ಬಸವನಬಾಗೇವಾಡಿ: ಪರಮಪೂಜ್ಯ ಸಿದ್ದೇಶ್ವರ ಸ್ವಾಮೀಜಿಯವರ ಪ್ರೇರಣೆಯಿಂದ ಜೋಡೆತ್ತಿನ ಕೃಷಿ ಪುನಶ್ಚೇತನದ ಉದ್ದೇಶದಿಂದ ಸಿದ್ದೇಶ್ವರರ ಜನ್ಮಸ್ಥಳ ಬಿಜ್ಜರಗಿಯಿಂದ ನಂದಿಯಾತ್ರೆಯನ್ನು ಆರಂಭಿಸಲಾಗಿತ್ತು. ಈ ನಂದಿಯಾತ್ರೆಯಿಂದಾಗಿ ಅನೇಕ ಕಡೆಗಳಲ್ಲಿ ಜೋಡೆತ್ತು ಸಂರಕ್ಷಣೆಗೆ ಅನೇಕ ಸಮಿತಿಗಳನ್ನು ರಚಿಸಲಾಗಿದೆ. ಇಂದು ಜೋಡೆತ್ತುಗಳನ್ನು ಉಳಿಸಿದರೆ ಮಾತ್ರ ಮುಂದೆ ನಮಗೆ ಅನ್ನ ಸಂಪತ್ತು ಸಿಗುತ್ತದೆ ಎಂಬ ಜಾಗೃತಿ ಮೂಡಿಸಲು ಬಸವ ತತ್ವ ಪುನಶ್ಚೇತನ ಸಂಕಲ್ಪ ಸಮ್ಮೇಳನವನ್ನು ಬಸವೇಶ್ವರರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಮೇ. ೧೨ ರಂದು ಬೆಳಗ್ಗೆ ೯ ಗಂಟೆಗೆ ವಿರಕ್ತಮಠದ ಗವಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಬಿ ಪೌಂಡೇಶನ ಸಂಸ್ಥಾಪಕ ಬಸವರಾಜ ಬಿರಾದಾರ ಹೇಳಿದರು.
ಪಟ್ಟಣದ ವಿರಕ್ತಮಠದಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಜೋಡೆತ್ತು ಹೊಂದಿರುವ ರೈತರಿಗೆ ಪ್ರೋತ್ಸಾಹ ಧನವವಾಗಿ ರೂ. ೫,೫೦೦ ಗಳನ್ನು ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ೩೦ ಜೋಡೆತ್ತು ಸಂಘಗಳನ್ನು ರಚಿಸಲಾಗಿದೆ. ಜೋಡೆತ್ತಿನ ಕೃಷಿ ನಾಶವಾಗುತ್ತಿರುವ ಇಂದಿನ ಕಾಲದಲ್ಲಿ ಜೋಡೆತ್ತಿನ ಕೃಷಿ ಅವಲಂಬಿತ ಉದ್ಯೋಗಗಳಾದ ಬಡಿಗತನ, ಕಂಬಾರಿಗೆ, ಕುಂಬಾರಿಗೆ, ಚಮ್ಮಾರಿಕೆ ಸೇರಿದಂತೆ ಅನೇಕ ಗ್ರಾಮೀಣ ಉದ್ಯೋಗಗಳು ನಶಿಸಿಹೋಗುತ್ತಿರುವದನ್ನು ಕಾಣುತ್ತಿದ್ದೇವೆ. ಬಸವಣ್ಣನವರ ಕಾಲದಲ್ಲಿ ಅನೇಕ ಶರಣರು ತಾವು ಮಾಡುವ ಕಾಯಕದಲ್ಲಿಯೇ ಕೈಲಾಸವನ್ನು ಕಂಡು ಇಂದಿಗೂ ಕೂಡಾ ಅಜರಾಮರಾಗಿ ಉಳಿದು ಆಯಾ ಸಮಾಜಗಳಿಗೆ ಮಾರ್ಗದರ್ಶನ ಮಾಡ್ತುತಿದ್ದಾರೆ. ಬಹು ಕಾಯಕಗಳಿಗೆ ಮೂಲ ಬೇರಾದ ಜೋಡೆತ್ತಿನ ಕೃಷಿಯನ್ನು ಉಳಿಸಿದರೆ ಮಾತ್ರ ಬಹು ಸಮಾಜದ ಕಾಯಕಗಳಿಗೆ ಭದ್ರತೆ ಒದಗಿಸಲು ಸಾಧ್ಯ. ಜೋಡೆತ್ತಿನ ಕೃಷಿಯನ್ನು ಮರೆತು ಬಸವ ತತ್ವವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.
ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಇಂದು ಜೋಡೆತ್ತಿನ ಕೃಷಿ ಉಳಿಸುವದು ತುಂಬಾ ಅಗತ್ಯವಿದೆ. ಈ ಸಮ್ಮೇಳನವನ್ನು ವಿರಕ್ತಮಠದ ಸಹಯೋಗದೊಂದಿಗೆ ಅಬಿ ಪೌಂಡೇಶನ್ ಹಮ್ಮಿಕೊಂಡಿದೆ. ಸಮ್ಮೇಳನದಲ್ಲಿ ಸುಮಾರು ೪೦೦ ಜೋಡೆತ್ತಿನ ಎತ್ತಿನ ಬಂಡಿಗಳು ಭಾಗವಹಿಸಲಿವೆ. ಸಮ್ಮೇಳನದಲ್ಲಿ ಅಂತರಾಷ್ಟ್ರೀಯ ಪರಿಸರ ವಿಜ್ಞಾನಿ ಚಂದ್ರಶೇಖರ ಬಿರಾದಾರ ಉಪನ್ಯಾಸ ನೀಡುವರು. ವಿವಿಧ ಶ್ರೀಗಳು, ವಿವಿಧ ಮುಖಂಡರು ಭಾಗವಹಿಸುವರು. ರೈತ ಬಾಂಧವರು, ರೈತಮಿತ್ರರು, ಎಲ್ಲ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಮ್ಮೇಳನವನ್ನು ಯಶಸ್ವಿಗೊಳಿಸಬೇಕೆಂದರು.
Subscribe to Updates
Get the latest creative news from FooBar about art, design and business.
Related Posts
Add A Comment

