ಸಿಂದಗಿ: ಶಿಕ್ಷಣದಿಂದ ಮಾತ್ರ ಈ ದೇಶ ಬಲಿಷ್ಠವಾಗಲಿದೆ. ಯೋಗ್ಯ ಶಿಕ್ಷಣ ಮತ್ತು ಸಂಸ್ಕಾರ ನಮ್ಮ ಬದುಕನ್ನೇ ಉತ್ತಮವಾಗಿ ರೂಪಿಸಬಲ್ಲದು ಎಂದು ಶ್ರೀಶೈಲ ಪೀಠದ ಪರಮ ಪೂಜ್ಯ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತರಾಧ್ಯ ಶಿವಾಚಾರ್ಯ ಭಗವತ್ಪಾದಂಗಳವರು ಹೇಳಿದರು.
ತಾಲೂಕಿನ ಕನ್ನೋಳ್ಳಿ ಹಿರೇಮಠದ ಶ್ರೀಜಗದುರು ದಾರುಕಾಚಾರ್ಯರ ಜಾತ್ರಾ ಮಹೋತ್ಸವ ಮತ್ತು ಲಿಂ.ಶ್ರೀ ಮರುಳಾರಾಧ್ಯ ಶಿವಾಚಾರ್ಯರ ೧೧೦ ನೇ ಜಯಂತ್ಯುತ್ಸವದ ನಿಮಿತ್ಯ ಶ್ರೀ ಸಿದ್ದಲಿಂಗೇಶ್ವರ ಜ್ಞಾನಜ್ಯೋತಿ ವಿದ್ಯಾಪ್ರಸಾರ ಸಂಘದ ಅಡಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ಮಾತೋಶ್ರೀ ಬಸಲಿಂಗಮ್ಮ ಭಾಳಪ್ಪ ಭೂಸನೂರ ಕಲಾ, ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಾನವನನ್ನು ಮಹಾದೇವನನ್ನಾಗಿ ಪರಿವರ್ತಿಸುವ ಮಹಾಶಕ್ತಿ ಶಿಕ್ಷಣಕ್ಕೆ ಇದೆ. ಪ್ರತಿಯೊಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಮತ್ತು ಸಂಸ್ಕಾರ ನೀಡಿದ್ದಲ್ಲಿ ಭಾರತ ಜಗತ್ತಿಗೆ ದೊಡ್ಡ ಶಕ್ತಿಯಾಗಿ ಹೊರ ಹೊಮ್ಮಲಿದೆ ಎಂದ ಅವರು ಲಿಂ.ಮರುಳಾರಾಧ್ಯ ಶಿವಾಚಾರ್ಯರು ಸದಾ ಭಕ್ತರ ಕಲ್ಯಾಣವನ್ನು ಬಯಸಿ ಅವರ ಮುಖದಲ್ಲಿಯೇ ಪರಮಾತ್ಮನನ್ನು ಕಂಡಂತವರು. ಧಾರ್ಮಿಕ ಸಂಸ್ಕಾರ, ಸಾಮಾಜಿಕ ಪ್ರಜ್ಞೆಯನ್ನು ಭಕ್ತರಲ್ಲಿ ಮೂಡಿಸಿ ಜನಮಾನಸದಲ್ಲಿ ಚಿರಸ್ಥಾಯಿಯಾದವರು ಎಂದರು.
