ಬಸವನಬಾಗೇವಾಡಿ: ಮುಂದಿನ ಜನಾಂಗದ ಭವಿಷ್ಯ ಜೋಡೆತ್ತಿನ ಕೃಷಿಕರ ಮೇಲಿದೆ. ರೈತ ಬಾಂಧವರು ಜೋಡೆತ್ತುಗಳ ಮಹತ್ವ ಅರಿತು ಅವುಗಳನ್ನು ಉಳಿಸಿ ಬೆಳೆಸುವ ಕೆಲಸವಾಗಬೇಕು. ಇಂದು ಎತ್ತುಗಳ ಸಂಖ್ಯೆ ಕಡಿಮೆಯಾಗಿದ್ದರಿಂದ ಕೃಷಿ ಅವಲಿಂಬಿತ ಉದ್ಯೋಗಗಳು ನಶಿಸುತ್ತಿವೆ ಎಂದು ಅಬಿ ಪೌಂಢೇಶನ್ ಸಂಸ್ಥಾಪಕ ಬಸವರಾಜ ಬಿರಾದಾರ ಹೇಳಿದರು.
ಪಟ್ಟಣದ ಇಂಗಳೇಶ್ವರ ರಸ್ತೆಯಲ್ಲಿನ ವಿರಕ್ತಮಠದ ಗವಿ ತೋಟದ ಆವರಣದ ಹತ್ತಿರದ ಬಸವ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಭಾನುವಾರ ಅಬಿ ಪೌಂಢೇಶನ್ ಹಾಗೂ ವಿರಕ್ತಮಠದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನದಲ್ಲಿ ಮಾತನಾಡಿದ ಅವರು, ಪರಮ ಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಜೋಡೆತ್ತಿನ ಕೃಷಿ ಪುನಶ್ಚೇತನದ ಉದ್ದೇಶದಿಂದ ಸಿದ್ದೇಶ್ವರರ ಜನ್ಮಸ್ಥಳ ಬಿಜ್ಜರಗಿಯಿಂದ ನಂದಿಯಾತ್ರೆಯನ್ನು ಆರಂಭಿಸಲಾಗಿತ್ತು. ಈ ನಂದಿಯಾತ್ರೆಯಿಂದಾಗಿ ಅನೇಕ ಕಡೆಗಳಲ್ಲಿ ಜೋಡೆತ್ತು ಸಂರಕ್ಷಣೆಗೆ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 30 ಜೋಡೆತ್ತು ಸಂಘಗಳನ್ನು ರಚಿಸಲಾಗಿದೆ. ಇಂದು ಜೋಡೆತ್ತುಗಳನ್ನು ಉಳಿಸಿದರೆ ಮಾತ್ರ ಮುಂದೆ ನಮಗೆ ಅನ್ನ ಸಂಪತ್ತು ಸಿಗುತ್ತದೆ ಎಂಬ ಜಾಗೃತಿ ಮೂಡಿಸುವುದು ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನದ ಉದ್ದೇಶವಾಗಿದೆ ಎಂದು ಹೇಳಿದರು.
ಜೋಡೆತ್ತಿನ ಕೃಷಿ ನಾಶವಾಗುತ್ತಿರುವ ಇಂದಿನ ಕಾಲದಲ್ಲಿ ಜೋಡೆತ್ತಿನ ಕೃಷಿ ಅವಲಂಬಿತ ಉದ್ಯೋಗಗಳು ನಶಿಸಿಹೋಗುತ್ತಿವೆ. ಬಹು ಕಾಯಕಗಳಿಗೆ ಮೂಲ ಬೇರಾದ ಜೋಡೆತ್ತಿನ ಕೃಷಿಯನ್ನು ಉಳಿಸಿದರೆ ಮಾತ್ರ ಕಾಯಕಗಳಿಗೆ ಭದ್ರತೆ ಒದಗಿಸಲು ಸಾಧ್ಯ. ಜೋಡೆತ್ತುಗಳನ್ನು ಉಳಿಸಿ ಬೆಳೆಸಲು ಸರ್ಕಾರ ಪ್ರೋತ್ಸಾಹ ನೀಡುವ ಅಗತ್ಯತೆ ಇದೆ ಎಂದು ಹೇಳಿದರು.
ಜೋಡೆತ್ತುಗಳನ್ನು ಹೊಂದಿದವರು, ಅವುಗಳನ್ನು ಉಳಿಸಿ ಬೆಳೆಸಲು ಪ್ರೋತ್ಸಾಹಿಸುತ್ತಿರುವವರೇ ಶ್ರೀಮಂತರು. ಇದು ಶ್ರೀಮಂತರ ಸಮ್ಮೇಳನವಾಗಿದೆ. ಜೋಡೆತ್ತಿನ ಕೃಷಿ ಉಳಿದರೆ ಮಾತ್ರ ನಾಗರಿಕತೆ ಉಳಿಯಲು ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಹೇಳಿದರು.
