ವಿಜಯಪುರ: ಲಿಂಗಾಯತ ಮುಖಂಡರಾದ ಎ.ಬಿ.ಪಾಟೀಲ, ಉಮೇಶ ಕತ್ತಿ, ಲಕ್ಷ್ಮಣ ಸವದಿ ಅವರು ತಮ್ಮ ಸ್ವ-ಸಾಮರ್ಥ್ಯದಿಂದ ಬೆಳೆದಿದ್ದಾರೆ ಹೊರತು, ಅವರಿಗೆ ರಾಜಕೀಯವಾಗಿ ರಮೇಶ ಜಿಗಜಿಣಗಿ ಅವರು ಬೆಳೆಸಿಲ್ಲ ಎಂದು ಕೆಪಿಸಿಸಿ ವಕ್ತಾರ ಸಂಗಮೇಶ ಬಬಲೇಶ್ವರ ತಿಳಿಸಿದ್ದಾರೆ.
ಭಾನುವಾರ ಪತ್ರಿಕಾಗೋಷ್ಠಿ ನಡೆಸಿದ ರಮೇಶ ಜಿಗಜಿಣಗಿ ಅವರಿಗೆ ಪತ್ರಿಕಾ ಹೇಳಿಕೆ ಮೂಲಕ ಉತ್ತರ ನೀಡಿದ ಅವರು, 1983 ರಿಂದ ಕಳೆದ 40 ವರ್ಷಗಳ ಅವಧಿಯಲ್ಲಿ ಜಿಗಜಿಣಗಿ ಅವರು ಶಾಸಕರು, ಸಚಿವರು, ಸಂಸದರು ಹಾಗೂ ಕೇಂದ್ರ ಮಂತ್ರಿಗಳಾಗಿ ಸತತ ಅಧಿಕಾರ ಅನುಭವಿಸುತ್ತಿದ್ದಾಗ ಒಬ್ಬನೇ ಒಬ್ಬ ಕಾರ್ಯಕರ್ತನನ್ನು, ಯಾವುದೇ ಸಮುದಾಯದವರನ್ನು ಬೆಳೆಸಿಲ್ಲ ಎಂದಿದ್ದಾರೆ.
ಕಳೆದ 30 ವರ್ಷಗಳಿಂದ ಆರು ಬಾರಿ ಸಂಸದರಾಗಿರುವ ಇವರು ರಾಜಕೀಯವಾಗಿ ನಾಯಕರನ್ನು ಬೆಳೆಸುವುದು ಇರಲಿ, ಒಬ್ಬರಿಗಾದರೂ ದೆಹಲಿಗೆ ಕರೆದುಕೊಂಡು ಹೋಗಿ, ತಮ್ಮ ಬಂಗಲೆಯನ್ನು ತೋರಿಸಿದ್ದಾರೆಯೇ? ಎಂದು ಸಂಗಮೇಶ ಬಬಲೇಶ್ವರ ಪ್ರಶ್ನಿಸಿದ್ದಾರೆ.
ದೆಹಲಿಯಂತೂ ದೂರದ ಮಾತು, ಭೂತನಾಳ ಕೆರೆ ಪಕ್ಕದಲ್ಲಿರುವ ಐಶಾರಾಮಿ ಬಂಗಲೆಗೆ ಜಿಲ್ಲೆಯಿಂದ ಹುಡುಕಿಕೊಂಡು ಬರುವ ಬಿಜೆಪಿ ಕಾರ್ಯಕರ್ತರನ್ನು ಒಳಗೆ ಬಿಟ್ಟುಕೊಂಡಿದ್ದಾರೆಯೇ? ಎಂದು ಪ್ರಶ್ನಿಸಿರುವ ಸಂಗಮೇಶ ಬಬಲೇಶ್ವರ, ಚುನಾವಣೆ ಬಂದಾಗ ನನ್ನಲ್ಲಿ ದುಡ್ಡು ಇಲ್ಲ ಎಂದು ನಾಟಕ ಮಾಡುವ ಇವರ ಆಸ್ತಿ ಎಷ್ಟು ಪಟ್ಟು ಹೆಚ್ಚಳವಾಗಿದೆ? ಎಂಬುದಕ್ಕೆ ಅಧಿಕೃತ ದಾಖಲೆ ಇದ್ದು, ಸೋಲಿನ ಭಯದಿಂದ ಏನೆನೋ ಬಡ-ಬಡಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.
ವಿಜಯಪುರದಿಂದ ಬೆಂಗಳೂರಿಗೆ ಒಂದು ರೈಲು ಆರಂಭಿಸದ ಇವರನ್ನು ಜನರೆ ಮನೆಗೆ ಕಳುಹಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ಅವರ ಗೆಲುವು ನಿಶ್ಚಿತವಾಗಿರುವುದನ್ನು ತಿಳಿದುಕೊಂಡು ಹತಾಶರಾಗಿ ಮತ್ತು ಸೋಲಿನ ಭಯದಿಂದ ಏನೆನೋ ಮಾತನಾಡುತ್ತಿದ್ದಾರೆ ಎಂದು ಮಖಂಡ ಸಂಗಮೇಶ ಬಬಲೇಶ್ವರ ಕಿಡಿಕಾರಿದ್ದಾರೆ.
Subscribe to Updates
Get the latest creative news from FooBar about art, design and business.
Related Posts
Add A Comment

