ವಿಜಯಪುರ: ಎಐಸಿಸಿ ಧುರೀಣ ರಾಹುಲ್ ಗಾಂಧಿ ವಿಜಯಪುರಕ್ಕೆ ಬಂದಾಗ ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರೇ ಆ ಸಭೆಯಲ್ಲಿ ಇರಲಿಲ್ಲ, ಅವರ ಫೋಟೋ ಸಹ ಬ್ಯಾನರನಲ್ಲಿ ಅಲ್ಲಿರಲಿಲ್ಲ, ರಾಹುಲ್ ಗಾಂಧೀ ಆಲಗೂರ ಅವರ ಹೆಸರು ಸಹ ಉಲ್ಲೇಖಿಸಿ ಮತಯಾಚಿಸಲಿಲ್ಲ, ಪ್ರಚಾರ ಸಭೆಗೆ ಅಭ್ಯರ್ಥಿಯನ್ನೇ ಆಹ್ವಾನಿಸದೆ ಕಾಂಗ್ರೆಸ್ ಈಗಾಗಲೇ ಸೋಲು ಒಪ್ಪಿಕೊಂಡಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.
ಭಾನುವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಾಲಿ ಶಾಸಕರಾಗಿದ್ದ ಪ್ರೊ.ರಾಜು ಆಲಗೂರ ಅವರಿಗೆ ಕಾಂಗ್ರೆಸ್ ಪಕ್ಷ 2018 ರಲ್ಲಿ ಟಿಕೆಟ್ ಏಕೆ ನಿರಾಕರಣೆ ಮಾಡಿತು? 2024 ರ ಚುನಾವಣೆಯಲ್ಲಿಯೂ ಸಹ ಅವರಿಗೆ ಕಾಂಗ್ರೆಸ್ ಟಿಕೇಟ್ ನಿರಾಕರಣೆ ಮಾಡಿತ್ತು, ಈಗ ಲೋಕಸಭೆಗೆ ಯಾರೊಬ್ಬರು ಅಭ್ಯರ್ಥಿಯೇ ಕಾಂಗ್ರೆಸ್ ಬಳಿ ಇರದ್ದರಿಂದ ಅನಿವಾರ್ಯವಾಗಿ ಆಲಗೂರ ಅವರ ಕೊರಳಿಗೆ ಈ ಜವಾಬ್ದಾರಿ ವಹಿಸಿದೆ ಎಂದರು.
ಈ ಹಿಂದೆ ನಮ್ಮ ಸರ್ಕಾರದ ಮೇಲೆ ಆರೋಪ ಮಾಡಿದ ಗುತ್ತಿಗೆದಾರರು ಸಹ ಈ ಸರ್ಕಾರದ ಮೇಲೆ ಅಸಮಾಧಾನಗೊಂಡು ನ್ಯಾಯಾಲಯದ ಮೆಟ್ಟಿಲೇರಿದ್ದಾರೆ, ರಾಜ್ಯ ಕಾಂಗ್ರೆಸ್ ಸರ್ಕಾರ ಒಂದೇ ಒಂದು ಅಭಿವೃದ್ಧಿ ಕಾಮಗಾರಿಗೆ ಲೋಕಾರ್ಪಣೆ ಮಾಡುವಲ್ಲಿ ಅಷ್ಟೇ ಏಕೆ, ಶಾಸಕರಿಗೆ ಪ್ರದೇಶಾಭಿವೃದ್ಧಿ ನಿಧಿ ಅನುದಾನ ನೀಡುವಲ್ಲಿಯೂ ವಿಫಲವಾಗಿದೆ. ಹೀಗಾಗಿ ಕಾಂಗ್ರೆಸ್ ಶಾಸಕರಲ್ಲಿಯೇ ಅತೃಪ್ತಿ ಪ್ರಬಲವಾಗಿದೆ ಎಂದು ದೂರಿದರು.
