ವಿಜಯಪುರ: ಬಿರುಬೇಸಿಗೆಯಲ್ಲಿ ತತ್ತರಿಸಿದ ಜನ-ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಆಲಮಟ್ಟಿ ಜಲಾಶದಿಂದ ಮುಳವಾಡ ಏತನೀರಾವರಿ ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯಡಿ ಇಂದಿನಿಂದ ಕಾಲುವೆಗಳ ಮೂಲಕ ಕೆರೆಗಳಿಗೆ ನೀರು ಹರಿಸಲಾಗುವುದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ವಿಜಯಪುರ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿರುವದನ್ನು ತಪ್ಪಿಸಲು ಈ ಹಿಂದೆ ತಿಡಗುಂದಿ ಕಾಲುವೆಯಿಂದ ನೀರು ಹರಿಸಿ, ಭೂತನಾಳ ಕೆರೆ ತುಂಬಿಸಿ, ನಗರದಲ್ಲಿ ಸಮಪರ್ಕವಾಗಿ ಕುಡಿಯುವ ನೀರು ಪೂರೈಸಲಾಗಿತ್ತು. ಈಗ ಮತ್ತೆ ಭೂತನಾಳ ಕೆರೆಗೆ ಹಾಗೂ ಇಂಡಿ ತಾಲೂಕಿನ ಹೊರ್ತಿ ಮತ್ತು ಇತರೆ 31 ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯಡಿ ತಿಡಗುಂದಿ ಕಾಲುವೆ ಮೂಲಕ ನೀರು ಹರಿಸಲಾಗುವುದು.
ಬಸವನಬಾಗೇವಾಡಿ ತಾಲೂಕಿನ ಅರೇಶಂಕರ ಮತ್ತು ಇತರೆ 19 ಗ್ರಾಮಗಳ ಕಣಕಾಲ ಮತ್ತು 11 ಗ್ರಾಮಗಳ ಬಹುಹಳ್ಳಿ ಕುಡಿಯುವ ನೀರು ಸರಬರಾಜು ಯೋಜನೆಯು 0.45ಟಿ.ಎಂ.ಸಿ ನೀರನ್ನು ಮುಳವಾಡ ಏತನೀರಾವರಿ ಹಾಗೂ ಚಿಮ್ಮಲಗಿ ಏತನೀರಾವರಿ ಯೋಜನೆಯಡಿ ಕೆರೆಗಳಿಗೆ ಹರಿಸುವಂತೆ ಕೋರಲಾಗಿತ್ತು. ಇದಕ್ಕೆ ಸ್ಪಂಧಿಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಮೇ 28 ರವರೆಗೆ 2 ಟಿ.ಎಂ.ಸಿ ನೀರು ಕೆರೆಗಳಿಗೆ ಹರಿಯಲಿದೆ ಎಂದರು.
ಭೀಕರ ಬರ ಹಾಗೂ ಬೇಸಿಗೆ ಇರುವುದರಿಂದ ಕುಡಿಯುವ ನೀರು ಒದಗಿಸಲು ಕಾಲುವೆಗಳಿಗೆ ನೀರು ಹರಿಸುವಂತೆ ಒಂದು ತಿಂಗಳಿನಿಂದ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಕೋರಿದ್ದೆ. ನೀತಿಸಂಹಿತೆ ಕಾರಣ ಚುನಾವಣೆ ಆಯೋಗದ ಅನುಮತಿ ಪಡೆದು, ಕಾಲುವೆ ಮೂಲಕ ನೀರು ಹರಿಸಲು ಇದೀಗ ಆದೇಶ ನೀಡಿದ್ದಾರೆ ಎಂದು ಪ್ರಕಟಣೆಯಲ್ಲಿ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

