“ವೀಣಾಂತರಂಗ”- ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ
ಪ್ರತಿದಿನ ಮುಂಜಾನೆ ಯೋಗಾಸನದ ನಂತರ ಮನೆಯ ಮುಂದೆ ವಾಕ್ ಮಾಡುವುದು ನನ್ನ ರೂಢಿಯಾಗಿದೆ. ಇಂದು ಮುಂಜಾನೆ ನಾನು ವಾಕ್ ಮಾಡುತ್ತಿರುವಾಗ ಕಂಡ ಒಂದು ದೃಶ್ಯ ಮನಸ್ಸಿನಲ್ಲಿ ಅಚ್ಚೊತ್ತಿದಂತೆ ಪರಿಣಾಮ ಬೀರಿತು. ಭಾಷೆಗೆ ನಿಲುಕದ ಭಾವಗೀತೆಯ ಹಾಡಿದ ಅನುಭವವನ್ನು ಕಣ್ಣಾರೆ ಕಂಡಂತಾಯಿತು.
ಸಾಮಾನ್ಯವಾಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯವರು ಕೆಲವು ವರ್ಷಗಳ ಹಿಂದೆ ನಿಲ್ಲಿಸುವಂತೆ, ಗ್ರಾಹಕರ ಅಪೇಕ್ಷೆಯ ಮೇರೆಗೆ ಬೇಕು ಬೇಕಾದಲ್ಲಿ ಬಸ್ಸುಗಳನ್ನು ನಿಲ್ಲಿಸುವುದಿಲ್ಲವಷ್ಟೇ. ಆದರೆ ಇಂದು ಮುಂಜಾನೆ ನಮ್ಮ ಮನೆಯ ಮುಂದೆ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಸರ್ಕಾರಿ ಬಸ್ಸೊಂದು ಕೆಲ ಕ್ಷಣಗಳ ಕಾಲ ನಿಂತದ್ದು ನನ್ನ ಕುತೂಹಲಕ್ಕೆ ಕಾರಣವಾಯಿತು. ಯಾವುದೇ ಕಾರಣಕ್ಕೂ ನಡಿಗೆಯನ್ನು ನಿಲ್ಲಿಸದ ನಾನು ಗೇಟಿನೊಳಗಿನಿಂದಲೇ ನೋಡಿದಾಗ 60ರ ಆಸು ಪಾಸಿನ ವಯೋವೃದ್ಧನೊಬ್ಬನಿಗೆ ಬಸ್ಸಿನಲ್ಲಿದ್ದ ಬೇರೆ ಪ್ರಯಾಣಿಕರ ಸಹಾಯದಿಂದ ಹಸಿ ಮೆಣಸಿನಕಾಯಿಯನ್ನು ತುಂಬಿದ ಮೂರು ದೊಡ್ಡ ಚೀಲಗಳನ್ನು ಕೆಳಗಿಳಿಸಿ ಕೆಲವೇ ಸೆಕೆಂಡುಗಳಲ್ಲಿ ಆ ಬಸ್ಸು ಹೊರಟು ಹೋಯಿತು.
ತುಸು ಸೋಜಿಗದಿಂದಲೇ ಮನಸ್ಸಿನಲ್ಲಿ ಎಷ್ಟು ಒಳ್ಳೆಯ ಕೆಲಸ ಎಂದು ಯೋಚಿಸಿದೆ, ಜೊತೆಗೆ ವಯಸ್ಸಾದ ಅಜ್ಜ ಆ ಮೂರು ಚೀಲಗಳನ್ನು ಕೇವಲ ಅರವತ್ತೆಪ್ಪತ್ತು ಅಡಿ ದೂರದಲ್ಲಿರುವ ತರಕಾರಿ ಮಾರುಕಟ್ಟೆಗೆ ಹೇಗೆ ಒಯ್ಯುತ್ತಾನೆ ಎಂಬ ಕುತೂಹಲ ನನ್ನಲ್ಲಿ ಮೂಡಿತ್ತು. ಅಕಸ್ಮಾತ್ ಒಂದೊಂದೇ ಚೀಲವನ್ನು ಕೊಂಡೊಯ್ದು ಹಾಕಿ ಬರುವಾಗ ಯಾರಾದರೂ ಒಂದು ಚೀಲವನ್ನು ಲಪಟಾಯಿಸಿದರೆ ಎಂಬ ಅನಿಸಿಕೆ ಮೂಡಿ ನನ್ನ ಮರುಳುತನಕ್ಕೆ ನಾನೇ ಮನದಲ್ಲಿ ನಕ್ಕೆ.
