯ್ಯ ಕಟಗೇರಿಮಠ, ಬಸವರಾಜ ಬಿರಾದಾರ, ಮಲ್ಲಿಕಾರ್ಜುನ ಸಜ್ಜನ, ಡಾ.ಅಮರೇಶ ಮಿಣಜಗಿ ಇತರರು ಇದ್ದರು.
ಎಂ.ಎಸ್.ಸಜ್ಜನ ಸ್ವಾಗತಿಸಿದರು. ಎಂ.ಬಿ.ಟಕ್ಕಳಕಿ ನಿರೂಪಿಸಿದರು. ಸಂಗಮೇಶ ಹಿರೇಮಠ ವಂದಿಸಿದರು.
ಇದೇ ಸಂದರ್ಭದಲ್ಲಿ ಶ್ರೀಮಠದ ಶಿವಪುತ್ರಯ್ಯ ಹಿರೇಮಠ ಅವರ ಸುಪುತ್ರ ಡಾ.ಮಹಾಂತೇಶ ಹಿರೇಮಠ ಅವರು ಆಯುರ್ವೇದದಲ್ಲಿ ಎಂಡಿ ಪದವಿ ಪಡೆದ ಹಿನ್ನೆಲೆಯಲ್ಲಿ ಅವರನ್ನು ವಿವಿಧ ಶ್ರೀಗಳ ಸಾನಿಧ್ಯದಲ್ಲಿ ಸನ್ಮಾನಿಸಲಾಯಿತು.
ನೂರಾರು ಮುತ್ತೈದೆಯರಿಗೆ ಶಶಿಕಲಾ ಹಿರೇಮಠ ಅಮ್ಮನವರ ಸಾನಿಧ್ಯದಲ್ಲಿ ಉಡಿ ತುಂಬುವ ಕಾರ್ಯ ನೆರವೇರಿತು.
ಕಾರ್ಯಕ್ರಮಕ್ಕೂ ಮುನ್ನ ಬೆಳಗ್ಗೆ ಮಹಾಲಕ್ಷ್ಮೀದೇವಿ ಮೂರ್ತಿಗೆ ವಿಶೇಷ ರುದ್ರಾಭಿಷೇಕ, ಕುಂಕುಮಾರ್ಚನೆ, ಪೂಜೆ, ಚಂಡಿಹೋಮ, ಪಲ್ಲಕ್ಕಿ ಉತ್ಸವ ಸೇರಿದಂತೆ ವಿವಿಧ ಪೂಜಾ ಕಾರ್ಯಗಳು ಜರುಗಿದವು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.
Subscribe to Updates
Get the latest creative news from FooBar about art, design and business.
Related Posts
Add A Comment

