ಕಾಂಗ್ರೆಸ್‌ಗೆ ಬೆಂಬಲ ಘೋಷಿಸಿದ ಪಂಚಮಸಾಲಿ ಸಮುದಾಯ | ಬೃಹತ್ ಚಿಂತನಾ ಸಮಾವೇಶ
ಇಂಚಗೇರಿ: ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಆಗಿರುವ ಅನ್ಯಾಯ ಸರಿದೂಗಿಸಲು ನಾವು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದು ಅಗತ್ಯವಾಗಿದೆ ಎಂದು ಸಿಂದಗಿ ಶಾಸಕ ಅಶೋಕ ಮನಗೂಳಿ ಹೇಳಿದರು.
ಇಲ್ಲಿ ಶನಿವಾರ ರಾತ್ರಿ ನಡೆದ ಲಿಂಗಾಯತ ಪಂಚಮಸಾಲಿ ಸಮುದಾಯದ ಬೃಹತ್ ಸಮಾವೇಶದಲ್ಲಿ ಮಾತನಾಡಿ, ಕಳೆದ ಕೆಲ ವರ್ಷಗಳಿಂದ ನಮ್ಮ ಸಮಾಜ ತುಳಿತಕ್ಕೆ ಒಳಗಾಗಿದೆ. ನನಗೆ ಟಿಕೆಟ್ ನೀಡಿ ಶಾಸಕನಾಗಿ ಮಾಡಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ಪಕ್ಷದವರು ಅಧಿಕಾರದಲ್ಲಿದ್ದಾಗ ಜಿಲ್ಲೆಗೆ ಮಂತ್ರಿ ಸ್ಥಾನ ನೀಡಲಿಲ್ಲ. ನಮ್ಮನ್ನು ಗೌರವಿಸಿದ್ದು, ಆತ್ಮಾಭಿಮಾನ ಹೆಚ್ಚಿಸಿದ್ದು ಕಾಂಗ್ರೆಸ್ ಪಕ್ಷ. ಹಾಗಾಗಿ ವಿದ್ಯಾವಂತ, ಸಜ್ಜನರಾಗಿರುವ ಅಭ್ಯರ್ಥಿ ಆಲಗೂರರಿಗೆ ಮತ ನೀಡಬೇಕಾಗಿರುವುದು ನಮ್ಮ ಕರ್ತವ್ಯ. ಅವರಿಂದ ಎಲ್ಲ ಸಮಾಜದ ಜನರಿಗೆ ಒಳಿತಾಗಲಿದೆ ಎಂದು ಹೇಳಿದರು.
ಬಿಜೆಪಿಯವರಿಗೆ ಸುಳ್ಳೇ ಆಧಾರ. ಜಿಗಜಿಣಗಿಯವರು ಸುಳ್ಳು ಆಪಾದನೆ ಮಾಡುವುದರಲ್ಲಿ ನಿಸ್ಸೀಮರು. ಮಾಡಿರುವ ಕೆಲಸ ಹೇಳದೇ ವಾಮ ಮಾರ್ಗದಲ್ಲಿ ಚುನಾವಣೆ ಎದುರಿಸುತ್ತ ಬಂದಿದ್ದಾರೆ. ಹಾಗಾಗಿ ಸಮಾಜ ಒಟ್ಟಾಗಿ ಈ ಸಲ ಕಾಂಗ್ರೆಸ್‌ಗೆ ಬೆಂಬಲ ನೀಡಿ, ಜಿಲ್ಲೆಯ ಹಾಗೂ ಸಮುದಾಯದ ಕಾಳಜಿ ಮೆರೆಯಬೇಕು. ಇಲ್ಲಿ ನೆರೆದಿರುವ ಪಂಚಮಸಾಲಿ ಜನರ ಉತ್ಸಾಹ ನೋಡಿದರೆ ರಾಜು ಆಲಗೂರರು ಎರಡು ಲಕ್ಷ ಮತಗಳ ಅಂತರದಿಂದ ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಸಮುದಾಯದ ಪ್ರಮುಖ ಮುಖಂಡ ಎಂ.ಆರ್.ಪಾಟೀಲ ಪ್ರಾಸ್ತಾವಿಕ ಮಾತನಾಡಿ, ಬಹುಸಂಖ್ಯಾತ ಪಂಚಮಸಾಲಿ ಬಂಧುಗಳ ಚಿಂತನೆ ಮೇರೆಗೆ ಈ ಸಭೆ ಆಯೋಜಿಸಲಾಗಿದೆ. ಬಿಜೆಪಿ ಅಭ್ಯರ್ಥಿಗೆ ಉತ್ತರ ಕೊಡಲು ಪಂಚಮಸಾಲಿ ಸಮುದಾಯ ನಿರ್ಧರಿಸಿ ಒಗ್ಗಟ್ಟು ಪ್ರದರ್ಶಿಸಿದೆ. ಇಂಚಗೇರಿಯ ಪವಿತ್ರ ಜಾಗದಲ್ಲಿ ನಾವು ಶ್ರೇಷ್ಠ ನಿರ್ಣಯ ಕೈಗೊಳ್ಳುತ್ತಿದ್ದೇವೆ. ಕಾಂಗ್ರೆಸ್ ಅಭ್ಯರ್ಥಿಗೆ ನಾವು ಸಂಪೂರ್ಣ ಬೆಂಬಲ ಘೋಷಿಸುತ್ತಿದ್ದೇವೆ ಎಂದರು.
