ದೇವರಹಿಪ್ಪರಗಿ: ಅಭಿವೃದ್ಧಿಯ ಹೆಸರಲ್ಲಿ ರಸ್ತೆ ಕಾಮಗಾರಿಗಾಗಿ ಎಡ ಬಲಗಳಲ್ಲಿಯ ಮರಗಳ ಮಾರಣಹೋಮ ನಡೆಯುತ್ತಿದ್ದರೂ ಕಂಡು ಕಾಣದಂತಿರುವ ಅರಣ್ಯ ಇಲಾಖೆಯ ಕುರಿತು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ಇಂಡಿ ರಸ್ತೆಯಲ್ಲಿ ದ್ವಿಪಥ ರಸ್ತೆಗಾಗಿ ಕಾಮಗಾರಿ ಆರಂಭಿಸಲಾಗಿದ್ದು, ರಸ್ತೆ ಬದಿಯ ಚರಂಡಿ ನಿರ್ಮಾಣಕ್ಕಾಗಿ ಅಂಬೇಡ್ಕರ್ ವೃತ್ತದಿಂದ ಕೆಇಬಿವರೆಗಿನ ಎಡಬಲಗಳಲ್ಲಿನ ಹತ್ತು ವರ್ಷಗಳ ಹಿಂದೆ ನೆಟ್ಟ ೧೦೦ ಕ್ಕೂ ಹೆಚ್ಚು ಮರಗಳನ್ನು ಬೇರು ಸಮೇತ ಕಿತ್ತುಹಾಕಲಾಗಿದೆ. ಸಾಮಾನ್ಯವಾಗಿ ಅಭಿವೃದ್ಧಿ ಕಾರ್ಯಗಳಿಗೆ ಮರಗಳ ತೆರವು ಕಾರ್ಯಕ್ಕೆ ಅರಣ್ಯ ಇಲಾಖೆಯ ಅನುಮತಿ ಬೇಕು. ಆದರೆ ಇಲ್ಲಿ ಅರಣ್ಯ ಇಲಾಖೆಯ ಗಮನ ತಂದು ಮರಗಳನ್ನು ಕಡಿತಗೊಳಿಸಲಾಗಿದೆಯೋ ಹೇಗೆ ಎಂಬುದರ ಕುರಿತು ಮಾಹಿತಿಯಿಲ್ಲ.
ಒಂದೆಡೆ ದಿನದಿಂದ ದಿನಕ್ಕೆ ಕಾಡು ಬೆಳೆಸಿ, ನಾಡು ಉಳಿಸಿ, ಮನೆಗೊಂದು ಮರ ಬೆಳೆಸಿ ಎಂಬ ಘೋಷಣೆಗಳೊಂದಿಗೆ ಪರಿಸರ ಉಳಿವಿಗಾಗಿ ಜಾಗೃತಿ ಮೂಡಿಸಲಾಗುತ್ತಿದ್ದರೇ, ಇಲ್ಲಿ ಮಾತ್ರ ಮರಗಳ ಜಾಗೃತಿ ಬದಲು ದುರ್ಗತಿ ಎನ್ನುವಂತಾಗಿದೆ. ತಾಪಮಾನದ ಹೆಚ್ಚಳ, ಆಮ್ಲಜನಕದ ಕುಸಿತ, ಬಿಸಿಗಾಳಿ ಬಿಸುವಿಕೆ, ಮಳೆಪ್ರಮಾಣದಲ್ಲಿ ಇಳಿಕೆಯಂತ ಎಚ್ಚರಿಕೆಗಳ ನಡುವೆಯೂ ಪಟ್ಟಣದ ಮರಗಳನ್ನು ಬೇಕಾಬಿಟ್ಟಿಯಾಗಿ ಕಡಿಯುತ್ತಿರುವುದು ಅತ್ಯಂತ ನಿರ್ಲಕ್ಷö್ಯ ನಡೆ. ಒಂದು ಸಸಿಗೆ ನೀರುಣಿಸಿ ಮರವಾಗಿ ಬೆಳೆಸುವುದರ ಹಿಂದಿನ ಶ್ರಮ ಎಂಥದ್ದು ಎಂಬುವುದು ಕೇವಲ ಮರಗಳನ್ನು ನೆಟ್ಟು ಬೆಳೆಸಿದವರಿಗೆ ಗೊತ್ತು. ಆದರೆ ಈಗ ನಿಷ್ಕರುಣೆಯಿಂದ ಅಗತ್ಯಕ್ಕಿಂತ ಹೆಚ್ಚಾಗಿ ಮರಗಳನ್ನು ಕತ್ತರಿಸಿರುವುದು ಅಕ್ಷರಶ ತಪ್ಪು. ಆದ್ದರಿಂದ ಕೂಡಲೇ ರಸ್ತೆ, ಚರಂಡಿ ನಿರ್ಮಾಣದ ನಂತರ ಅಂಬೇಡ್ಕರ್ ವೃತ್ತದಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಎಡಬಲಗಳಲ್ಲಿ ನೂರಕ್ಕೂ ಅಧಿಕ ಸಸಿಗಳನ್ನು ನೆಡಲು ಕ್ರಮ ವಹಿಸಬೇಕು. ಜೊತೆಗೆ ಮುಖ್ಯವಾಗಿ ಹೆಸ್ಕಾಂಇಲಾಖೆ ಅನಗತ್ಯವಾಗಿ ಗಿಡ ಮರಗಳಿಗೆ ಕೊಡಲಿಯೇಟು ಹಾಕದಂತೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಪಟ್ಟಣ ಪಂಚಾಯಿತಿ ಸದಸ್ಯ ರಮೇಶ ಮಸಬಿನಾಳ, ತಾಲ್ಲೂಕು ಜಂಗಮಾಭಿವೃದ್ಧಿ ಸಂಘದ ಅಧ್ಯಕ್ಷ ಸೋಮಶೇಖರ ಹಿರೇಮಠ, ನಾಗೇಂದ್ರ ಇಂಡಿ, ನಜೀರ್ ಕಲಕೇರಿ, ಸೋಮು ಸೊನ್ನದ ಸೇರಿದಂತೆ ಹಲವು ಪರಿಸರ ಪ್ರೀಯರ ಆಗ್ರಹವಾಗಿದೆ.
Subscribe to Updates
Get the latest creative news from FooBar about art, design and business.
Related Posts
Add A Comment

