ಗೆಲುವು ನನ್ನದೇ | ಬಿಜೆಪಿ ಅಭ್ಯರ್ಥಿ ಜಿಗಜಿಣಗಿ ವಿಶ್ವಾಸ | ಡಿಎಸ್ಎಸ್ ಬಗ್ಗೆ ನನಗೆ ಗೌರವವಿದೆ
ವಿಜಯಪುರ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಈ ಬಾರಿಯೂ ನಾನು ಗೆಲ್ಲುತ್ತೇನೆ ಎಂದು ಸಂಸದ ಹಾಗೂ ವಿಜಯಪುರ ಮೀಸಲು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ವಿಶ್ವಾಸ ವ್ಯಕ್ತಪಡಿಸಿದರು.
ನಗರದಲ್ಲಿ ರವಿವಾರ ಪತ್ರಿಕಾಗೋಷ್ಟಿ ನಡಸಿದ ಅವರು, ಕಳೆದ ಚುನಾವಣೆಗಿಂತಲೂ ಈ ಚುನಾವಣೆಯಲ್ಲಿ ಒಂದು ಮತ ಹೆಚ್ಚಿಗೆ ಪಡೆಯುತ್ತೇನೆ. ಒಂದು ಮತದ ಅಂತರದಿಂದಾದರೂ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಹೇಳಿದರು.
ನಾನು ಸಮಾಜದ ಎಲ್ಲ ವರ್ಗದ ಜನರ ಪ್ರೀತಿ, ವಿಶ್ವಾಸ ಗಳಿಸಿದ್ದೇನೆ. ಜಿಲ್ಲೆಯಲ್ಲಿ ಎಲ್ಲಿಯೇ ಪ್ರಚಾರಕ್ಕೆ ಹೋದರೂ ಜನತೆ ನನಗೆ ಹೆಚ್ಚಿನ ಪ್ರ್ರೀತಿ, ಒಲವು ತೋರಿಸುತ್ತಿದ್ದಾರೆ. ನನ್ಮ ಬಗ್ಗೆ ಯಾರು ಏನೇ ಅಪಪ್ರಚಾರ ಮಾಡಿದರೂ ಜನರು ಅದಕ್ಕೆ ಕಿವಿಗೊಡುವುದಿಲ್ಲ.ಈ ಚುನಾವಣೆಯಲ್ಲೂ ನನ್ನ ಗೆಲುವು ನಿಶ್ಚಿತ ಎಂದರು.
ನಾನು ಯಾವತ್ತೂ ಜಾತಿ ರಾಜಕಾರಣ ಮಾಡಿಲ್ಲ. ನನ್ನ ಸಮುದಾಯದಿಂದಲೇ ನಾನು ಅಂತರ ಕಾಯ್ದುಕೊಂಡಿದ್ದೇನೆ. ಎಲ್ಲ ಸಮುದಾಯದವರನ್ನು ನನ್ನ ಜೊತೆಗೆ ತೆಗೆದುಕೊಂಡು ಬಂದಿದ್ದೇನೆ. ಅವರನ್ನು ಹೆಗಲ ಮೇಲೆ ಕೂರಿಸಿಕೊಂಡಿದ್ದೇನೆ. ಮೇಲ್ವರ್ಗದವರಿಗೆ ನನ್ನಿಂದ ಯಾವತ್ತೂ ಅನ್ಯಾಯವಾಗಿಲ್ಲ. ಮೇಲ್ವರ್ಗದ ಹಲವು ನಾಯಕರ ಬೆಳವಣಿಗೆಗೆ ಸ್ವತ; ಸಹಕಾರ ನೀಡಿದ್ದೇನೆ. ಆದರೆ ಕೆಲವರು ವಿನಾಕಾರಣ ನನ್ನ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಜಿಗಜಿಣಗಿ ಉತ್ತರಿಸಿದರು.
ನಾನು ಮತಯಾಚಿಸಲು ಹಳ್ಳಿಗಳಿಗೆ ಹೋದಾಗ ನನ್ನ ಮುಂದೆ ಹಲವರು ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಬಗ್ಗೆ ಪ್ರಸ್ತಾಪಿಸಿ ಅವರು ಈ ಚುನಾವಣೆಯಲ್ಲಿ ಆಯ್ಕೆಯಾದರೆ ಡಿಎಸ್ಎಸ್ ನವರಿಂದ ಲಿಂಗಾಯತರಿಗೆ ಸಮಸ್ಯೆಯಾಗುತ್ತದೆ ಎಂದು ಹೇಳಿದ್ದು ನಿಜ. ರಾಜು ಆಲಗೂರ ಅವರು ಒಳ್ಳೆಯವರು. ಡಿಎಸ್ಎಸ್ ಬಗ್ಗೆ ನನಗೆ ಗೌರವವಿದೆ. ನಾನೂ ಅದೇ ಸಮುದಾಯದವನಿದ್ದೇನೆ. ರಾಜು ಆಲಗೂರ ಅವರ ಬಗ್ಗೆ ನಾನು ವೈಯಕ್ತಿಕವಾಗಿ ಆ ರೀತಿ ಹೇಳಿದ್ದಲ್ಲ. ಅದು ಜನರು ಆಡಿದ ಮಾತು
ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತ ಸ್ಪಷ್ಟಪಡಿಸಿದರು.
ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಹೆಚ್ಚು ಸ್ಥಾನಗಳನ್ನು ಗೆದ್ದು ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿಯವರು ಮೂರನೇ ಬಾರಿಯೂ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಅವರು ಹೇಳಿದರು.
ಪ್ರಧಾನಿ ಮೋದಿ ಒಬ್ಬ ದೈವೀಪುರುಷ. ಅವರು ಪ್ರಧಾನಿಯಾದ ಬಳಿಕ ದೇಶದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳಾಗಿವೆ. ಜಗತ್ತಿನ ಯಾವ ಶಕ್ತಿಯೂ ಮೋದಿಯವರು ಮತ್ತೆ ಪ್ರಧಾನಿಯಾಗುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಜಿಗಜಿಣಗಿ ನುಡಿದರು.
ಪತ್ರಿಕಾಗೋಷ್ಟಿಯಲ್ಲಿ ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಪ್ಪು ಪಟ್ಟಣಶೆಟ್ಟಿ, ವಿಧಾನ ಪರಿಷತ್ ಮಾಜಿ ಸದಸ್ಯ ಅರುಣ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ. ಬಿಜೆಪಿ ಮುಖಂಡ ವಿಜುಗೌಡ ಪಾಟೀಲ, ಬಿಜೆಪಿ ಮಾಧ್ಯಮ ಪ್ರಮುಖ ವಿಜಯ ಜೋಶಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

