ಚಿಕ್ಕಗಲಗಲಿ & ಕಂಬಾಗಿ ಚುನಾವಣೆ ಪ್ರಚಾರ ಸಭೆಯಲ್ಲಿ ಸಚಿವ ಎಂ.ಬಿ.ಪಾಟೀಲ ಅಭಿಮತ
ವಿಜಯಪುರ: ಅಧಿಕಾರದಲ್ಲಿದ್ದಾಗ ನಾವು ಮಾಡುವ ಕೆಲಸಗಳನ್ನು ಜನ ಸ್ಮರಿಸುವಂತಿರಬೇಕು. ಆದರೆ, ಸಂಸದ ರಮೇಶ ಜಿಗಜಿಣಗಿ ಜಿಲ್ಲೆಯ ಜನ ನೆನಪಿಡುವ ಯಾವ ಕೆಲಸಗಳನ್ನೂ ಮಾಡಿಲ್ಲ ಎಂದು ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ಶನಿವಾರ ಬಬಲೇಶ್ವರ ತಾಲೂಕಿನ ಚಿಕ್ಕಗಲಗಲಿ ಮತ್ತು ಕಂಬಾಗಿಯಲ್ಲಿ ಪ್ರೊ. ರಾಜು ಆಲಗೂರ ಪರ ಮತಯಾಚಿಸಿ ಅವರು ಮಾತನಾಡಿದರು
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಕಲಬುರಗಿ ಸಂಸದರಾಗಿ ಹೈದರಾಬಾದ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ಕೊಡಿಸಿದರು. ಇಎಸ್ಐ ಆಸ್ಪತ್ರೆ ನಿರ್ಮಿಸಿದರು. ಪ್ರಕಾಶ ಹುಕ್ಕೇರಿ ಸಂಸದರಾಗಿ ಚಿಕ್ಕೋಡಿ ಮತಕ್ಷೇತ್ರದಲ್ಲಿ ಸವಳು- ಜವಳು ಬಗೆ ಹರಿಸುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಬಗೆಹರಿಸಿದರು. ಇದರಿಂದಾಗಿ ಜನ ಈಗಲೂ ಅವರನ್ನು ಸ್ಮರಿಸುತ್ತಾರೆ. ಇವರ ಅಭಿವೃದ್ಧಿ ಕಾರ್ಯಗಳನ್ನು ನೋಡಿಯಾದರೂ ಸಂಸದ ರಮೇಶ ಜಿಗಜಿಣಗಿ ವಿಜಯಪುರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಬೇಕಿತ್ತು. ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಸಂಸತ್ತಿಗೆ ಹೋಗಿ ಪ್ರಯೋಜನವಾದರೂ ಏನೂ? ಎಂದು ಅವರು ಪ್ರಶ್ನಿಸಿದರು.
ಕೆಲವು ರಾಜ್ಯಗಳ ಆರ್ಥಿಕತೆ ಪ್ರವಾಸೋದ್ಯಮ ಮೇಲೆ ಹೆಚ್ಚು ಅವಲಂಬಿತವಾಗಿದೆ. ವಿಜಯಪುರ ಜಿಲ್ಲೆಯಲ್ಲಿಯೂ ಪ್ರವಾಸೋದ್ಯಮ, ತೋಟಗಾರಿಕೆ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದರೂ ಸಂಸದರು ಸ್ಪಂದಿಸಿಲ್ಲ. ಕೆಲಸ ಮಾಡದವರು ಸಾಕು. ಕ್ರಿಯಾಶೀಲರಾದ ಹೊಸಬರಿಗೆ ಅವಕಾಶ ನೀಡೋಣ. ಪ್ರೊ. ರಾಜು ಆಲಗೂರ ಅವರನ್ನು ಮತಹಾಕಿ ಗೆಲ್ಲಿಸಿ. ಅಭಿವೃದ್ಧಿ ಮಾಡಿಸುವುದು ನನ್ನ ಗ್ಯಾರಂಟಿ ಎಂದು ಸಚಿವರು ತಿಳಿಸಿದರು.
ಪ್ರೊ. ರಾಜು ಆಲಗೂರ ಅವರು ವಿಜಯಪುರದ ಸರ್ವಾಂಗೀಣ ಅಭಿವೃದ್ಧಿಗೆ ಅವರದೇ ಆದ ವಿಜನ್ ಹೊಂದಿದ್ದು, ಈಗಾಗಲೇ 10 ಅಂಶಗಳ ಪ್ರಣಾಳಿಕೆ ಪ್ರಕಟಿಸಿದ್ದಾರೆ. ಸರಳ, ಸಜ್ಜನ, ಯಾರಿಗೂ ಕೆಟ್ಟದ್ದನ್ನು ಮಾಡದ, ಕ್ರಿಯಾಶೀಲ ವ್ಯಕ್ತಿಯಾಗಿರುವ ಅವರಿಗೆ ಮತ ಹಾಕಿ ಗೆಲ್ಲಿಸಬೇಕು ಎಂದು ಹೇಳಿದರು.
ಈ ವೇಳೆ ನಂದಿ ಸಹಕಾರಿ ಸಕ್ಕರೆ ಕಾರ್ಖಾನೆ ನಿರ್ದೇಶಕರ ಸಂಗನಗೌಡ ಪಾಟೀಲ ಚಿಕ್ಕಗಲಗಲಿ, ಕಾಂಗ್ರೆಸ್ ಮುಖಂಡರಾದ ಬಸನಗೌಡ ಪಾಟೀಲ ಹೊಸೂರ, ಎಸ್. ಎಂ. ಸೊನ್ನದ, ಎಂ. ಕೆ. ಶಿವಣ್ಣವರ, ಸಂಜು ಕಂಬಾಗಿ ಮಾತನಾಡಿ, ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಪ್ರೊ. ರಾಜು ಆಲಗೂರ ಅವರನ್ನು ಗೆಲ್ಲಿಸೋಣ. ಸಚಿವ ಎಂ. ಬಿ. ಪಾಟೀಲ ಅವರ ಕೈ ಬಲಪಡಿಸೋಣ ಎಂದು ಮಾಡಿದರು.
ಈ ಸಂದರ್ಭದಲ್ಲಿ ಎಲ್. ಎಸ್. ನಿಡೋಣಿ, ಲಕ್ಷ್ಮಣ ಚಿಗದಾನಿ, ಪಾಂಡುಗೌಡ ಬಿರಾದಾರ, ವಿ. ಎಚ್. ಪಾಟೀಲ, ರಮೇಶ ಯರಗಟ್ಟಿ, ಸಂಜುಗೌಡ ಪಾಟೀಲ, ಎಂ. ಬಿ. ಮದರಖಂಡಿ, ಕೆ. ಎಂ. ಮಠಪತಿ, ರಂಗನಗೌಡ ಕ. ಬಿರಾದಾರ, ಅಪ್ಪಾಸಾಹೇಬಗೌಡ ಪಾಟೀಲ, ಮಲ್ಲಿಕಾರ್ಜುನ ಅಂಗಡಿ, ಮಹಾಳಿಂಗರಾಯ ಮಹಾರಾಜರು ಮುಂತಾದವರು ಉಪಸ್ಥಿತರಿದ್ದರು.

