ದೇವರಹಿಪ್ಪರಗಿ: ಪಡಗಾನೂರ ತಾಂಡಾದ ಬಿಎಸ್‌ಎಫ್ ಯೋಧ ಅಶೋಕ ಬಾಸು ಪವಾರ(೪೬) ಅನಾರೋಗ್ಯದಿಂದ ಮಂಗಳವಾರ ನಿಧನರಾದರು.
ತಾಲ್ಲೂಕಿನ ಪಡಗಾನೂರ ತಾಂಡಾ ನಿವಾಸಿಯಾಗಿದ್ದ ಅಶೋಕ ಬಾಸು ಪವಾರ ತ್ರಿಪುರಾದ ೧೦೪ ಬೆಟಾಲಿಯನ್‌ನಲ್ಲಿ ಕಳೆದ ೨೪ ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುವ ಮೂಲಕ ದೇಶ ಸೇವೆಯಲ್ಲಿ ಪಾಲ್ಗೊಂಡಿದ್ದರು. ಕಳೆದ ತಿಂಗಳ ಹಿಂದೆಯೇ ಸ್ವಗ್ರಾಮಕ್ಕೆ ಬಂದು ಮಗನ ಮದುವೆ ಮಾಡಿ ಹೋಗಿದ್ದರು. ಆಕಸ್ಮಿಕವಾಗಿ ಕಳೆದ ವಾರ ಅನಾರೋಗ್ಯಕ್ಕೆ ಒಳಗಾಗಿ ಮಂಗಳವಾರ ಕೋಲ್ಲಾಪೂರ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಬುಧವಾರ ಸ್ವಗ್ರಾಮ ಪಡಗಾನೂರ ತಾಂಡಾಕ್ಕೆ ಸೇನಾವಾಹನದಲ್ಲಿ ಸೇನಾ ಸಿಬ್ಬಂದಿಯೊಂದಿಗೆ ಸೈನಿಕನ ಮೃತದೇಹ ಬರುತ್ತಿದ್ದಂತೆ ನೂರಾರು ಯುವಕರು, ಸಾರ್ವಜನಿಕರು ದೇಶಭಕ್ತರು ಭೋಲೋ ಭಾರತ ಮಾತಾಕೀ ಜೈ, ಜೈಜವಾನ ಜೈಕಿಸಾನ್ ಘೋಷಣೆ ಮೊಳಗಿಸಿದರು. ಸೇನಾ ವಾಹನದಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ ನಡೆಯಿತು. ನಂತರ ಮೃತರ ಅಂತ್ಯಕ್ರಿಯೆ ಸಕಲ ಸರಕಾರಿ ಗೌರವಗಳೊಂದಿಗೆ ನೆರವೇರಿತು. ಅಂತ್ಯಕ್ರಿಯೆಯಲ್ಲಿ ಶಾಸಕ ರಾಜುಗೌಡ ಪಾಟೀಲ, ತಹಶೀಲ್ದಾರ್ ಪ್ರಕಾಶ ಸಿಂದಗಿ, ಡಾ.ರಮೇಶ ರಾಠೊಡ, ಶಂಕರ ರಾಠೋಡ, ಎಲ್.ಆರ್.ಅಂಗಡಿ, ಶ್ರೀಕಾಂತ ರಾಠೋಡ ಸೇರಿದಂತೆ ಪೊಲೀಸ್ ಸಿಬ್ಬಂದಿ, ಪಡಗಾನೂರ, ದೇವರಹಿಪ್ಪರಗಿ, ಶಿವಣಗಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಗಣ್ಯರು, ಯುವಕರು, ಸೈನಿಕರು ಪಾಲ್ಗೊಂಡಿದ್ದರು.


