ವಿಜಯಪುರ: ಸಮಾಜದಲ್ಲಿ ಸಮಾನತೆ, ಭ್ರಾತತ್ವ, ನೈತಿಕತೆ ಸಾರಿದ ವಿಶ್ವಗುರು ಬಸವಣ್ಣನವರ ತತ್ತ್ವಗಳನ್ನು ಅಳವಡಿಸಿಕೊಳ್ಳುವುದರ ಮೂಲಕ ಜಾತೀಯತೆ ತೊಡೆದುಹಾಕಲು ಸಾಧ್ಯ. ಇಂದಿನ ಬದುಕಿಗೆ ಬಸವಣ್ಣನವರ ವಚನಗಳೇ ದಿವ್ಯಶಕ್ತಿ ಎಂದು ಆದರ್ಶ ನಗರದ ಪಿಎಸೈ ಸುರೇಶ ಮಂಟೂರ ಹೇಳಿದರು.
ಅವರು ನಗರದ ಆಲಕುಂಟೆ ನಗರದ ಸಿದ್ದಿವಿನಾಯಕ ದೇವಸ್ಥಾನದಲ್ಲಿ ರವಿವಾರದಂದು ಭಾರತ ಯುವ ವೇದಿಕೆ ಚಾರಿಟೇಬಲ್ ಫೌಂಡೇಶನ್ ಹಾಗೂ ಪಿನ್ಯಾಕಲ್ ಕರಿಯರ್ ಬಿಲ್ಡರ್ಸ್ ಅವರ ಸಂಯುಕ್ತಾಶ್ರಯದಲ್ಲಿ ಬಸವ ಜಯಂತಿ ನಿಮಿತ್ತ ‘ಇಂದಿನ ಬದುಕಿನಲ್ಲಿ ಬಸವಣ್ಣನವರ ವಚನಗಳ ಪ್ರಸ್ತುತತೆ’ ಚಿಂತನಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ಉಪನ್ಯಾಸ ನೀಡಿದ ಸಾಹಿತಿ ಆರ್ ಎಸ್ ಪಟ್ಟಣಶೆಟ್ಟಿ ಮಾತನಾಡಿ, ಸಮತೆ, ವಿಶ್ವಬಾಂಧವ್ಯ,ವ್ಯಕ್ತಿ ಸ್ವಾತಂತ್ರ್ಯ,ಸತ್ಯ, ಅಹಿಂಸೆ, ದಯಾಪರತೆಯಂತಹ ತತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗ ಪ್ರವರ್ತಕ ಬಸವಣ್ಣನವರ ಜೀವನ ಇಂದಿನ ಪೀಳಿಗೆಗೆ ಆದರ್ಶಪ್ರಾಯವಾದುದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಶಿಕ್ಷಕ ಸಾಹಿತಿ ಸಂತೋಷ ಬಂಡೆ ಮಾತನಾಡಿ, ಇಂದು ನಿಸರ್ಗ ಸಮತೋಲನ ಕಳೆದುಕೊಂಡು ಜಾಗತೀಕರಣವು ತುಚ್ಚೀಕರಿಸುತ್ತಾ ಸಾಗುತ್ತಿದೆ. ಇಂತಹ ಪ್ರಕ್ಷುಬ್ಧ ವಾತಾವರಣದಲ್ಲಿ ಬಸವಣ್ಣನವರ ಚಿಂತನೆಗಳು ನಮಗೆ ಮಾರ್ಗದರ್ಶನವಾಗಿ, ಜನತೆಗೆ ಶಾಂತಿ, ಸೌಖ್ಯ, ಸಾಮರಸ್ಯ, ಸೌಹಾರ್ದತೆಗಳಿಂದ ಬಾಳಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಫೌಂಡೇಶನ್ ಅಧ್ಯಕ್ಷ ಸುನೀಲ ಜೈನಾಪುರ ಮಾತನಾಡಿ, ಜಗತ್ತು ಇಂದು ಬಸವಣ್ಣನವರ ವಚನ ಸಾಹಿತ್ಯದ ಮೇಲೆ ನಿಂತಿದೆ. ಇಂದಿನ ಯುವಕರು ಬಸವಣ್ಣನವರ ವಚನಗಳನ್ನು ನಿತ್ಯ ಪಠಿಸುವುದರಿಂದ ಅವರ ಜೀವನ ಪರಿಶುದ್ಧವಾಗುತ್ತದೆ. ಬಸವಣ್ಣನವರು ನಮಗೆ ದಾರಿ ದೀಪ. ಅವರು ನುಡಿದಂತೆ ನಡೆದವರು ಎಂದರು.
ಶಿಕ್ಷಕರಾದ ಬಾಪುರಾಯ ಮೇಡೆಗಾರ, ಶಿವಕುಮಾರ ನೇಕಾರ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಶಿಕ್ಷಕ ಸಂತೋಷ ಹೆಗಡೆ,ಉಪನ್ಯಾಸಕಿ ಮಂಜುಳಾ, ಹಿರಿಯರಾದ ಮಹೇಶ ಪತ್ತಾರ, ಮಲ್ಲಪ್ಪ ದೇಸಾಯಿ, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನವ್ಯಶ್ರೀ ಪತ್ತಾರ ನಿರೂಪಿಸಿದರು. ಪ್ರಜ್ಞಾ ಲೋಣಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

