ಕಲಕೇರಿಯಲ್ಲಿ ನಡೆದ ಧರ್ಮಸಭೆಯಲ್ಲಿ ಶಾಸಕ ರಾಜುಗೌಡ ಪಾಟೀಲ ಅಭಿಮತ
ಕಲಕೇರಿ: ಶಿಕ್ಷಣ ಕ್ಷೇತ್ರದಲ್ಲಿ ಮುಂದೆ ಸಾಗುತ್ತಿರುವ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ ಮತ್ತು ಉತ್ತಮ ಸಂಸ್ಕಾರದಲ್ಲಿ ಹಿಂದುಳಿಯುತ್ತಿರುವುದು ಕಳವಳಕಾರಿ ವಿಷಯವಾಗಿದ್ದು, ಈ ಕುರಿತು ನಾವೆಲ್ಲ ಚಿಂತನೆ ಮಾಡುವುದು ಅನಿವಾರ್ಯವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಲಕ್ಷಾಂತರ ಹಣವನ್ನು ಖರ್ಚು ಮಾಡುವ ನಾವು ಅದರ ಜೊತೆಗೆ ಉತ್ತಮ ಸಂಸ್ಕಾರ ನೀಡಿದರೆ ಮಾತ್ರ ಮಗುವಿನಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಲು ಸಾಧ್ಯ. ಈ ದಿಸೆಯಲ್ಲಿ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರವನ್ನು ಮಕ್ಕಳಿಗೆ ನೀಡಿ ಸುಂದರ ಮತ್ತು ಶ್ರೇಷ್ಠ ಸಮಾಜ ನಿರ್ಮಿಸಲು ಮುಂದಾಗೋಣ ಎಂದು ದೇವರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ರಾಜುಗೌಡ ಪಾಟೀಲ ಕುದರಿಸಾಲೋಡಗಿ ಹೇಳಿದರು.
ಗ್ರಾಮದ ಭೀರಲಿಂಗೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಮತ್ತು ಪಟ್ಟಾಧಿಕಾರದ ಪ್ರಯುಕ್ತವಾಗಿ ಭೀರಲಿಂಗೇಶ್ವರ ದೇವಸ್ಥಾನದಲ್ಲಿ ಹಮ್ಮಿಕೊಂಡ ಧರ್ಮಸಭೆ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಧರ್ಮಸಭೆಯ ದಿವ್ಯ ಸಾನಿಧ್ಯ ವಹಿಸಿದ್ದ ಸರೂರ ಗುರುಪೀಠದ ರೇವಣಸಿದ್ದೇಶ್ವರ ಶಾಂತಮಯ ಸ್ವಾಮಿಗಳು, ಹುಲಜಂತಿಯ ಮಾಳಿಂಗರಾಯ ದೇವರು, ಡಾ.ವೀರೇಶ ತಳ್ಳೊಳ್ಳಿ, ಎಂ.ಜಿ.ಎಂ.ಕೆ ಪಿಯು ಕಾಲೇಜಿನ ಪ್ರಾಚಾರ್ಯ ಎಸ್.ಕೆ.ಹರನಾಳ, ಬಿಜೆಪಿ ಮುಖಂಡರಾದ ಸಿದ್ದು ಬುಳ್ಳಾ, ಶ್ರೀಮತಿ ಶಿಲ್ಪಾ ಕುದರಗುಂಡ ಮಾತನಾಡಿದರು. ಇದೇ ವೇಳೆ ವಿವಿದ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಗುರುಮರುಳಾರಾಧ್ಯರ ಹಿರೇಮಠದ ಸಿದ್ದರಾಮ ಶಿವಾಚಾರ್ಯರು, ಚಟ್ಟರಕಿಯ ಕೆಂಚಪ್ಪಮುತ್ಯಾ ಪೂಜಾರಿ ಸಾನಿಧ್ಯ ವಹಿಸಿದ್ದರು.
ಕಲಕೇರಿ ಗ್ರಾಪಂ ಅಧ್ಯಕ್ಷರಾದ ರಾಜಅಹ್ಮದ ಸಿರಸಗಿ, ಸಂಗಾರಡ್ಡಿ ದೇಸಾಯಿ, ಕುದರಿಸಾಲೋಡಗಿಯ ಅಶೋಕಗೌಡ ಪಾಟೀಲ, ಶರಣಪ್ಪ ಮೋಪಗಾರ, ಗ್ರಾಪಂ ಸದಸ್ಯ ಪರಶುರಾಮ ಕುದರಕಾರ, ಯುವ ಮುಖಂಡರಾದ ಅಪ್ಪು ದೇಸಾಯಿ, ವಿನೋದ ವಡಗೇರಿ, ಮಲ್ಲೇಶಪ್ಪ ಪೂಜಾರಿ, ಪರಶುರಾಮ ಬೂದಿಹಾಳ, ಅಶೋಕ ಭೋವಿ ಸೇರಿದಂತೆ ಇತರರು ಇದ್ದರು.

