ಬಸವನಬಾಗೇವಾಡಿ: ೧೨ ನೇ ಶತಮಾನದಲ್ಲಿ ಬಸವಣ್ಣನವರು ಮಹಾಮಾನವತಾವಾದಿಯಾಗಿ ಬಹುತ್ವ ಭಾರತದ ಪ್ರತಿನಿಧಿಯಾಗಿ ಬಾಳಿದ ಪರಿಣಾಮವಾಗಿ ದೇಶದ ವಿವಿಧೆಡೆಗಳಿಂದ ಬಸವ ಕಲ್ಯಾಣಕ್ಕೆ ಅನೇಕ ಶರಣರು ಆಗಮಿಸಿದರು. ಬಸವಣ್ಣನವರು ಸಮಷ್ಟಿ ಪ್ರಜ್ಞೆ ಇಟ್ಟುಕೊಂಡಿದ್ದರು ಎಂದು ಚಿಂತಕ, ವಿಮರ್ಶಕ ಎಸ್.ಜಿ.ಸಿದ್ದರಾಮಯ್ಯ ಹೇಳಿದರು.
ಪಟ್ಟಣದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕೂಡಲಸಂಗಮ ಅಭಿವೃದ್ಧಿ ಮಂಡಳಿಯು ಬಸವ ಜಯಂತಿಯಂಗವಾಗಿ ಶುಕ್ರವಾರ ಸಂಜೆ ಹಮ್ಮಿಕೊಂಡಿದ್ದ ಬಸವ ಚಿಂತನ ಸಮಾವೇಶದಲ್ಲಿ ಮಾತನಾಡಿದ ಅವರು, ಬಸವಣ್ಣನವರ ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ ಇವ ನಮ್ಮವ, ಇವ ನಮ್ಮವ…. ಎಂಬ ವಚನ ಮಾನವತೆಯ ಶ್ರೇಷ್ಠತೆಗೆ ಹಿಡಿದ ಕೈಗನ್ನಡಿ. ಆಗಿನ ಕಾಲದಲ್ಲಿಯೇ ಬಸವಣ್ಣನವರು ಎಲ್ಲ ಜನಾಂಗವನ್ನು ಅನುಭವ ಮಂಟಪಕ್ಕೆ ಬರಮಾಡಿಕೊಂಡಿದ್ದರು. ಅಸ್ಪೃಶ್ಯರಲ್ಲಿಯೂ ಇದ್ದ ಮೇಲು-ಕೀಳು ಸಹ ಹೋಗಲಾಡಿಸಲು ಪ್ರಯತ್ನಿಸಿದ್ದನ್ನು ಅವರ ವಚನದಿಂದ ನಾವು ತಿಳಿದುಕೊಳ್ಳಬಹುದು. ಬಸವಣ್ಣನವರ ವ್ಯಕ್ತಿತ್ವ, ಶಕ್ತಿಯಿಂದಾಗಿ ಅವರು ನೆಲೆಸಿದ ಸ್ಥಳಗಳೆಲ್ಲವೂ ಪುಣ್ಯಕ್ಷೇತ್ರಗಳಾಗಿವೆ ಎಂದರು.
೧೯೧೩ ರಲ್ಲಿ ಹರ್ಡೇಕರ ಮಂಜಪ್ಪನವರು ಸಾರ್ವಜನಿಕವಾಗಿ ಬಸವ ಜಯಂತಿ ಆಚರಣೆ ಆರಂಭಿಸಿದರು. ಇದರ ಫಲವಾಗಿ ಇಂದು ಎಲ್ಲೆಡೆ ಸಾರ್ವಜನಿಕವಾಗಿ ಬಸವ ಜಯಂತಿ ಆಚರಣೆಗೊಳ್ಳುತ್ತಿದೆ. ಬಸವಾದಿ ಶರಣರು ರಚಿಸಿದ ವಚನಗಳಲ್ಲಿ ಮಾನವೀಯ ಸಂಬಂಧಗಳನ್ನು ಕಾಣುತ್ತೇವೆ. ವಚನಗಳು ನಮ್ಮ ಬದುಕು ಕಟ್ಟಿಕೊಡುತ್ತವೆ. ಶರಣರು ಕನ್ನಡದಲ್ಲಿ ವಚನಗಳನ್ನು ಬರೆದ ಪರಿಣಾಮ ಕನ್ನಡ ಭಾಷೆಗೆ ಹೊಸ ಹೊಳಪು ಬಂದಿತ್ತು. ಕಾಯಕ,ದಾಸೋಹದ ಮೂಲಕ ಶರಣರು ಸಮ ಸಮಾಜವನ್ನು ನಿರ್ಮಿಸಿದರು ಎಂದರು.
