– ಬಸವರಾಜ ನಂದಿಹಾಳ
ಬಸವನಬಾಗೇವಾಡಿ: ಸಾರ್ವತ್ರಿಕ ಲೋಕಸಭಾ ಚುನಾವಣೆಯ ಎರಡನೇ ಹಂತದಲ್ಲಿ ನಡೆಯಲಿರುವ ವಿಜಯಪುರ ಮೀಸಲು ಮತಕ್ಷೇತ್ರದ ಲೋಕಸಭಾ ಚುನಾವಣೆಯ ಮತದಾನ ಮೇ. ೭ ರಂದು ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಡೆಯಲು ಕ್ಷಣ ಗಣನೆ ಆರಂಭಗೊಂಡಿದೆ. ಮತಕ್ಷೇತ್ರದಲ್ಲಿರುವ 230 ಮತಗಟ್ಟೆಗಳು ಸಿದ್ದಗೊಳ್ಳುತ್ತಿವೆ. ಮತಗಟ್ಟೆಗೆ ರ್ಯಾಂಪ್, ಬೆಳಕಿನ ವ್ಯವಸ್ಥೆ, ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.
ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ೧೨೨ ಸ್ಥಳದಲ್ಲಿ ೨೩೦ ಮತಗಟ್ಟೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮತಕ್ಷೇತ್ರದಲ್ಲಿ ೧,೧೦,೨೪೬ ಪುರುಷ ಮತದಾರರು, ೧,೦೭,೩೦೭ ಮಹಿಳಾ ಮತದಾರರು, ೧೫ ಇತರೆ ಮತದಾರರು ಸೇರಿ ಒಟ್ಟು ೨,೧೭,೫೬೮ ಮತದಾರರು ಇದ್ದಾರೆ.
೨೩೦ ಮತಗಟ್ಟೆಗಳಲ್ಲಿ ಮತಕ್ಷೇತ್ರದ ಮನಗೂಳಿ ಪಟ್ಟಣದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೩೧, ಬಸವನಬಾಗೇವಾಡಿಯ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೭೭, ಟಕ್ಕಳಕ್ಕಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೯೧, ನಿಡಗುಂದಿ ಪಟ್ಟಣದ ಸರ್ಕಾರಿ ಕನ್ನಡ ಹೆಣ್ಣುಮಕ್ಕಳ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೨೧೬, ಅರಳದಿನ್ನಿ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೨೩೦ ಅನ್ನು ಸಖಿ ಮತಗಟ್ಟೆಗಳೆಂದು, ಮತಕ್ಷೇತ್ರದ ಕೊಲ್ಹಾರ ಪಟ್ಟಣದಲ್ಲಿರುವ ಸರ್ಕಾರಿ ಉರ್ದು ಗಂಡು ಮಕ್ಕಳ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೧೭೩ ಅನ್ನು ವಿಶೇಷ ಚೇತನರ ನಿರ್ವಹಣೆಯ ಮತಗಟ್ಟೆ, ಬಳೂತಿ ಆರ್ಸಿ ಗ್ರಾಮದ ಸರ್ಕಾರಿ ಕನ್ನಡ ಬಾಲಕರ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೧೮೩ ಅನ್ನು ಯುವಜನ ನಿರ್ವಹಣೆ ಮತಗಟ್ಟೆ, ಮಸಬಿನಾಳ ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆ ಸಂಖ್ಯೆ-೪೩ ಅನ್ನು ಧ್ಯೇಯ ಆಧಾರಿತ ಮತಗಟ್ಟೆ ಎಂದು ಎಂಟು ವಿಶೇಷ ಮತಗಟ್ಟೆ ಎಂದು ಗುರುತಿಸಲಾಗಿದೆ.
ಸಹಾಯಕ ಚುನಾವಣಾಧಿಕಾರಿ ಗಂಗಪ್ಪ ಎಂ. ಅವರು, ಈಗಾಗಲೇ ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತದಾನದಲ್ಲಿ ಯಾವುದೇ ಕಪ್ಪು ಚುಕ್ಕೆ ಬಾರದಂತೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಯುವ ಮತದಾರರು ಮತದಾನ ದಿನದಂದು ತಪ್ಪದೇ ಮತದಾನ ಮಾಡುವ ನಿಟ್ಟಿನಲ್ಲಿ ಅವರಿಗೆ ಯುವ ಮತದಾರ ಅಭಿನಂದನಾ ಪತ್ರ ಸಹ ನೀಡಲಾಗಿದೆ. ಮತಕ್ಷೇತ್ರದಲ್ಲಿ ಶೇ.೯೦.೧೯ ರಷ್ಟು ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗಿದೆ. ಈ ಬೇಸಿಗೆಯಲ್ಲಿ ಪ್ರಖರವಾದ ಬಿಸಿಲು ಇರುವದರಿಂದಾಗಿ ಮತಗಟ್ಟೆ ಸಿಬ್ಬಂದಿಗಳಿಗೆ, ಮತದಾರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಮತದಾನ ಹೆಚ್ಚಾಗಲು ಈಗಾಗಲೇ ಸ್ವಿಪ್ ಸಮಿತಿಯಿಂದ ಸಾಕಷ್ಟು ಮತದಾನದ ಜಾಗೃತಿ ಕಾರ್ಯಕ್ರಮಗಳನ್ನು ಕೈಗೊಂಡಿದೆ. ಶೇ.೧೦೦ ರಷ್ಟು ಮತದಾನವಾಗಲು ಎಲ್ಲ ಮತದಾರರು ತಪ್ಪದೇ ಮತದಾನ ಮಾಡಬೇಕೆಂದರು.
ನೀತಿ ಸಂಹಿತೆ ಜಾರಿಯಾದ ನಂತರ ಕ್ಷೇತ್ರದಲ್ಲಿ ಇದುವರೆಗೂ ೫೧ ಲಕ್ಷ ರೂ. ನಗದು ಹಣ ಜಪ್ತಿ ಮಾಡಲಾಗಿದೆ. ೪೧ ಲೀಟರ್ ಸಾರಾಯಿ, ೪೫ ಲೀಟ ಕಳ್ಳಬಟ್ಟಿ ಸಾರಾಯಿ, ೫ ವಾಹನಗಳು ವಶಕ್ಕೆ ತೆಗೆದುಕೊಳ್ಳುವ ಜೊತೆಗೆ ೧೧ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಈಗಾಗಲೇ ಲೋಕಸಭಾ ಚುನಾವಣೆಯ ಪ್ರಚಾರ ಕಾರ್ಯದಲ್ಲಿ ಬಿಜೆಪಿ, ಕಾಂಗ್ರೆಸ್ ಪಕ್ಷಗಳ ಅಭ್ಯರ್ಥಿಗಳು, ವಿವಿಧ ನಾಯಕರೊಂದಿಗೆ ಅಬ್ಬರದ ಪ್ರಚಾರ ಕಾರ್ಯ ಮಾಡುವ ಮೂಲಕ ಮತದಾರರಲ್ಲಿ ಮತಯಾಚಿಸಿದ್ದಾರೆ. ಈ ಸಲ ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿಯಾಗಿದ್ದರಿಂದಾಗಿ ಎರಡು ಪಕ್ಷಗಳ ಮುಖಂಡರು, ಕಾರ್ಯಕರ್ತರು ಜಂಟಿಯಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ಮತದಾರರು ಯಾವ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂಬುವದನ್ನು ಮತದಾನ ದಿನ ನಿರ್ಧಾರ ಮಾಡಲಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

