ವಿದ್ಯಾರ್ಥಿಯೊಬ್ಬನನ್ನು ಶೈಕ್ಷಣಿಕ ದತ್ತು ಪಡೆದು ಬಸವ ಜಯಂತಿ ಆಚರಿಸಿದ ದಂಪತಿ
ವಿಜಯಪುರ: ನಗರದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಕಾರ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬನನ್ನು ಶೈಕ್ಷಣಿಕ ದತ್ತು ಪಡೆದು ಬಸವ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಿದ ಸಂಗಮೇಶ ಬಬಲೇಶ್ವರ ದಂಪತಿ ಮಾನವೀಯ ಕಳಕಳಿ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ.
ಶುಕ್ರವಾರ ಆಯೋಜಿಸಲಾದ ಈ ಕಾರ್ಯಕ್ರಮಕ್ಕೆ ಅತಿಥಿಯನ್ನಾಗಿ ಕು.ಅಭಿಷೇಕ ಅಶೋಕ್ ಜಾದವ ಆಗಮಿಸಿದ್ದರು. ನಾಲ್ಕು ತಿಂಗಳ ಹಿಂದೆ ತಾಯಿಯನ್ನು ನಾಲ್ಕು ವರ್ಷದ ಹಿಂದೆ ತಂದೆಯನ್ನು ಕಳೆದುಕೊಂಡಿರುವ ಅಭಿಷೇಕ ತನ್ನ ಶಿಕ್ಷಣವನ್ನ ಮುಂದುವರಿಸುವುದು ಹೇಗೆ ಎಂಬ ಚಿಂತೆಯಲ್ಲಿರುವ ಸಂದರ್ಭದಲ್ಲಿಯೇ ಅಂತಹ ಮಕ್ಕಳನ್ನು ಗುರುತಿಸಿ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಅವರಿಗೆ ಅವರ ಧರ್ಮಪತ್ನಿ ಶ್ವೇತಾ ಬಬಲೇಶ್ವರವರು ” ನಮ್ಮ ಮನೆಗೆ ಬರುವ ಅಜ್ಜಿಯೊಬ್ಬರು ಹೇಳುತ್ತಿದ್ದರು ಇದೇ ಸಂಗಮೇಶ್ವರ ಕಾಲೋನಿಯಲ್ಲಿಯೇ ಒಬ್ಬ ಮಗು ತಂದೆ ತಾಯಿಯನ್ನು ಕಳೆದುಕೊಂಡು ಮುಂದಿನ ಶಿಕ್ಷಣಕ್ಕಾಗಿ ತೊಂದರೆ ಅನುಭವಿಸುತ್ತಿರುವುದಾಗಿ ತಿಳಿಸಿದ್ದಾರೆ. ಆ ಮಗುವನ್ನು ಇಂದು ಹುಡುಕಿ ಕರೆದುಕೊಂಡು ಬಂದು ಬಸವ ಜಯಂತಿಯ ಈ ಶುಭದಿನದಂದೆ ಆತನ ಶೈಕ್ಷಣಿಕ ವೆಚ್ಚದ ಜವಾಬ್ದಾರಿ ಹೊತ್ತುಕೊಳ್ಳೋಣ” ಎಂದು ತಿಳಿಸಿದಾಗ ಸಂಗಮೇಶ್ವರ ದೇವಾಲಯದ ಅರ್ಚಕ ಸಿದ್ದರಾಮಯ್ಯ ಹಿರೇಮಠ ಅವರಿಗೆ ಸಂಗಮೇಶ್ ಬಬಲೇಶ್ವರವರು ಕರೆ ಮಾಡಿ, “ಆ ಮಗು ಯಾರು? ಆತ ಎಲ್ಲಿರುತ್ತಾನೆ? ಆತನನ್ನು ಕರೆದುಕೊಂಡು ಬನ್ನಿ ಎಂದು ತಿಳಿಸಿದ್ದಾರೆ. ಒಂದು ಗಂಟೆಯಲ್ಲಿ ಆ ಮಗುವನ್ನು ಕರೆದುಕೊಂಡು ಸಿದ್ದರಾಮಯ್ಯ ಹಿರೇಮಠ ಅವರು ಅಭಿಷೇಕನನ್ನು, ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಗೆ ಕಳೆದುಕೊಂಡು ಬಂದಾಗ, ಆ ಮಗುವನ್ನೇ ಬಸವ ಜಯಂತಿಯ ಮುಖ್ಯ ಅತಿಥಿಯನ್ನಾಗಿ ಮಾಡಿ, ಅಭಿಷೇಕನ ಮುಂದಿನ ಶೈಕ್ಷಣಿಕ ವೆಚ್ಚವನ್ನು ಇದೇ ದಿನ ಆತನಿಗೆ ಅರ್ಚಕ ಸಿದ್ದರಾಮಯ್ಯ ಹಿರೇಮಠರ ಮೂಲಕ ಶೈಕ್ಷಣಿಕ ವೆಚ್ಚದ ಸಂಪೂರ್ಣ ಹಣವನ್ನು