ಬಸವನಬಾಗೇವಾಡಿ: ಪಟ್ಟಣದ ಬಸವೇಶ್ವರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸೋಮವಾರ ಮೇ.೭ ರಂದು ನಡೆಯಲಿರುವ ವಿಜಯಪುರ ಮೀಸಲು ಲೋಕಸಭಾ ಮತಕ್ಷೇತ್ರದ ಚುನಾವಣೆಗೆ ಜಿಲ್ಲೆಯ ವಿವಿಧೆಡೆಗಳಿಂದ ನಿಯೋಜಿಸಿದ ಚುನಾವಣಾ ಸಿಬ್ಬಂದಿಗಳು ಚುನಾವಣೆ ಸಾಮಗ್ರಿಗಳನ್ನು ಪರಿಶೀಲಿಸಿದ ನಂತರ ತಮ್ಮ ನಿಗದಿ ಪಡಿಸಿದ ವಾಹನಗಳ ಮೂಲಕ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಿಗೆ ತೆರಳಿದರು.
ಬಸವೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣೆ ಸಿಬ್ಬಂದಿಗಳಿಗೆ ಮಾಹಿತಿ ಕೇಂದ್ರ, ಹಾಜರಾತಿ ವಿಭಾಗ, ಕಾಯ್ದಿರಿಸಿದ ಸಿಬ್ಬಂದಿಗಳಿಗೆ ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಬೆಳಗ್ಗೆ ಉಪಹಾರ ವ್ಯವಸ್ಥೆ, ಮಧ್ಯಾನ್ಹದ ಊಟದ ವ್ಯವಸ್ಥೆ, ಬಿಸಿಲಿನ ಪ್ರಖರತೆ ಇರುವದರಿಂದಾಗಿ ತಂಪಾದ ಕುಡಿಯುವ ನೀರಿನ ವ್ಯವಸ್ಥೆ, ಊಟದಲ್ಲಿ ಮಜ್ಜಿಗೆ, ಶರಬತ್ ತಾಲೂಕಾಡಳಿತವು ವ್ಯವಸ್ಥೆ ಮಾಡಿತ್ತು.
ಪ್ರತಿ ಮತಗಟ್ಟೆ ಕೇಂದ್ರಗಳಿಗೆ ನಿಯೋಜಿಸಿರುವ ಸಿಬ್ಬಂದಿ ಮಾಹಿತಿಯನ್ನು ಬೋರ್ಡ್ಗಳಿಗೆ ಹಚ್ಚಲಾಗಿತ್ತು. ಸಿಬ್ಬಂದಿಗಳು ಇದರ ಸಹಾಯದಿಂದ ತಮಗೆ ಯಾವ ಮತಗಟ್ಟೆ ಕೇಂದ್ರಕ್ಕೆ ನಿಯೋಜನೆ ಮಾಡಲಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳುತ್ತಿರುವುದು ಕಂಡುಬಂದಿತ್ತು.
ಚುನಾವಣೆಗೆ ನಿಯೋಜಿಸಿದ ಸಿಬ್ಬಂದಿಗಳು ಒಂದು ವೇಳೆ ತಮ್ಮೊಂದಿಗೆ ಮಕ್ಕಳನ್ನು ಕರೆದುಕೊಂಡು ಬಂದರೆ ಮಕ್ಕಳಿಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ಮಕ್ಕಳ ಪಾಲನಾ ಕೇಂದ್ರವನ್ನು ವ್ಯವಸ್ಥೆ ಮಾಡಲಾಗಿತ್ತು. ಯಾವ ಸಿಬ್ಬಂದಿಗಳು ಮಕ್ಕಳನ್ನು ಕರೆದುಕೊಂಡು ಬಾರದೇ ಇರುವದರಿಂದಾಗಿ ಮಕ್ಕಳ ಪಾಲನಾ ಕೇಂದ್ರದಲ್ಲಿ ಕೇಂದ್ರಕ್ಕೆ ನಿಯೋಜನೆ ಮಾಡಿದ ಸಿಬ್ಬಂದಿಗಳು ಮಾತ್ರ ಕಂಡುಬಂದರು.
ಕೆಲ ಸಿಬ್ಬಂದಿಗಳು ಗೈರು ಹಾಜರಿದ್ದರಿಂದಾಗಿ ಕಾಯ್ದಿರಿಸಿದ ಸಿಬ್ಬಂದಿಗಳಿಗೆ ಚುನಾವಣೆ ಕರ್ತವ್ಯಕ್ಕೆ ಸಹಾಯಕ ಚುನಾವಣಾಧಿಕಾರಿಗಳು ನಿಯೋಜನೆ ಮಾಡುತ್ತಿರುವದು ಕಂಡುಬಂದಿತ್ತು. ಕಾಯ್ದಿರಿಸಿದ ಸಿಬ್ಬಂದಿಗಳಿಗೆ ಕುಳಿತುಕೊಳ್ಳಲು ಶಾಮಿಯಾನ ವ್ಯವಸ್ಥೆ ಮಾಡಲಾಗಿತ್ತು. ಆರೋಗ್ಯ ಕೇಂದ್ರವನ್ನು ಸಹ ತೆಗೆಯಲಾಗಿತ್ತು.