ಈ ವೇಳೆ ಭಂಥನಾಳದ ಪೂಜ್ಯ ಶ್ರೀ ವೃಷಬಲಿಂಗ ಮಹಾಸ್ವಾಮಿಗಳು ಮಾತನಾಡಿ, ಕನ್ನೋಳ್ಳಿಯ ಹಿರೇಮಠದ ಧಾರ್ಮಿಕ ಮತ್ತು ಶಿಕ್ಷಣದ ಕಾರ್ಯ ನಿರಂತರವಾಗಿದೆ. ಭಂಥನಾಳದ ಲಿಂ.ಸಂಗನಬಸವೇಶ್ವರ ಮಹಾಸ್ವಾಮಿಗಳು ಜೋಳಿಗೆ ಹಿಡಿದು ಈ ಭಾಗದಲ್ಲಿ ಶಿಕ್ಷಣದ ಪ್ರಸಾರ ಮಾಡದೇ ಇದ್ದಲ್ಲಿ ಈ ಭಾಗ ಅತ್ಯಂತ ಹಿಂದುಳಿದ ಪ್ರದೇಶವಾಗುತ್ತಿತ್ತು. ಅವರ ಪರಿಶ್ರಮದಿಂದ ಈ ಭಾಗದ ಸಾವಿರಾರು ಮಕ್ಕಳು ಉತ್ತಮ ಶಿಕ್ಷಣ ಪಡಿಯುವಂತಾಗಿದೆ. ಆ ನಿಟ್ಟಿನಲ್ಲಿ ಕನ್ನೋಳ್ಳಿಯ ಹಿರೇಮಠವು ಕೂಡಾ ಶಿಕ್ಷಣದ ಕ್ರಾಂತಿಯನ್ನು ಈ ಭಾಗದಲ್ಲಿ ಮಾಡುವಂತಾಗಲಿ ಎಂದು ಶುಭಹಾರೈಸಿದರು.
ಈ ಸಂಧರ್ಭದಲ್ಲಿ ಯಂಕಂಚಿ ಹಿರೇಮಠದ ಪೂಜ್ಯ ಶ್ರೀಅಭಿನವ ರುದ್ರಮನಿ ಶೀವಾಚಾರ್ಯರು, ಕೋಣ್ಣೂರಿನ ಹೊರಗಿನ ಕಲ್ಯಾಣಮಠದ ಡಾ.ವಿಶ್ವಪ್ರಭುದೇವ ಶಿವಾಚಾರ್ಯರು ಮಾತನಾಡಿ, ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬಡ ಅನಾಥ ಮಕ್ಕಳಿಗೆ ಮತ್ತು ಶಿಕ್ಷಣ ನೀಡುವ ಕಾರ್ಯ ಮಾಡುತ್ತಿರುವ ಕನ್ನೋಳ್ಳಿಯ ಹಿರೇಮಠದ ಕಾರ್ಯವನ್ನು ಶ್ಲಾಘಿಸಿದರು.
ಕಾರ್ಯಕ್ರಮದ ವೇದಿಕೆ ಮೇಲೆ ಸಿಂದಗಿ ಸಾರಂಗಮಠದ ಡಾ.ಪ್ರಭುಸಾರಂಗದೇವ ಶಿವಾಚಾರ್ಯರು, ಬಸವನ ಬಾಗೇವಾಡಿಯ ಶ್ರೀ ಶಿವಪ್ರಕಾಶ ಶಿವಾಚಾರ್ಯರು, ಕನ್ನೋಳ್ಳಿಯ ಹಿರೇಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯರು, ಸಿದ್ದಗೊಂಡಪ್ಪಗೌಡ ಪಾಟೀಲ, ಕಂಟೆಪ್ಪ ಸಾಹುಕಾರ ಕೊಲ್ಲೂರ, ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಶಂಕರಲಿಂಗಯ್ಯ ಹಿರೇಮಠ, ಸಂಗನಗೌಡ ಪಾಟೀಲ, ಸಿದ್ದಪ್ಪ ಟೆಂಗಳಿ, ಮುತ್ತಪ್ಪ ಹರಿಜನ, ಅನೀಲ ಕಡಿಮನಿ, ಶಂಕರ ಬಗಲಿ, ಸಿದ್ದಣ್ಣ ಸಾಹುಕಾರ ಕೊಲ್ಲೂರ, ಭಾಗಪ್ಪ ಶೀವಣಗಿ ಸೇರಿದಂತೆ ಗ್ರಾಮದ ಅನೇಕ ಹಿರಿಯರುಇದ್ದರು. ರೇಣುಕ ಗವಾಯಿಗಳು ಪ್ರಾರ್ಥಿಸಿದರು.
ಉಪನ್ಯಾಸಕ ಸಿದ್ದಲಿಂಗ ಕಿಣಗಿ ನಿರೂಪಿಸಿ ವಂದಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