ಅಭಿಷೇಕನಿಗೆ ಹಸ್ತಾಂತರಿಸುವ ಮೂಲಕ ಆತನ ಶೈಕ್ಷಣಿಕ ಜವಾಬ್ದಾರಿಯನ್ನು ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ವಹಿಸಿಕೊಂಡಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮಾತನಾಡಿ ” ತಂದೆ ತಾಯಿ ಇಲ್ಲದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವುದು ನನ್ನ ಬದುಕಿನ ಬಹು ಮುಖ್ಯ ಜವಾಬ್ದಾರಿಯಾಗಿದೆ. ಈ ಸೇವಾ ಕಾರ್ಯದಲ್ಲಿ ಸಿಗುವ ಆತ್ಮತೃಪ್ತಿ ನನಗೆ ಬೇರೆ ಯಾವುದರಲ್ಲೂ ಇಲ್ಲ. ಯಾಕೆಂದರೆ ತಂದೆ ತಾಯಿ ಕಳೆದುಕೊಂಡು ಬದುಕು ಕಟ್ಟಿಕೊಂಡವನು ನಾನು, ಅಂತಹ ಮಕ್ಕಳ ನೋವಿನ ಬದುಕು ಹೇಗಿರುತ್ತೆ ಎನ್ನುವುದು ಎಲ್ಲರಿಗಿಂತ ಚೆನ್ನಾಗಿ ನನಗೆ ಅರ್ಥವಾಗುತ್ತದೆ. ಪ್ರತಿ ವರ್ಷ ನಾವು ಹಲವಾರು ವಿದ್ಯಾರ್ಥಿಗಳನ್ನು ಶೈಕ್ಷಣಿಕ ದತ್ತು ಪಡೆದುಕೊಂಡರೂ ಅದನ್ನು ಯಾವುದೇ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವದಿಲ್ಲ. ಹಂಚಿಕೊಂಡು ಪ್ರಚಾರ ಪಡೆಯುವ ಉದ್ದೇಶ ನಮ್ಮದಲ್ಲ, ಅದರ ಅಗತ್ಯವೂ ನಮಗಿಲ್ಲ. ಆದರೆ ಇಂದು ಇದನ್ನು ಯಾಕೆ ತಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ ಎಂದರೆ, ನಮ್ಮ ಮನೆಗೆ ಬರುವ ಅಜ್ಜಿ ಒಬ್ಬರ ಮೂಲಕ ಈ ವಿಷಯ ತಿಳಿದಿರದಿದ್ದರೆ ಅಭಿಷೇಕನ ಸೇವೆ ಮಾಡುವ ಸೌಭಾಗ್ಯ ನಮಗೆ ದೊರೆಯುತ್ತಿರಲಿಲ್ಲ. ಈ ಮೂಲಕ ಬಸವ ಜಯಂತಿ ದಿವಸ ನಾನು ತಮ್ಮಲ್ಲಿ ಕಳಕಳಿಯ ಪ್ರಾರ್ಥನೆ ಮಾಡುವುದೇನೆಂದರೆ ” ನಿಮ್ಮ ನಿಮ್ಮ ಊರು, ಓಣಿಗಳಲ್ಲಿ ಇಂಥಹ ಮಕ್ಕಳು ನಿಮ್ಮ ಗಮನಕ್ಕೆ ಬಂದರೆ ಅವರನ್ನ ಸಮಾಜದ ಮುಖ್ಯವಾಹಿನಿಗೆ ತರುವ ಪ್ರಯತ್ನ ಮಾಡಿ, ಇದಕ್ಕಿಂತ ಪುಣ್ಯದ ಸೇವೆ, ಭಗವಂತನ ಸೇವೆ, ಬಸವ ಸೇವೆ ಮತ್ತೊಂದಿರಲಾರದು ಎಂದು ನಾನು ಭಾವಿಸಿದ್ದೇನೆ. ಸಾಧ್ಯವಾದರೆ ಅಂತಹ ಮಕ್ಕಳನ್ನು ನಮ್ಮ ಅಮ್ಮನ ಮಡಿಲು ಚಾರಿಟೇಬಲ್ ಟ್ರಸ್ಟ್ ಗೆ ಪರಿಚಯಿಸುವ ಪುಣ್ಯದ ಕೆಲಸ ಮಾಡಿ ಎಂದು ಸಂಗಮೇಶ ಬಬಲೇಶ್ವರ ವಿನಂತಿಸಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ಸಂಗಮೇಶ್ ಬಬಲೇಶ್ವರ ದಂಪತಿ ಅಭಿಷೇಕನ ಬದುಕು ಉಜ್ವಲವಾಗಲೆಂದು ಶುಭ ಹಾರೈಸಿದ್ದಾರೆ.
ಈ ಸಂದರ್ಭದಲ್ಲಿ ಸಿದ್ದರಾಮಯ್ಯ ಹಿರೇಮಠ, ಪ್ರದೀಪ್ ಲಿಂಗದಳ್ಳಿ ಮೊದಲಾದವರು ಉಪಸ್ಥಿತರಿದ್ದರು.