ಸಾನಿಧ್ಯ ವಹಿಸಿದ್ಧ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ. ಇಂದು ವಾಣಿಜ್ಯ ಬೆಳೆಗೆ ಬೆನ್ನು ಹತ್ತಿರುವ ರೈತ ಭೂಮಿಗೆ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿಯ ಸತ್ವ ಕಡಿಮೆಯಾಗುತ್ತಿದೆ. ಹಿರಿಯರು ಹಾಕಿಕೊಟ್ಟಿರುವ ಕೃಷಿ ಪದ್ಧತಿಗೆ ಮತ್ತೇ ಮರಳಬೇಕು. ಅವರ ಜೀವನಶೈಲಿ ಅನುಸರಿಸಬೇಕು. ಪ್ರತಿ ಮನೆಯಲ್ಲೂ ಜೋಡೆತ್ತುಗಳನ್ನು ಕಟ್ಟುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಪ್ರತಿಯೊಬ್ಬರೂ ಸಾಂಪ್ರದಾಯಿಕ ಕೃಷಿ ಪದ್ಧತಿಯ ಮಹತ್ವ ಅರಿತುಕೊಳ್ಳಬೇಕು. ಎತ್ತುಗಳು ಸೇರಿದಂತೆ ದನಕರುಗಳನ್ನು ಸಾಕುವತ್ತ ಹೆಚ್ಚಿನ ಗಮನ ಹರಿಸಬೇಕು ಜೋಡೆತ್ತುಗಳ ಮಹತ್ವ ತಿಳಿಸುತ್ತಿರುವ ಬಸವರಾಜ ಬಿರಾದಾರ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಪಿ.ಕೆ.ಪಿ.ಎಸ್ ಅಧ್ಯಕ್ಷ ಸಂಗನಗೌಡ ಪಾಟೀಲ ಮಾತನಾಡಿ, ಎತ್ತುಗಳನ್ನು ಖರೀದಿಸುವ ರೈತರಿಗೆ ನಮ್ಮ ಬ್ಯಾಂಕ್ ನಿಂದ ಶೇ.1 ಬಡ್ಡಿ ದರದಲ್ಲಿ ರೂ.2 ಲಕ್ಷ ಸಾಲ ನೀಡಲಾಗುವುದು. ಆಕಳುಗಳನ್ನು ಖರೀದಿಸಲು ರೂ.10 ಲಕ್ಷದ ವರೆಗೆ ಶೇ.3 ರಷ್ಟು ಬಡ್ಡಿ ದರದಲ್ಲಿ ಸಾಲ ಸೌಲಭ್ಯ ನೀಡಲಾಗುವುದು. ಪ್ರತಿ ವರ್ಷ ಉತ್ತಮ ಆಕಳುಗಳಿಗೆ ನಗದು ಬಹುಮಾನ ನೀಡಲಾಗುವುದು ಎಂದು ಹೇಳಿದರು.
ಧುರೀಣ ಶಿವನಗೌಡ ಬಿರಾದಾರ, ರೈತ ಸಿದ್ರಾಮಪ್ಪ ಬಾಗೇವಾಡಿ ಮಾತನಾಡಿದರು.
ಬಸವರಾಜ ಹಾರಿವಾಳ, ಬಸಣ್ಣ ದೇಸಾಯಿ, ಸಂಗಮೇಶ ಓಲೇಕಾರ, ಅಶೋಕ ಹಾರಿವಾಳ, ಶೇಖರ ಗೊಳಸಂಗಿ, ಸಂಗಣ್ಣ ಕಲ್ಲೂರ, ಉಮೇಶ ಹಾರಿವಾಳ, ನಿಂಗಪ್ಪ ಜೈನಾಪುರ, ವಕೀಲ ಕುಮಾರ ಬೀರಲದಿನ್ನಿ ಕೃಷಿ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜ ಕೋನರಡ್ಡಿ ಇದ್ದರು.
ಮಹಾಂತೇಶ ಆದಿಗೊಂಡ ಸ್ವಾಗತಿಸಿದರು. ಎಚ್.ಬಿ.ಬಾರಿಕಾಯಿ ನಿರೂಪಿಸಿದರು. ಶಿವು ಮಡಿಕೇಶ್ವರ ವಂದಿಸಿದರು.
ಜೋಡೆತ್ತುಗಳನ್ನು ಪೂಜೆ ಮಾಡುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದು ವಿಶೇಷವಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ
ತಳಿರು ತೊರಣಗಳಿಂದ ಅಲಂಕಾರ ಮಾಡಿದ್ದ ಜೋಡೆತ್ತುಗಳ ಬಂಡಿಗಳ ಮೆರವಣಿಗೆಗೆ ವಿರಕ್ತಮಠದ ಆವರಣದಲ್ಲಿ ಗಣ್ಯರು ಚಾಲನೆ ನೀಡಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆದ ಮೆರವಣಿಗೆಯಲ್ಲಿ 200ಕ್ಕೂ ಹೆಚ್ಚು ಜೋಡೆತ್ತುಗಳ ಬಂಡಿಗಳು ಜನರನ್ನು ಗಮನ ಸೆಳೆದವು. ಮೆರವಣಿಗೆಯಲ್ಲಿ ಬಸವಣ್ಣ, ಛತ್ರಪತಿ ಶಿವಾಜಿ ಮಹಾರಾಜ, ಹನುಮಂತ, ಶಿವಲಿಂಗೇಶ್ವರ ಪ್ರತಿಮೆ, ಭಾರತ ಮಾತಾ ಭಾವಚಿತ್ರ ಗಮನ ಸೆಳೆದವು.
Subscribe to Updates
Get the latest creative news from FooBar about art, design and business.
Related Posts
Add A Comment