ನಾವು ವರ್ತಮಾನ ತಿಳಿದುಕೊಂಡರೆ ಮಾತ್ರ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯ. ದೇಶದಲ್ಲಿ ತಿರುಚಿದ ಚರಿತ್ರೆ ವಿಜೃಂಭಿಸುತ್ತಿದೆ. ಚರಿತ್ರೆ ಮರೆತರೆ ನಮಗೆ ವರ್ತಮಾನ ಅರ್ಥವಾಗುವುದಿಲ್ಲ. ಇದರಿಂದಾಗಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಗುಲಾಮಗಿರಿ ನಮ್ಮ ಮನಸ್ಸನ್ನು ಆಳುತ್ತಿದೆ. ದೇಶ ರಾಜಕೀಯವಾಗಿ ಸ್ವಾತಂತ್ರ್ಯ ಪಡೆದರೆ ಸಾಲದು, ಸಾಂಸ್ಕ್ರತಿಕವಾಗಿ ದಾಸ್ಯದಿಂದ ಬಿಡುಗಡೆಗೊಂಡಾಗ ಮಾತ್ರ ಸಂಪೂರ್ಣ ಸ್ವಾತಂತ್ರ್ಯ ಸಿಕ್ಕಂತಾಗುತ್ತದೆ ಎಂದರು.
ಸಮಷ್ಟಿಗೆ ಸೇರಿದ ಜನಪದ ಸಾಹಿತ್ಯದಿಂದ ವಸ್ತು ನಿಷ್ಠ ವಿಷಯ ನಮಗೆ ತಿಳಿಯುತ್ತದೆ. ಇಂತಹ ಸಾಹಿತ್ಯದಿಂದ ನಾವು ಶರಣರ ಕುರಿತು ಅನೇಕ ಸತ್ಯ ಸಂಗತಿಗಳನ್ನು ತಿಳಿದುಕೊಳ್ಳಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೂಡಲಸಂಗಮ ಅಭಿವೃದ್ಧಿ ಮಂಡಳಿ ಆಯುಕ್ತ, ಹುನಗುಂದ ತಹಸೀಲ್ದಾರ ನಿಂಗಪ್ಪ ಬಿರಾದಾರ ಮಾತನಾಡಿ, ಬಸವಣ್ಣನವರ ಜೀವನಾದರ್ಶ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶರಣರ ವಚನಗಳಲ್ಲಿರುವ ಮೌಲ್ಯಗಳನ್ನು ಅರಿತುಕೊಂಡು ಆಚರಣೆಗೆ ಬರುವಂತಾಗಬೇಕೆಂದರು.
ಸಾನಿಧ್ಯ ವಹಿಸಿದ್ದ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಮುಂಬರುವ ದಿನಗಳಲ್ಲಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಬಸವನಬಾಗೇವಾಡಿ ಅಭಿವೃದ್ಧಿ ಮಂಡಳಿಯಿಂದ ರಾಷ್ಟ್ರ ಮಟ್ಟದ ಬಸವ ಜಯಂತಿ ಆಚರಣೆಯಾಗುವಂತಾಗಬೇಕು. ಈ ಕಾರ್ಯಕ್ರಮಕ್ಕೆ ವಿವಿಧ ರಾಜ್ಯಗಳ ವಿದ್ವಾಂಸರು, ಕಲಾವಿದರು ಭಾಗವಹಿಸುವಂತಾಗಬೇಕು. ಪಟ್ಟಣದಲ್ಲಿ ಬಸವ ಸಂಶೋಧನಾ ಕೇಂದ್ರ, ಅಂತರಾಷ್ಟ್ರೀಯ ಮಟ್ಟದ ಗ್ರಂಥಾಲಯ ಸ್ಥಾಪನೆಯಾಗಬೇಕೆಂದರು.
ಎಸ್.ಎಂ.ಬಿಸ್ಟಗೊಂಡ ಸ್ವಾಗತಿಸಿದರು. ಬಸವರಾಜ ನಂದಿಹಾಳ ಅತಿಥಿ ಉಪನ್ಯಾಸಕರ ಕುರಿತು ಪರಿಚಯಿಸಿದರು. ಪಿ.ಎ.ಗಡೆನ್ನವರ, ಬಸವರಾಜ ಹಂಚಲಿ ನಿರೂಪಿಸಿದರು.
ಗಾಯಕರಾದ ವಿರೇಶ ವಾಲಿ, ಸಾಕ್ಷಿ ಹಿರೇಮಠ ಅವರಿಂದ ವಚನ ಸಂಗೀತೋತ್ಸವ ಜರುಗಿತು. ನಂತರ ಜರುಗಿದ ಬೆಂಗಳೂರಿನ ನವ್ಯ ನಾಟ್ಯ ಸಂಗಮ ತಂಡದಿಂದ ಭಕ್ತಿ ಭಂಡಾರಿ ಬಸವಣ್ಣನವರ ನೃತ್ಯ ರೂಪಕ ಜನಮನಸೂರೆಗೊಂಡಿತ್ತು.
ರಾತ್ರಿ ಅಂಲಕೃತ ಬಸವೇಶ್ವರರ ಪಲ್ಲಕ್ಕಿ ಹಾಗೂ ಬಸವೇಶ್ವರರ ಭಾವಚಿತ್ರದ ಮೆರವಣಿಗೆ ಸಕಲ ಮಂಗಲ ವಾದ್ಯವೈಭವದೊಂದಿಗೆ ಪಟ್ಟಣದಲ್ಲಿ ಜರುಗಿತು.
Subscribe to Updates
Get the latest creative news from FooBar about art, design and business.
ಬಸವಣ್ಣನವರು ಬಹುತ್ವ ಭಾರತದ ದೊಡ್ಡ ಪ್ರತಿನಿಧಿ :ಪ್ರೊ.ಸಿದ್ದರಾಮಯ್ಯ
Related Posts
Add A Comment