ಕಾಲೇಜಿನ ಪ್ರತಿ ಕೋಣೆಯಲ್ಲಿ ೨೧ ಸೆಕ್ಟರ್ವಾರು ಮತಗಟ್ಟೆಗಳಿಗೆ ಸಂಬಂಧಿಸಿದಂತೆ ಚುನಾವಣೆಗೆ ಸಂಬಂಧಿಸಿದ ಸಾಮಗ್ರಿಗಳನ್ನು ವಿತರಿಸುವ ವ್ಯವಸ್ಥೆ ಮಾಡಲಾಗಿತ್ತು. ಇದರಿಂದಾಗಿ ಗೊಂದಲವಾಗದೇ ಸಿಬ್ಬಂದಿಗಳು ನಿರಾಳವಾಗಿ ತಮ್ಮ ಮತಗಟ್ಟೆಗೆ ಸಂಬಂಧಿಸಿದ ಚುನಾವಣೆಯ ಸಾಮಗ್ರಿಗಳನ್ನು ತೆಗೆದುಕೊಂಡು ಪರಿಶೀಲಿಸಿದ ನಂತರ ತಮಗೆ ನಿಗದಿಪಡಿಸಿದ ವಾಹನಗಳ ಮೂಲಕ ತಮ್ಮ ತಮ್ಮ ಮತಗಟ್ಟೆಗಳಿಗೆ ತೆರಳಿದರು. ಆಯಾ ಕೋಣೆಗಳಲ್ಲಿ ಸಂಬಂಧಿಸಿದ ಸೆಕ್ಟರ್ ಅಧಿಕಾರಿಗಳು, ಮಾಸ್ಟರ್ ಟ್ರೇನರ್ ಅವರು ಸಿಬ್ಬಂದಿಗಳಿಗೆ ಮತಯಂತ್ರದ ಬಳಕೆ, ಮತದಾನ ದಿನ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು. ಮತಗಟ್ಟೆಗಳಿಗೆ ತೆರಳಿದ ಸಿಬ್ಬಂದಿಗಳು ಮೇ. ೭ ರಂದು ನಡೆಯಲಿರುವ ಲೋಕಸಭಾ ಚುನಾವಣೆ ಮತದಾನಕ್ಕೆ ಬೇಕಾದ ಅಗತ್ಯ ಸಿದ್ಧತೆಯನ್ನು ಸೋಮವಾರ ಸಂಜೆ ಮಾಡಿಕೊಂಡರು.
ಸಹಾಯಕ ಚುನಾವಣಾಧಿಕಾರಿಗಳಾದ ಗಂಗಪ್ಪ ಎಂ. ಅವರು, ಮಧ್ಯಾನ್ಹ ಮೂರು ಗಂಟೆಯೊಳಗೆ ಬಸವನಬಾಗೇವಾಡಿ ವಿಧಾನಸಭಾ ಮತಕ್ಷೇತ್ರದಲ್ಲಿರುವ ೨೩೦ ಮತಗಟ್ಟೆಗಳಿಗೆ ತೆರಳುವ ಎಲ್ಲ ವಾಹನಗಳು ತೆರಳಿದವು. ಪ್ರತಿಯೊಂದು ಮತಗಟ್ಟೆಗೆ ಒಬ್ಬ ಮತಗಟ್ಟೆ ಅಧಿಕಾರಿ, ಒಬ್ಬ ಸಹಾಯಕ ಮತಗಟ್ಟೆ ಅಧಿಕಾರಿ, ಇಬ್ಬರು ಸಹಾಯಕ ಅಧಿಕಾರಿಗಳು, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆಯ ಒರ್ವ ಸಿಬ್ಬಂದಿ ಇರಲಿದ್ದಾರೆ. ಇದುವರೆಗೂ ಮಂತಯಂತ್ರಗಳಲ್ಲಿ ಯಾವುದೇ ದೋಷಗಳು ಕಂಡುಬಂದಿಲ್ಲ. ನ್ಯಾಯಸಮ್ಮತ, ಪಾರದರ್ಶಕ ಮತದಾನ ನಡೆಯಲು ಬೇಕಾದ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಈ ಸಂದಂರ್ಭದಲ್ಲಿ ಬಸವನಬಾಗೇವಾಡಿ ತಹಸೀಲ್ದಾರ ವೈ.ಎಸ್. ಸೋಮನಕಟ್ಟಿ, ಕೊಲ್ಹಾರ ತಹಸೀಲ್ದಾರ ಎಸ್.ಎಸ್. ನಾಯಕಲಮಠ ಇದ್ದರು.
Subscribe to Updates
Get the latest creative news from FooBar about art, design and business.
Related Posts
Add A Comment