ನಮ್ಮ ಸಮಾಜ ಎಲ್ಲರ ಜೊತೆ ಅವಿನಾಭಾವ ಸಂಬಂಧ ಹೊಂದಿದೆ. ನಾವು ಸರ್ವ ಜನಾಂಗದ ಹಿತ ಬಯಸಿದವರು. ಹಾಗಾಗಿ ಅಭಿವೃದ್ಧಿ, ಸರ್ವರ ಹಿತ ಬಯಸುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ಸೂಚಿಸುತ್ತಿದ್ದೇವೆ. ಆಲಗೂರರು ನಮ್ಮ ೨ಎ ಮೀಸಲಾತಿ ಹೋರಾಟದಲ್ಲಿ ತೊಡಗಿದ್ದರು. ಪಂಚಮಸಾಲಿ ಶ್ರೀಗಳನ್ನು ಕೂಡ ಭೇಟಿಯಾಗಿ ಅವರಿಂದ ಆಶೀರ್ವಾದ ಪಡೆದಿದ್ದಾರೆ. ಮೂಕನಾಗಿರುವ ಬಿಜೆಪಿ ಸಂಸದನಿಗಿಂತ ಕಾಂಗ್ರೆಸ್ ಅಭ್ಯರ್ಥಿ ಮೇಲು ಎಂದರು.
ಮುಖಂಡ ಸಂಗಮೇಶ ಬಬಲೇಶ್ವರ ಮಾತನಾಡಿ, ಜಿಗಜಿಣಗಿಯವರಿಂದ ಜನ ಬೇಸತ್ತಿದ್ದಾರೆ. ಇವರ ಹಠಾವೋ ಅಭಿಯಾನ ಇಲ್ಲಿಂದ ಶುರುವಾಗಿದೆ. ಪಂಚಮಸಾಲಿಗಳನ್ನು ಒಡೆದಾಳಿ ನಮ್ಮನ್ನು ತುಳಿದಿದ್ದಾರೆ. ನಮ್ಮ ಅಸ್ಮಿತೆಯನ್ನು ಅವರು ಕೆಣಕಿದ್ದಾರೆ. ಈ ಸಮುದಾಯವನ್ನು ಬಳಸಿ ಬಿಸಾಕಿದ್ದಾರೆ. ಬಸವ ತತ್ವದಲ್ಲಿ ನಂಬಿಕೆ ಹೊಂದಿರುವ ನಾವು ಆತ್ಮ ಗೌರವಕ್ಕಾಗಿ ಆಲಗೂರರಿಗೆ ಬೆಂಬಲ ಸೂಚಿಸಲೇಬೇಕಾಗಿದೆ. ಜಿಲ್ಲೆಗಾಗಿ ಒಂದು ಸಣ್ಣ ಕೆಲಸವೂ ಮಾಡದ ಜಿಗಜಿಣಗಿಯವರನ್ನು ತಿರಸ್ಕರಿಸಬೇಕಿದೆ ಎಂದರು.
