ಢವಳಗಿಯ ಪವಿತ್ರಾ ಕೊಣ್ಣೂರ ಶೇ೯೯.೬೮ ಅಂಕ ಪಡೆದು ಜಿಲ್ಲೆಗೆ ಪ್ರಥಮ
ಮುದ್ದೇಬಿಹಾಳ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತಾಲೂಕಿನ ಢವಳಗಿ ಗ್ರಾಮದ ಕೆಎಸ್‌ಆರ್‌ಟಿಸಿ ಬಸ್ ಕಂಡಕ್ಟರ್ ಪುತ್ರಿ ಪವಿತ್ರಾ ಕೊಣ್ಣೂರ ಇಂಗ್ಲೀಷ್ ಮಾಧ್ಯಮದಲ್ಲಿ ೬೨೩ (ಶೇ೯೯.೬೮) ಅಂಕಗಳನ್ನು ಗಳಿಸುವ ಮೂಲಕ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ತೃತೀಯ ಸ್ಥಾನ ಗಿಟ್ಟಿಸಿಕೊಂಡು ಅದ್ವಿತಿಯ ಸಾಧನೆ ಮಾಡಿದ್ದಾಳೆ.
ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶ ವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡಿದ ಪವಿತ್ರಾ ಇಂಗ್ಲೀಷ್ ವಿಷಯದಲ್ಲಿ ೧೨೫ಕ್ಕೆ ೧೨೪, ವಿಜ್ಞಾನ ವಿಷಯದಲ್ಲಿ ೧೦೦ಕ್ಕೆ ೯೯ ಸೇರಿದಂತೆ ಉಳಿದ ಎಲ್ಲ ವಿಷಯಗಳಿಗೆ ನೂರಕ್ಕೆ ನೂರು ಅಂಕ ಪಡೆದಿದ್ದಾಳೆ. ಪುತ್ರಿಯ ಸಾಧನೆಗೆ ತಂದೆ ಮಡಿವಾಳಪ್ಪಗೌಡ ಕೊಣ್ಣೂರ, ತಾಯಿ ಭಾರತಿ ಕೊಣ್ಣೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ “ಉದಯರಶ್ಮಿ” ಪತ್ರಿಕೆಯೊಂದಿಗೆ ಮಾತನಾಡಿದ ವಿದ್ಯಾರ್ಥಿನಿ ಪವಿತ್ರಾ, ನನಗೆ ಇಷ್ಟೊಂದು ಅಂಕಗಳು ಬರುತ್ತೆ ಅಂದುಕೊಂಡಿರಲಿಲ್ಲ. ನನ್ನ ಸಾಧನೆಗೆ ನನ್ನ ತಂದೆ ತಾಯಿಯ ಆಶೀರ್ವಾದ, ಶಿಕ್ಷಕರ ಪರಿಶ್ರಮ ಕಾರಣ. ಮುಂದೆ ಮೆಡಿಕಲ್ ಕ್ಷೇತ್ರದಲ್ಲಿ ಕಾಲಿರಿಸುವ ಆಸೆ ನನ್ನದು ಎಂದಿದ್ದಾಳೆ.

ಕ್ಷೇತ್ರ ಶಿಕ್ಷಣಾಧಿಕಾರಿಯಿಂದ ಸನ್ಮಾನ
ಮುದ್ದೇಬಿಹಾಳ: ತಾಲೂಕಿನ ಬಿದರಕುಂದಿ ಗ್ರಾಮದ ಆದರ್ಶವಿದ್ಯಾಲಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಇಂಗ್ಲೀಷ್ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಮತ್ತು ರಾಜ್ಯಕ್ಕೆ ತೃತಿಯ ಸ್ಥಾನ ಪಡೆದ ವಿದ್ಯಾರ್ಥಿನಿ ಪವಿತ್ರಾ ಕೊಣ್ಣೂರ ರನ್ನು ಪಾಲಕರ ಸಮ್ಮುಖದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಬಸವರಾಜ ಸಾವಳಗಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ತಾಲೂಕು ನೂಡಲ ಎಚ್.ಎ.ಮೇಟಿ, ಶಾಲೆಯ ಮುಖ್ಯಗುರುಮಾತೆ ನೀಲಮ್ಮ ತೆಗ್ಗಿನಮಠ, ಶಿಕ್ಷಕರಾದ ಎಸ್.ಬಿ.ಸಜ್ಜನ, ಎಸ್.ಆರ್.ಪಾಟೀಲ, ಸಿಬ್ಬಂದಿ ಆರ್.ಕೆ.ದೇವಗಿರಿಕರ ಇದ್ದರು.