ಮುಂದೆ ಅದರ ಬಗ್ಗೆ ಅಷ್ಟಾಗಿ ತಲೆ ಕೆಡಿಸಿಕೊಳ್ಳದೆ ನನ್ನ ವಾಕಿಂಗ್ ಮುಂದುವರೆಸಿದೆ. ಕೆಲ ನಿಮಿಷಗಳ ನಂತರ ನೋಡಿದಾಗ ಈಗಾಗಲೇ ಎರಡು ಚೀಲಗಳು ತರಕಾರಿ ಮಾರುಕಟ್ಟೆಯನ್ನು ಸೇರಿದ್ದವು. ಮೂರನೇ ಚೀಲವನ್ನು ರಸ್ತೆಯ ಆಚೆ ಬದಿಯಲ್ಲಿರುವ ಸಸಿಗಳನ್ನು ಮಾರುವ ನರ್ಸರಿಯ ವ್ಯಕ್ತಿ ತನ್ನ ಹೆಗಲ ಮೇಲೆ ಹೊತ್ತುಕೊಂಡು ಮಾರುಕಟ್ಟೆಯಲ್ಲಿ ಇಟ್ಟು ಬಂದನು. ಇದನ್ನು ಕಂಡ ನನಗೆ ಸೋಜಿಗದ ಜೊತೆ ಜೊತೆಗೆ ಅಪಾರ ಸಂತೋಷವಾಯಿತು.

ಕಳೆದ ಒಂದು ವರ್ಷದಿಂದ ರಸ್ತೆಯ ಆಚೆ ಬದಿಯಲ್ಲಿರುವ ಕಾಲೇಜಿನ ಆವರಣದ ಹೊರ ಭಾಗಕ್ಕೆ ಅಂಟಿಕೊಂಡಂತೆ ಪುಟ್ಟ ನರ್ಸರಿ ಯನ್ನು ತೆರೆದಿರುವ ಹೊರರಾಜ್ಯದ ಆ ವ್ಯಕ್ತಿಗೆ ಕನ್ನಡ ಭಾಷೆ ಬರುವುದಿಲ್ಲ. ಆತನೊಂದಿಗೆ ವ್ಯವಹರಿಸುವವರು ಕೂಡ ತಮಗೆ ಗೊತ್ತಿರುವ ಹರುಕು ಮುರುಕು ಹಿಂದಿಯಲ್ಲಿ ಮಾತನಾಡುತ್ತಾರೆ. ತನ್ನ ಇಬ್ಬರು ಜೊತೆಗಾರರೊಂದಿಗೆ ಇಲ್ಲಿಯೇ ಇರುವ ಆತ ತನ್ನ ನರ್ಸರಿಗೆ ಬೇಕಾಗುವ ನೀರನ್ನು ಪಕ್ಕದಲ್ಲಿಯೇ ಇರುವ ಪೆಟ್ರೋಲ್ ಬಂಕ್ ನಿಂದ ಪಡೆಯುತ್ತಾನೆ ಅಲ್ಲಿಯೂ ಕೂಡ ಯಾವುದೇ ಹಣವನ್ನು ಆತನಿಂದ ನಿರೀಕ್ಷಿಸದ ಪೆಟ್ರೋಲ್ ಬಂಕ್ ಮಾಲೀಕರ ಔದಾರ್ಯಕ್ಕೆ ಬದಲಾಗಿ ಆ ಪೆಟ್ರೋಲ್ ಬಂಕಿನ ಪುಟ್ಟ ಉದ್ಯಾನದ ಗಿಡಗಳಿಗೆ ನೀರು ಹಾಕುವುದು, ಸಸಿಗಳನ್ನು ಪಾಲಿಸುವುದನ್ನು ಆತ ಮಾಡುತ್ತಾನೆ. ಮತ್ತೆ ಹಲವಾರು ಬಾರಿ ಪುರಸಭೆಯ ಟ್ಯಾಂಕರ್ನಿಂದ ನೀರನ್ನು ತರಿಸಿಕೊಳ್ಳುತ್ತಾನೆ.
ಭಾಷೆಯೇ ಬಾರದ ಆ ಹಳ್ಳಿಯ ವೃದ್ಧ ವ್ಯಕ್ತಿ ಮತ್ತು ಆತನ ನಡುವೆ ನಡೆದಿರಬಹುದಾದ ಸನ್ನೆಯ ಸಂಭಾಷಣೆಯನ್ನು ಊಹಿಸಿ ವೃದ್ಧನಿಗೆ ನರ್ಸರಿಯ ವ್ಯಕ್ತಿ ಸಹಾಯ ಮಾಡಿದ ಎಂದಾಗ ನನ್ನ ಮನಸ್ಸಿನಲ್ಲಿ ಹಾದು ಹೋದದ್ದು ಮೂಕ ಹಕ್ಕಿಯು ಹಾಡುತಿದೆ ಭಾಷೆಗೆ ನಿಲುಕದ ಭಾವಗೀತೆ ಎಂಬ ಚಲನಚಿತ್ರ ಗೀತೆ.
