ಚುನಾವಣಾ ಆಯೋಗದ ಆಯುಕ್ತರಿಗೆ ಪತ್ರ ಬರೆದ ಪತ್ರಿಕಾ ಸಂಸ್ಥೆಗಳು
ನವದೆಹಲಿ: ಮೂರನೇ ಹಂತದ ಮತದಾನದ ನಂತರವೂ ಒಂದೇ ಒಂದು ಪತ್ರಿಕಾಗೋಷ್ಠಿಯನ್ನು ನಡೆಸದ ಚುನಾವಣಾ ಆಯೋಗದ ಕ್ರಮವನ್ನು ಖಂಡಿಸಿ ಭಾರತದ ಐದು ಪತ್ರಿಕಾ ಸಂಸ್ಥೆಗಳು ಇಂದು ಮುಖ್ಯ ಚುನಾವಣಾ ಆಯುಕ್ತರಿಗೆ ಪತ್ರವನ್ನು ಬರೆದಿವೆ.
ಪ್ರೆಸ್ ಕ್ಲಬ್ ಆಫ್ ಇಂಡಿಯಾ, ಇಂಡಿಯನ್ ವುಮೆನ್ ಪ್ರೆಸ್ ಕಾರ್ಪೊರೇಷನ್, ಪ್ರೆಸ್ ಅಸೋಸಿಯೇಷನ್, ವಿದೇಶಿ ವರದಿಗಾರರ ಕ್ಲಬ್ ಮತ್ತು ದೆಹಲಿ ಯೂನಿಯನ್ ಆಫ್ ಜರ್ನಲಿಸ್ಟ್ ಸಂಸ್ಥೆಗಳ ಅಧ್ಯಕ್ಷರು ಸಹಿ ಹಾಕಿರುವ ಪತ್ರದಲ್ಲಿ ಚುನಾವಣಾ ಆಯೋಗವು ಮೂರು ಹಂತಗಳ ಮತಗಳ ಸಂಪೂರ್ಣಅಂಕಿ-ಅಂಶಗಳನ್ನು ಬಿಡುಗಡೆ ಮಾಡಿಲ್ಲ ಎಂದು ಹೇಳಿ ಆಘಾತ ಮತ್ತು ಆಶ್ಚರ್ಯವನ್ನು ವ್ಯಕ್ತಪಡಿಸಿದೆ.
ಈ ಬೆಳವಣಿಗೆಗಳು ಚುನಾವಣೆಯ ನ್ಯಾಯಸಮ್ಮತತೆಯ ಬಗ್ಗೆ ಜನರ ಮನಸ್ಸಿನಲ್ಲಿ ಆತಂಕಕ್ಕೆ ಕಾರಣವಾಗಿವೆ ಎಂದು ಪತ್ರದಲ್ಲಿ ಹೇಳಲಾಗಿದೆ. 2019ರವರೆಗೆ ಅಂದರೆ ಕಳೆದ ಸಾರ್ವತ್ರಿಕ ಚುನಾವಣೆಯವರೆಗೆ, ಪ್ರತಿ ಹಂತದಲ್ಲಿ ಮತದಾನದ ನಂತರ ಪತ್ರಿಕಾಗೋಷ್ಠಿ ನಡೆಸುವುದು ಸಾಮಾನ್ಯವಾಗಿತ್ತು. ಮತದಾನದ ದಿನದಂದು ಏನಾಯಿತು ಎಂಬುದನ್ನು ಚುನಾವಣಾ ಆಯೋಗದಿಂದ ತಿಳಿದುಕೊಳ್ಳಲು ನಾಗರಿಕರಿಗೆ ಎಲ್ಲಾ ರೀತಿಯ ಹಕ್ಕಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿದರೆ, ಪತ್ರಕರ್ತರ ಅನುಮಾನಗಳು ಮತ್ತು ಗೊಂದಲಗಳು ನಿವಾರಣೆಯಾಗುತ್ತದೆ. ಚುನಾವಣಾ ಆಯೋಗವು ಪ್ರತಿ ಹಂತದ ಮತದಾನದ ನಂತರ ಪತ್ರಿಕಾಗೋಷ್ಠಿಯನ್ನು ನಡೆಸಬೇಕು ಮತ್ತು ಮುಂದಿನ ಮತದಾನದ ದಿನಾಂಕದೊಳಗೆ ಸಂಪೂರ್ಣ ಮತಗಳ ಸಂಖ್ಯೆ ಮತ್ತು ಮತದಾನದ ಅಂತಿಮ ಶೇಕಡಾವಾರು ಸೇರಿದಂತೆ ಸಂಪೂರ್ಣ ಸಮೀಕ್ಷೆಯ ಮಾಹಿತಿಯನ್ನು ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಆಗ್ರಹಿಸಲಾಗಿದೆ.
ಚುನಾವಣಾ ವ್ಯವಸ್ಥೆಯಲ್ಲಿ ಮತದಾರರ ವಿಶ್ವಾಸವನ್ನು ಎತ್ತಿಹಿಡಿಯಲು ಇಂತಹ ಪಾರದರ್ಶಕತೆ ಅಗತ್ಯ. ಮತದಾರರ ದತ್ತಾಂಶವನ್ನು ಬಿಡುಗಡೆ ಮಾಡದಿರುವುದು ವಿವಾದಕ್ಕೆ ಕಾರಣವಾಗುವುದರ ಜೊತೆಗೆ ಚುನಾವಣಾ ಆಯೋಗ ಇತ್ತೀಚೆಗೆ ಟೀಕೆಗೆ ಒಳಗಾಗಿದೆ. ದತ್ತಾಂಶ ಬಿಡುಗಡೆ ವಿಳಂಬದ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಇಂಡಿಯಾ ಮೈತ್ರಿಕೂಟದ ಸದಸ್ಯರಿಗೆ ಪತ್ರ ಬರೆದು ಧ್ವನಿ ಎತ್ತುವಂತೆ ಆಗ್ರಹಿಸಿದ್ದರು. ಚುನಾವಣಾ ಪ್ರಕ್ರಿಯೆಯ ಪಾವಿತ್ರತೆ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಬೇಕು ಮತ್ತು ಪ್ರಧಾನಿ ನರೇಂದ್ರ ಮೋದಿಯವರ ಮಾದರಿ ನೀತಿ ಸಂಹಿತೆಯ ಪುನರಾವರ್ತಿತ ಉಲ್ಲಂಘನೆ ವಿರುದ್ಧ ಕ್ರಮ ಕೈಗೊಳ್ಳುವಂತೆಯೂ ಪ್ರತಿಪಕ್ಷಗಳ ಇಂಡಿಯಾ ಮೈತ್ರಿಕೂಟವು ಚುನಾವಣಾ ಆಯೋಗಕ್ಕೆ ಆಗ್ರಹಿಸಿತ್ತು.

