ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಸೌಕರ್ಯಗಳು
ಚಡಚಣ: ಮೇ.೦೭ ರ ಮಂಗಳವಾರದಂದು ನಡೆಯಲಿರುವ ೨೦೨೪ ನೇ ಸಾಲಿನ ಲೋಕಸಭಾ ಕ್ಷೇತ್ರದ ಸದಸ್ಯರ ಚುನಾವಣೆಯ ಮುನ್ನಾ ದಿನವಾದ ಸೋಮವಾರದಂದು ಸಾಯಂಕಾಲ ೦೫ ಗಂಟೆಗೆ ರೇವತಗಾಂವ ಗ್ರಾಮದ ನಾಲ್ಕು ಮತಗಟ್ಟೆಗಳಿಗೆ ನೇಮಗೊಂಡ ಸಿಬ್ಬಂದಿ ಮತದಾನಕ್ಕೆ ಅಗತ್ಯವಾದ ಸಾಮಾಗ್ರಿಗಳನ್ನು ತೆಗೆದುಕೊಂಡು ಆಗಮಿಸಿದರು.
ವಿಶೇಷ ಮೆಡಿಕಲ್ ಕಿಟ್: ಬಿಸಿಲಿನ ತಾಪಮಾನ ಹಾಗೂ ಶಾಖಾಘಾತದ ಹಿನ್ನಲೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್, ಓಆರ್‌ಎಸ್ ಕಿಟ್‌ಗಳನ್ನು ಮಸ್ಟರಿಂಗ್ ಸಂದರ್ಭದಲ್ಲಿಯೇ ಒದಗಿಸಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾನ ಪ್ರಮಾಣ ಹೆಚ್ಚಳಕ್ಕೆ ಎಲ್ಲ ಮತಗಟ್ಟೆಗಳಿಗೆ ಅವಶ್ಯಕ ಮೂಲಭೂತ ಸೌಕರ್ಯಗಳಾದ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ, ಕುಳಿತುಕೊಳ್ಳಲು ಬೆಂಚ್ ವ್ಯವಸ್ಥೆ, ಅಂಗವಿಕಲರಿಗೆ ರ‍್ಯಾಂಪ್, ವೀಲ್‌ಚೇರ್ ವ್ಯವಸ್ಥೆ ಮಾಡಿದೆ. ತೀವ್ರ ಬಿಸಿಲಿನ ಬೇಗೆ ಇರುವುದರಿಂದ ಫ್ಯಾನ್ ವ್ಯವಸ್ಥೆಯನ್ನು ಗ್ರಾಮ ಪಂಚಾಯತ್ ಅಧಿಕಾರಿಗಳು ಮಾಡಿದ್ದಾರೆ.
ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಕೆಲವು ನಿಯಮಗಳನ್ನು ತಿಳಿಸಲು ಬಿತ್ತಿ ಪತ್ರಗಳನ್ನು ಅಂಟಿಸಲಾಗಿದೆ. ಅದರಲ್ಲಿ ವಿವಿ ಪ್ಯಾಟ್ ಮಶಿನ್ ಮೂಲಕ ಮತಚಲಾಯಿಸಿದ ಮೇಲೆ ನಮ್ಮ ಆಯ್ಕೆಯ ಅಭ್ಯರ್ಥಿಗೆ ನಮ್ಮ ಮತ ಚಲಾವಣೆಯಾಗಿರುವುದ್ದನ್ನು ಖಚಿತಪಡಿಸಿಕೊಳ್ಳುವ ಕುರಿತು, ಮತದಾನ ಕೇಂದ್ರದಲ್ಲಿನ ಪ್ರಕ್ರಿಯೆಗಳೇನು?, ವಿದ್ಯುನ್ಮಾನ ಮತದಾನ ಯಂತ್ರ ಮತ್ತು ವಿವಿಪ್ಯಾಟ್ ಯಂತ್ರವನ್ನು ಬಳಸಿ ನಿಮ್ಮ ಮತವನ್ನು ಚಲಾಯಿಸುವುದು ಹೇಗೆ?, ಮತದಾನ ಕೇಂದ್ರದಲ್ಲಿ ಯಾವ ರೀತಿ ದಾಖಲೆಗಳನ್ನು ಗುರುತಿನ ಚೀಟಿಯಾಗಿ ಬಳಸಬಹುದು ಹಾಗೂ ಮತದಾನ ಕೇಂದ್ರದಲ್ಲಿರುವ ಸೌಲಭ್ಯಗಳೇನು ಎಂಬುದರ ಕುರಿತು ಮಾಹಿತಿ ಅದರಲ್ಲಿ ಅಡಕವಾಗಿದೆ.
ಗ್ರಾಮದಲ್ಲಿ ಒಟ್ಟು ೩೩೮೨ ಮತದಾರರ ಪೈಕಿ ೧೬೯೯ ಪುರುಷರ ಹಾಗೂ ೧೬೮೩ ಮಹಿಳಾ ಮತದಾರರಿದ್ದು, ನಾಲ್ಕು ಮತಗಟ್ಟೆಗಳನ್ನು ತೆರೆಯಲಾಗಿದೆ. ಮತದಾನ ಬೆಳಗ್ಗೆ ೦೭ ಗಂಟೆಯಿಂದ ಸಂಜೆ ೦೬ ರ ವರೆಗೆ ನಡೆಯಲಿದೆ. ಬಿಎಲ್‌ಓಗಳು, ಬಿಸಿಯೂಟ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು, ಗ್ರಾಮ ಸೇವಕ, ಪೊಲೀಸ್ ಸಿಬ್ಬಂದಿ, ಸ್ವಯಂ ಸೇವಕರು ಸೇರಿದಂತೆ ಇತರ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡು ಚುನಾವಣೆಯು ಶಾಂತಿಯುತ ಹಾಗೂ ಜಾಗೃತವಾಗಿ ನಡೆಸಲು ನಿಯೋಜನೆಗೊಳಿಸಲಾಗಿತ್ತು.