ಯಾರೂ ಇಲ್ಲದ ನಿರ್ಜನ ರಸ್ತೆಯಲ್ಲಿ ಯಾರೋ ಒಬ್ಬ ವ್ಯಕ್ತಿ ಹೆಣ್ಣು ಮಕ್ಕಳು ಮತ್ತು ಮಕ್ಕಳೊಂದಿಗೆ ನಿಂತಿದ್ದರೆ ಸೌಜನ್ಯಕ್ಕಾಗಿಯಾದರೂ ಏನಾದರೂ ಸಹಾಯ ಬೇಕೆ ಎಂದು ಕೇಳುವುದು ಮತ್ತು ಅಗತ್ಯ ಬಿದ್ದರೆ ಸಹಾಯ ಮಾಡುವುದು, ರಸ್ತೆಯಲ್ಲಿ ನಡೆಯುತ್ತಿರುವಾಗ ಆಕಸ್ಮಿಕ ಅಪಘಾತ ಸಂಭವಿಸಿ ಎಚ್ಚರ ತಪ್ಪಿ ಬಿದ್ದ ವ್ಯಕ್ತಿಯನ್ನು ಉಪಚರಿಸುವುದು, ಸಂತೆಯಲ್ಲಿ ಕಳೆದು ಹೋದ ಮಗುವನ್ನು ಸುರಕ್ಷಿತವಾಗಿ ಪಾಲಕರಿಗೆ ತಲುಪುವಂತೆ ಮಾಡಲು ಆ ಮಗುವನ್ನು ಪೊಲೀಸರ ಸುಪರ್ದಿಗೆ ಒಪ್ಪಿಸುವುದು ಇಂತಹ ಹತ್ತು ಹಲವಾರು ಕೆಲಸಗಳು ಮಾನವೀಯ ಹಿನ್ನೆಲೆಯಲ್ಲಿ ಅದ್ಭುತ ಕಾರ್ಯಗಳೆನಿಸುತ್ತವೆ. ಎಷ್ಟೋ ಬಾರಿ ಈ ರೀತಿ ತ್ವರಿತ ಕಾರ್ಯನಿರ್ವಹಣೆಯು ವ್ಯಕ್ತಿಯ ಜೀವವನ್ನು ಉಳಿಸುತ್ತದೆ.
ಅದೆಷ್ಟು ಚಂದ ಅಲ್ಲವೇ ಸ್ನೇಹಿತರೆ, ಮಾತೆ ಬಾರದೆ ಕೇವಲ ಮೌನ ಸಂಭಾಷಣೆ ಇಲ್ಲವೇ ಸನ್ನೆಗಳ ಮೂಲಕ ಪರಸ್ಪರ ನೆರವಾಗುವುದು ಭಾವಗಳನ್ನು ಅರಿಯುವುದು ಮನುಷ್ಯ ಮನುಷ್ಯರ ನಡುವಿನ ಬಾಂಧವ್ಯಕ್ಕೆ ಉತ್ತಮ ವೇದಿಕೆಯಾಗಬಲ್ಲದು. ಇಂತಹ ಸಮಯಗಳಲ್ಲಿ ಯಾರು ಯಾರದೇ ಜಾತಿ ಮತ ಪಂಥವನ್ನು ಕೇಳದೆ ಸಹಾಯ ಮಾಡುವುದೇ ವಿಶ್ವಮಾನವ ಧರ್ಮ. ಅದು ನಮ್ಮ ನಿಮ್ಮೆಲ್ಲರಲ್ಲಿಯೂ ಅಂತರ್ಗತವಾಗಿದೆ. ಇಲ್ಲದ ತೊಂದರೆಗಳಿಗೆ ಈಡು ಮಾಡುತ್ತದೆ ಎಂಬ ಭಯದಿಂದ ಕೆಲವೊಮ್ಮೆ ಹಿಂಜರಿದರೂ ಪ್ರಸ್ತುತ ಜಗತ್ತಿನಲ್ಲಿ ಈ ಮಾನವೀಯ ನೆಲೆಯ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ಅಂತಹ ಮಾನವಿಯ ಪ್ರಜ್ಞೆಯನ್ನು ನಾವೆಲ್ಲರೂ ಹೊಂದುವ. ಆ ಮೂಲಕ ಆಧ್ಯಾತ್ಮ ಭಾರತದ ಔನ್ಯತ್ಯಕ್ಕೆ ಕಾರಣರಾಗೋಣ.
– ವೀಣಾ ಹೇಮಂತ್ ಗೌಡ ಪಾಟೀಲ್, ಮುಂಡರಗಿ-ಗದಗ