ಮಾತೆತ್ತಿದರೆ ಮೋದಿಗೆ ನೋಡಿ ಓಟು ಹಾಕಿರಿ ಎನ್ನುವ ಬಿಜೆಪಿ ಅಭ್ಯರ್ಥಿಗೆ ಯಾವ ನೈತಿಕತೆಯೂ ಇಲ್ಲ. ಆಲಗೂರರು ಚುನಾವಣೆಗೆ ಹೋಗುವ ಮುನ್ನ ಹತ್ತಂಶದ ಕಾರ್ಯಕ್ರಮ ಹಾಕಿಕೊಂಡು ತಾವು ಅಭಿವೃದ್ಧಿ ಪರ ಎನ್ನುವ ಕನಸು ಬಿತ್ತಿದ್ದಾರೆ. ಪ್ರವಾಸೋದ್ಯಮ, ಶಿಕ್ಷಣ, ರೈಲು, ವಿಮಾನಯಾನ, ಆಲಮಟ್ಟಿ ಅಣೆಕಟ್ಟು ಎತ್ತರ ಸೇರಿ ಅನೇಕ ಯೋಜನೆಗಳನ್ನು ಇವರು ಹಾಕಿಕೊಂಡಿದ್ದಾರೆ. ಒಂದಿನವೂ ಬಾಯಿ ತೆಗೆದು ಮಾತಾಡದ, ಉದಾಸೀನ ಹೊಂದಿರುವ ಜಿಗಜಿಣಗಿಯಂತವರು ನಮಗೆ ಯಾಕೆ ಬೇಕು. ಅವರನ್ನು ಯಾವ ಅಲೆಯೂ ಈ ಸಲ ಉಳಿಸಲ್ಲ ಎಂದರು.
ಲಿಂಗಾಯತ ಪಂಚಮಸಾಲಿ ಜನ ತಾಯಿ ಹೃದಯದವರು, ಜಾತ್ಯಾತೀತ ಗುಣವಿರುವ ನಾವು ಪ್ರಗತಿಪರ ವಿಚಾರವಿಟ್ಟುಕೊಂಡು ರಾಜಕಾರಣ ಮಾಡಿದವರು. ನಮ್ಮ ಹಿತ ಕಾಯುವ ಪಕ್ಷದ ಜೊತೆ ನಾವು ಹೋಗಬೇಕು ಎಂದು ಸೂಚ್ಯವಾಗಿ ಹೇಳಿದರು.
ಕಾಂಗ್ರೆಸ್ ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿಯವರು ರಾಜಕಾರಣಕ್ಕಾಗಿ ಸಮುದಾಯವನ್ನು ಬಳಸಿಕೊಂಡಿದ್ದಾರೆ. ಹಲವು ಸಲ ಅವಕಾಶ ನೀಡಿದರೂ ಪ್ರಯೋಜನವಾಗದ ಅವರಿಂದ ಏನು ನಿರೀಕ್ಷಿಸಲು ಸಾಧ್ಯ ಎನ್ನುವುದು ತಾವು ಆತ್ಮಾವಲೋಕನ ಮಾಡಿಕೊಳ್ಳಬೇಕು. ಒಕ್ಕಲುತನವೇ ಆಧಾರವಾಗಿರುವ ಪಂಚಮಸಾಲಿ ಜನರ ಹಿತವನ್ನು ಅವರು ಕಾಪಾಡಲಿಲ್ಲ. ರೈತರಿಗೆ ಯೋಗ್ಯ ದರ, ಪರಿಹಾರ ನೀಡಲಿಲ್ಲ. ಜಿಲ್ಲೆಯ ತೋಟಗಾರಿಕೆಗೆ ಯಾವೊಂದು ಸಹಾಯ ಮಾಡಲಿಲ್ಲ ಎಂದರು.
ನೀವು ನನ್ನ ಮೇಲೆ ವಿಶ್ವಾಸವಿಟ್ಟರೆ ಅದಕ್ಕೆ ಧಕ್ಕೆಯಾಗದೇ ಪ್ರಾಮಾಣಿಕ ಸೇವಕನಾಗಿ ಇರುವೆ. ನಿಮ್ಮ ಭಾವನೆಗಳಿಗೆ ಚ್ಯುತಿ ಬಾರದಂತೆ ನಡೆದುಕೊಳ್ಳುವೆ ಎಂದು ಹೇಳಿದರು.
