ವಿಜಯಪುರ: ಒಂದು ಆಸ್ಪತ್ರೆಯು ಅತ್ಯುತ್ತಮ ಸೇವೆ ನೀಡುತ್ತಿದೆ ಎನ್ನುವುದು ನಮಗೆ ತಿಳಿದು ಬರುವುದು ಅಲ್ಲಿರುವ ಸೌಕರ್ಯಗಳಿಗಿಂತ ಅಲ್ಲಿರುವ ಚಿಕಿತ್ಸೆ ಹಾಗೂ ತೆಗದುಕೊಳ್ಳುವ ಕಾಳಜಿಯಿಂದ. ಯಾವ ಆಸ್ಪತ್ರೆಯಲ್ಲಿ ನರ್ಸಿಂಗ್ ಸೇವೆ ಅತ್ಯುತ್ತಮವಾಗಿರುತ್ತದೆಯೋ ಆ ಆಸ್ಪತ್ರೆ ರೋಗಿಗಳ ಪಾಲಿಗೆ ಸಂಜೀವಿನಿಯಾಗಿರುತ್ತದೆ. ಆ ಕಾಣದಿಂದಾಗಿಯೇ ವೈದ್ಯರು ಆಸ್ಪತ್ರೆಯ ಮೆದುಳಾದರೆ ಶುಶ್ರೂಶಕರು ಆಸ್ಪತ್ರೆಯ ಬೆನ್ನೆಲುಬು ಇದ್ದಂತೆ ಎಂದು ಜೆಎಸ್‌ಎಸ್ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಶರಣ ಮಳಖೇಡ್ಕರ್ ತಿಳಿಸಿದರು.
ಸೋಮವಾರ ನಗರದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಶುಶ್ರೂಶಕರ ದಿನಾಚರಣೆಯ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಾಗೂ ಹೊದಿಕೆಯನ್ನು ವಿತರಿಸಿ ಮಾತನಾಡಿದ ಅವರು; ಯಾವುದೇ ಒಂದು ಆಸ್ಪತ್ರೆಯಾಗಿದ್ದರು ಕೇವಲ ಒಂದೇ ವಿಭಾಗದಿಂದ ಮುಂದೆ ಬರುತ್ತದೆ ಎಂದುಕೊಂಡರೆ ತಪ್ಪಾಗುತ್ತದೆ. ಇಲ್ಲಿ ಯಾವುದೇ ಕಾರ್ಯವಾದರೂ ಕೂಡ ತಂಡಕಾರ್ಯವಾಗಿ ಮಾರ್ಪಡುತ್ತದೆ. ಒಬ್ಬರಿಗೊಬ್ಬರು ಹೆಗಲು ನೀಡಿ ದುಡಿದಾಗ ಮಾತ್ರ ಅತ್ಯುತ್ತಮವಾದ ಸೇವೆ ನೀಡುವುದಕ್ಕೆ ಸಾಧ್ಯವಾಗುತ್ತದೆ. ಅದರಲ್ಲೂ ವೈದ್ಯರು ರೋಗಿಯ ರೋಗವನ್ನು ಪತ್ತೆ ಮಾಡಿ ಅದಕ್ಕೆ ಪೂರಕವಾದ ಚಿಕಿತ್ಸೆಯನ್ನು ತಿಳಿಸಿದ ಮೇಲೆ ಆ ರೋಗಿಯ ಸಂಪೂರ್ಣ ಜವಾಬ್ದಾರಿ ಅಲ್ಲಿನ ಶುಶ್ರೂಶಕರ ಮೇಲೆ ಇರುತ್ತದೆ. ಅದನ್ನು ಅವರು ಸಮರ್ಪಕವಾಗಿ ನಿಭಾಯಿಸಿದಾಗ ಮಾತ್ರ ರೋಗಿಯು ಗುಣಮುಖವಾಗಿ ಹೊರ ಹೋಗುತ್ತಾನೆ. ಈ ನಿಟ್ಟಿನಲ್ಲಿ ನೋಡಲಾಗಿ ಆಸ್ಪತ್ರೆಯಲ್ಲಿ ಶುಶ್ರೂಶಕರ ಕಾರ್ಯ ನಿಜಕ್ಕೂ ಅಮೋಘವಾದುದ್ದು. ಅದರಲ್ಲೂ ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳುವ ವ್ಯಕ್ತಿ ಸಂಪೂರ್ಣವಾಗಿ ಸಮರ್ಪಣಾ ಮನೋಭಾವದಿಂದ ಕಾರ್ಯ ಮಾಡಬೇಕಾದ ಕಾರಣ ಇವರ ಸೇವೆಗೆ ಸದಾ ನಾವುಗಳು ಬೆಂಬಲವಾಗಿ ನಿಲ್ಲಬೇಕಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಬೆಂಗಳೂರಿನ ಬಸವರಾಜಸ್ವಾಮಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯರಾದ ಪ್ರೋ. ಪ್ರತಿಮಾ ಎಸ್; ಬದಲಾದ ಕಾಲಘಟ್ಟಕ್ಕೆ ಅನುಗುಣವಾಗಿ ಇಂದು ನರ್ಸಿಂಗ್ ಕ್ಷೇತ್ರವು ಕೂಡ ಬದಲಾಗುತ್ತ ಸಾಗಿದೆ. ಇದರ ಮೂಲಕ ಆಸ್ಪತ್ರೆಯ ಅವಿಭಾಜ್ಯ ಅಂಗವಾಗಿ ನರ್ಸಿಂಗ್ ಸೇವೆ ಗುರುತಿಸಿಕೊಳ್ಳುತ್ತಿದೆ. ವೈದ್ಯರ ರೋಗ ನಿರ್ಧಾರ ಹಾಗೂ ಚಿಕಿತ್ಸಾ ಕ್ರಮ ಎಷ್ಟು ಮುಖ್ಯವಾಗಿದೆಯೋ ಅದಕ್ಕೂ ಮಿಗಿಲಾದ ಕಾರ್ಯ ನರ್ಸಿಂಗ್ ಸಿಬ್ಬಂದಿಗಳ ಮೇಲಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದಲ್ಲಿ ನರ್ಸಿಂಗ್ ಕೋರ್ಸ ಮುಗಿಸಿಕೊಂಡು ಬಂದ ವಿದ್ಯಾರ್ಥಿಗಳು ಅತ್ಯುತ್ತಮವಾದ ಸೇವೆ ಒದಗಿಸುತ್ತಿದ್ದು ಅದಕ್ಕೆ ಪೂರಕವಾದ ವಾತವರಣ ಈಗ ಉತ್ತರ ಕರ್ನಾಟಕದ ನೆಲದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ. ಅದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಇನ್ನೋರ್ವ ಅತಿಥಿಗಳಾದ ಕಲಬುರ್ಗಿಯ ಶಾರದಾದೇವಿ ನರ್ಸಿಂಗ್ ಕಾಲೇಜಿನ ಪ್ರಾಚಾರ್ಯ ಪ್ರೋ.ಸ್ನೇಹಲತಾ ಪಿ ಅವರು ಮಾತನಾಡಿ; ನಮ್ಮ ರಾಜ್ಯದಲ್ಲಿ ನರ್ಸಿಂಗ್ ತರಬೇತಿಯನ್ನು ಪಡೆದುಕೊಂಡ ವಿದ್ಯಾರ್ಥಿಗಳಿಗೆ ವಿದೇಶದಲ್ಲಿಯೂ ಭಾರೀ ಬೇಡಿಕೆ ಇದೆ. ಅದರಲ್ಲೂ ಇಂದು ಆಸ್ಪತ್ರೆಯ ಗುಣಮಟ್ಟ ನಿರ್ಧಾರಣೆಯಲ್ಲಿ ನರ್ಸಿಂಗ್ ಕೇರ್ ಕೂಡ ಒಂದಾಗಿದ್ದು ನರ್ಸಿಂಗ್ ಸೇವೆಗೆ ಇಂದು ವಿಶೇಷ ಮಾನ್ಯತೆ ಸಿಗುತ್ತಿದೆ. ಇದುವರೆಗೂ ಸಿಸ್ಟರ್ ಹಾಗೂ ಬ್ರದರ್ ಎನ್ನುವ ಸಂಬೋಧನೆಗೆ ಒಳಗಾಗುತ್ತಿದ್ದ ನರ್ಸಗಳು ಇಂದು ನರ್ಸಿಂಗ್ ಆಫಿಸರ್‌ಗಳು ಎಂದು ಕರೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ಈ ವೃತ್ತಿಗೆ ಬಂದವರು ನಿಜಕ್ಕೂ ಸಂತೃಪ್ತರಾಗುವುದಕ್ಕೆ ಸಾಧ್ಯವಿದೆ. ಹೀಗಾಗಿ ಈ ವೃತ್ತಿಯನ್ನು ಆಯ್ಕೆ ಮಾಡಿಕೊಂಡ ಪ್ರತಿಯೊಬ್ಬರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿದರು. ಡಾ.ರವೀಂದ್ರ ತೋಟದ ಹಾಗೂ ಸಿಬ್ಬಂದಿಗಳು ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಡಾ.ಸುನೀಲ್ ಸೇರಿದಂತೆ ಸರ್ವ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

