ಸಚಿವ ಎಂ.ಬಿ.ಪಾಟೀಲರ ಜೊತೆ ಊಟ | ಮನೆಯವರ ಜೊತೆ ಮಾತು | ದೇಗುಲಗಳ ದರ್ಶನ
ವಿಜಯಪುರ: ಜೋರಾದ ಮಳೆ ಬಂದು ಈ ಬಿರು ಬೇಸಿಗೆಯಲ್ಲಿ ಒತ್ತಡದ ಸೆಖೆ ತಂದಂತೆ ಮಂಗಳವಾರ ಲೋಕಸಭೆ ಚುನಾವಣೆ ಮುಗಿದು ಹೋಗಿದ್ದು, ಕಾಂಗ್ರೆಸ್ ಅಭ್ಯರ್ಥಿ ಮತದಾನದ ಮರು ದಿನ ನಿರಾಳ ನಗೆ ಬೀರುತ್ತ ಓಡಾಡಿದ್ದು ಕಂಡು ಬಂತು.
ಚುನಾವಣೆ ಘೋಷಣೆಗೂ ಮುನ್ನವೇ ಕಳೆದ ನಾಲ್ಕು ತಿಂಗಳಿಂದಲೇ ಪ್ರೊ.ರಾಜು ಆಲಗೂರರು ಕಾಲಿಗೆ ಚಕ್ರ ಕಟ್ಟಿದ್ದರು. ನೂರಾ ಇಪ್ಪತ್ತು ದಿನಗಳಿಂದ ಕ್ಷೇತ್ರದ ಊರುಗಳನ್ನು ಸುತ್ತಲು ಆರಂಭಿಸಿದ್ದರು. ಯಾಕೆಂದರೆ ಅವರಿಗೆ ಗೊತ್ತಿತ್ತು, ಈ ಸಲ ಟಿಕೆಟ್ ತಮಗೇ ಎಂದು! ಅಂದುಕೊಂಡಂತೆ ಮೊದಲ ಪಟ್ಟಿಯಲ್ಲಿಯೇ ವಿಜಯಪುರದಿಂದ ಇವರಿಗೆ ಟಿಕೆಟ್ ಘೋಷಣೆಯಾಯಿತು. ಅದೂ ಜಿಲ್ಲೆಯಿಂದ ರಾಜ್ಯದಲ್ಲೇ ದಾಖಲೆ ಎನ್ನುವಂತೆ ಇವರೊಬ್ವರದೇ ಹೆಸರು ಪಕ್ಷದ ಹೈಕಮಾಂಡ್ ಅಂಗಳ ತಲುಪಿತ್ತು. ಮುಂದೆ ಇವರು ತಿರುಗಿ ನೋಡದೇ ಚುನಾವಣೆಯನ್ನು ಸವಾಲಾಗಿ ತೆಗೆದುಕೊಂಡರು. ಮೊದಲ ದಿನದಿಂದ ಮತದಾನದ ಕೊನೆಯ ದಿನದವರೆಗೂ ಇವರ ವೇಗ ಎಲ್ಲೂ ಕಮ್ಮಿಯಾಗಲಿಲ್ಲ.
ಕುಟುಂಬದ ಜೊತೆ ಸಮಯ..
ಬೆಳಗ್ಗೆ ಬೇಗನೇ ಎದ್ದ ಆಲಗೂರರು, ಕುಟುಂಬದ ಜೊತೆ ಬೆರೆತರು. ಅವರಿಗೆ ಒಂದಷ್ಟು ಸಮಯ ಕೊಟ್ಟರು. ಇವರು ಚಹಾ ಬದಲು ಬ್ಲ್ಯಾಕ್ ಕಾಫಿ ಕುಡಿಯುವದು ಹೆಚ್ಚು. ಇವತ್ತೂ ಅದೇ ಹೀರುತ್ತ ನಿನ್ನೆಯ ಮತದಾನ ವಿವರಕ್ಕಾಗಿ ಪತ್ರಿಕೆಗಳನ್ನು ತಿರುವಿ ಹಾಕಿದರು. ಸಮಯ 8ರ ಹೊತ್ತಿಗೆ ಇವರ ಹೊಡ್ಕೋ ಕಾಲೊನಿ ಮನೆಗೆ ಕಾರ್ಯಕರ್ತರು, ಮುಖಂಡರ ದಾಂಗುಡಿ. ‘ಸರ್ ಈ ಊರಾಗ ಹಿಂಗಾಯ್ತು ರೀ.. ಅಲ್ಲಿ ನಮ್ದೇ ಲೀಡ್ರೀ.. ಸಾಹೇಬ್ರ ನೀವು ಗೆಲ್ಲೋದು ಗ್ಯಾರಂಟಿ ರೀ..’ ಅನ್ನೋ ಕಲರವ ಶುರುವಾಗಿತ್ತು. ಅಷ್ಟರಲ್ಲಿ ದೃಶ್ಯ ಮಾಧ್ಯಮದವರ ಕ್ಯಾಮರಾ ಹಾಜರ್. ಟಿವಿ ಸೇರಿ ಹಲವು ಪತ್ರಕರ್ತರ ಪ್ರಶ್ನೆಗಳು. ಅದಕ್ಕೆ ಉತ್ತರ ಕೊಟ್ಟ ಆಲಗೂರರು, ‘ನನ್ನ ಗೆಲುವು ಶತಃಸಿದ್ಧ. ಜಿಲ್ಲೆಯ ಎಲ್ಲ ಕಡೆಯಿಂದಲೂ ಕಾಂಗ್ರೆಸ್‌ಗೆ ಒಳ್ಳೆಯ ವರದಿಗಳಿವೆ. ನಮಗೆ ಒಲವಿರುವ ಕಡೆಗಳಲ್ಲೆಲ್ಲ ಭರ್ಜರಿ ಮತದಾನವಾಗಿದೆ. ನಗರ ಪ್ರದೇಶಗಳಲ್ಲಿ ಬಿಜೆಪಿಗೆ ಹೆಚ್ಚಿನ ಮತದಾನವಾಗುವುದು ವಾಡಿಕೆ ಇದ್ದರೂ ಅದೆಲ್ಲ ಈ ಬಾರಿ ಸುಳ್ಳಾಗಿದೆ. ದಶಕಗಳ ನಂತರ ಈ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸುವ ಎಲ್ಲ ಲಕ್ಷಣಗಳಿವೆ’ ಎಂದು ನಗು ಮೊಗದಿಂದ ಹೇಳಿದರು.
ಇದಾದ ನಂತರ ಬಿಎಲ್‌ಡಿಇ ಆವರಣದ ಕಚೇರಿಗೆ ತೆರಳಿ ಅಲ್ಲಿ ಪ್ರಮುಖರೊಂದಿಗೆ ಸೇರಿ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಿದರು, ಒಂದಷ್ಟು ಹರಟಿದರು. ಅಷ್ಟೂ ದಿನದ ಅನುಭವಗಳನ್ನು ಹಂಚಿಕೊಂಡು ಹಗುರಾದರು. ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಿದ ತಂಡದ ರೂವಾರಿ ಡಾ.ಮಹಾಂತೇಶ ಬಿರಾದಾರ, ಮುಖಂಡರಾದ ಡಾ.ಸಂಗಮೇಶ ಬಬಲೇಶ್ವರ, ಸುರೇಶ ಹಳ್ಳಿ, ಚಂದ್ರಶೇಖರ ಶೆಟ್ಟಿ, ಡಾ.ಗಂಗಾಧರ ಸಂಬಣ್ಣಿ ಹಾಗೂ ಪ್ರಫುಲ್ ಮಂಗಣ್ಣವರ ಸೇರಿ ಅನೇಕರ ಜೊತೆ ಆಪ್ತವಾಗಿ ಬೆರೆತರು.

ಮಧ್ಯಾಹ್ನ ಎಂಬಿಪಿ ಜತೆ ಊಟ
ರಾಜು ಆಲಗೂರ ಬುದವಾರ ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಮನೆಯಲ್ಲಿ ಬಹಳೊತ್ತು ಕಳೆದರು. ಮೂರು ಗಂಟೆಗೂ ಹೆಚ್ಚುಕಾಲ ಅವರೊಂದಿಗಿದ್ದು ಎಲ್ಲ ವಿವರಣೆ ನೀಡಿದರು. ಅವರೊಂದಿಗೆ ಊಟ ಮಾಡಿ, ಖುಷಿಯಿಂದ ಇದ್ದರು. ಚುನಾವಣೆಯ ಯಾವ ಒತ್ತಡವೂ ಅವರಲ್ಲಿ ಇರಲಿಲ್ಲ. ಸಚಿವರು ಕೂಡ ಖುಷಿಯಿಂದ ಇದ್ದರು. ಬ್ಲಾಕ್, ಬೂತ್‌ಗಳ ಮಟ್ಟದಲ್ಲಿ ಯಾವ ಕಡೆ ಎಷ್ಟು ಮತದಾನವಾಗಿದೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತಗಳು ಬಂದಿರಬಹುದು ಎನ್ನುವ ಮಾತುಗಳು ನಡೆದವು. ಬಹಳ ವರ್ಷಗಳ ನಂತರ ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇರುವುದು ಕಂಡಿರುವ ಕುರಿತು ಸಮಾಧಾನದ ಘಳಿಗೆಗಳನ್ನು ಪಾಟೀಲರು, ಆಲಗೂರರೊಂದಿಗೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಸಚಿವರಲ್ಲಿ ಯಾವ ಧಾವಂತವಿರಲಿಲ್ಲ.