ನೇತೃತ್ವದ ಬಗ್ಗೆ ಉತ್ತರ ನೀಡಲು ಸಾಧ್ಯವಿಲ್ಲದ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಮಂತ್ರಿ ಅಭ್ಯರ್ಥಿಯೇ ಇಲ್ಲದಂತಾಗಿದೆ. ಇದಕ್ಕೆ ವ್ಯತಿರಿಕ್ತವಾಗಿ ಮೋದಿಜಿ ಅವರ ಅಖಂಡ ನೇತೃತ್ವ ಬಿಜೆಪಿ ಹೆಗಲಿದೆ ಇದೆ. ಕಳೆದ ವಿಧಾನಸಭಾ ಗೆಲುವಿನ ಗುಂಗಿನಿಂದ ಕಾಂಗ್ರೆಸ್ ಇನ್ನೂ ಹೊರಬಂದಿಲ್ಲ. ಇದೇ ಗುಂಗಿನಲ್ಲಿ ಲೋಕಸಭೆಯನ್ನೂ ಜಯಿಸುವ ಭ್ರಮೆ ಕಾಂಗ್ರೆಸ್ ಪಕ್ಷದಲ್ಲಿದೆ, ಒಂದು ರೀತಿ ಈ ಭ್ರಮೆ ಹೊರತುಪಡಿಸಿ ಯಾವ ರೀತಿಯ ಬತ್ತಳಿಕೆಯೂ ಇಲ್ಲ. ಕೇವಲ ಮೋದಿಜಿ ಅವರನ್ನು ತೆಗಳುವುದೊಂದಕ್ಕೆ ಕಾಂಗ್ರೆಸ್ ಸೀಮಿತವಾಗಿದೆ ಎಂದು ಶಹಾಪೂರ ಹೇಳಿದರು.
ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಯಡಿಯಲ್ಲಿ ಅನೇಕ ಜನರಿಗೆ ಆಗಿರುವ ಅನ್ಯಾಯವನ್ನು ನಾವು ಸಮರ್ಥವಾಗಿ ಬಿಂಬಿಸಿದ್ದೇವೆ. ಒಂದೇ ವರ್ಷದಲ್ಲಿ ಕಾಂಗ್ರೆಸ್ ಸರ್ಕಾರದ ಬಗ್ಗೆ ಭ್ರಮನಿರಸನವಾಗಿದೆ ಎಂದು ಅರುಣ ಶಹಾಪೂರ ನುಡಿದರು.
65 ಮಹಾಶಕ್ತಿ ಕೇಂದ್ರಗಳಲ್ಲಿ ಪ್ರಚಾರ
ಬಿಜೆಪಿ ಪ್ರಚಾರ ಸಾಗಿ ಬಂದಿರುವ ಕುರಿತಾಗಿಯೂ ವಿವರಣೆ ನೀಡಿದ ಶಹಾಪೂರ, ಭಾರತೀಯ ಜನತಾ ಪಕ್ಷ ಜಿಲ್ಲೆಯಲ್ಲಿ ಒಟ್ಟು 65 ಮಹಾಶಕ್ತಿ ಕೇಂದ್ರಗಳಲ್ಲಿ ಯಶಸ್ವಿ ಪ್ರಚಾರ ನಡೆಸಿದೆ, ಪಾದಯಾತ್ರೆ, ಬಹಿರಂಗ ಸಭೆ ಹಾಗೂ ಈ ಬಾರಿ ಔಪಚಾರಿಕ ಮತಯಾಚಿಸುವ ಕಟ್ಟೆ ಸಭೆಗಳ ಮೂಲಕ ಮತಯಾಚಿಸುವ ವಿಭಿನ್ನ ಪ್ರಯೋಗವನ್ನು ಯಶಸ್ವಿಯಾಗಿ ನಡೆಸಲಾಗಿದೆ, ಈ ಕಟ್ಟೆ ಸಭೆಯಲ್ಲಿ ರಾಷ್ಟ್ರೀಯ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗಿದ್ದು,100 ಕ್ಕೂ ಹೆಚ್ಚು ಕಟ್ಟೆಸಭೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಅವರು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸುವುದು ಶತಸಿದ್ಧ ಎಂದು ಭವಿಷ್ಯ ನುಡಿದರು.
ಬಿಜೆಪಿ ಮುಖಂಡರಾದ ಸಂಜಯ ಪಾಟೀಲ ಕನಮಡಿ, ಶಂಕರಗೌಡ ಪಾಟೀಲ, ಭರತ ಕೋಳಿ, ಕೃಷ್ಣಾ ಗುನ್ನಾಳಕರ, ರವಿ ವಗ್ಗೆ, ವಿಜಯ ಜೋಶಿ ಮೊದಲಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