ಶಾಸಕ ವಿಠ್ಠಲ ಕಟಕದೊಂಡ ಮಾತನಾಡಿ, ವೀರ ರಾಣಿ ಕಿತ್ತೂರು ಚೆನ್ನಮ್ಮರ ವಂಶಸ್ಥರಾದ ನಿಮ್ಮಿಂದ ಈ ಚುನಾವಣೆಯಲ್ಲಿ ಬದಲಾವಣೆ ಸಾಧ್ಯವಿದೆ. ನಿಮ್ಮ ಸಮುದಾಯಕ್ಕೆ ಬೇಕಿರುವ ಮೀಸಲಾತಿಗೆ ನಾವು ಬದ್ಧರಾಗಿದ್ದೇವೆ. ನಿಮ್ಮ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ವಿದ್ಯಾರಾಣಿ ತುಂಗಳ ಮಾತನಾಡಿ, ಚನ್ನಮ್ಮನ ವಂಶಸ್ಥರಾದ ನಾವು ಜಿಲ್ಲೆಯ ರಾಜಕಾರಣದ ದಿಕ್ಕನ್ನು ಬದಲಿಸುವ ಶಕ್ತಿ ಉಳ್ಳವರಾಗಿದ್ದೇವೆ. ಈ ಲೋಕಸಭೆ ಚುನಾವಣೆಯಲ್ಲಿ ನಾವು ಯೋಗ್ಯ ವ್ಯಕ್ತಿಯಾದ ಆಲಗೂರರಿಗೆ ಮತ ನೀಡಬೇಕು. ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಮತದಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.
ಮುಖಂಡರಾದ ಈರಣ್ಣ ಪಟ್ಟಣಶೆಟ್ಟಿ, ಆರ್.ಜಿ. ಯರನಾಳ, ಚಂದ್ರಶೇಖರಗೌಡ ಪಾಟೀಲ, ಶ್ರೀಮಂತ್ ಇಂಡಿ ಹಂಗರಗಿ, ಮಹಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ದಾನಮ್ಮ ಗೌಡತಿ ಪಾಟೀಲ, ತಮ್ಮನಗೌಡ ಪಾಟೀಲ್, ಚೆನ್ನಪ್ಪ ಕೊಪ್ಪದ, ಅಶೋಕಗೌಡ ಪಾಟೀಲ, ಅಮರೇಶ ಗೂಳಿ, ಬಿ.ಆರ್.ಕುರಡಿ, ರಾಜುಗೌಡ ಪೋಲಿಸ್ ಪಾಟೀಲ, ಹೊನಮಲ್ಲ ಸಾರವಾಡ, ಅಶೋಕ ಕೊಳಾರಿ, ಶೇಖರಗೌಡ ಪಾಟೀಲ ಮನಗೂಳಿ, ವಿ.ಎಸ್.ಪಾಟೀಲ ಬಬಲೇಶ್ವರ ಅನೇಕರಿದ್ದರು.
ಕಾಂತುಗೌಡ ಸುರಗಿಹಳ್ಳಿ, ವಿಠ್ಠಲ ವಡಗಾಂವ ನಿರೂಪಿಸಿದರು.
ಇಂಡಿ, ಸಿಂದಗಿ, ಮುದ್ದೇಬಿಹಾಳ, ಚಡಚಣ, ಬಸವನ ಬಾಗೇವಾಡಿ ಸೇರಿ ಎಲ್ಲೆಡೆಯಿಂದ ಜನ ಬಂದಿದ್ದರು.

ಪಂಚಮಸಾಲಿಗಳು ತಾಯಿ ಹೃದಯದವರು. ನಾವು ಎಲ್ಲರೊಡಗೂಡಿ ಬಾಳುವ ರೈತಾಪಿ ಜನ. ಒಕ್ಕಲುತನ ನೆಚ್ಚಿಕೊಂಡಿರುವ ನಾವು, ನಮ್ಮ ನೆಮ್ಮದಿಯ ಬದುಕಿಗಾಗಿ ಕಾಂಗ್ರೆಸ್ ಬೆಂಬಲಿಸಬೇಕಿದೆ. ಬಿಜೆಪಿ ಯಾವತ್ತೂ ರೈತರನ್ನು ನಿಕೃಷ್ಟವಾಗಿ ನೋಡಿದೆ.”
– ಸಂಗಮೇಶ ಬಬಲೇಶ್ವರ
ಲಿಂಗಾಯತ ಪಂಚಮಸಾಲಿ ಮುಖಂಡರು

