ಶ್ರೀ ಸಿದ್ಧೇಶ್ವರ ಮೆಡಿಕಲ್ ೨೪/೭ ಎರಡು ವರ್ಷ ಪೂರೈಸಿದ ಸಾರ್ಥಕ ಸಂಭ್ರಮ
ವಿಜಯಪುರ: ವ್ಯಾಪಾರದಲ್ಲಿ ನೈತಿಕತೆ ಇದ್ದಲ್ಲಿ ಗ್ರಾಹಕರ ಹೃದಯವನ್ನು ಗೆಲ್ಲಬಹುದು ಎನ್ನುವುದಕ್ಕೆ ಈ ಎರಡು ವರ್ಷಗಳಲ್ಲಿ ನಗರದ ಶ್ರೀ ಸಿದ್ಧೇಶ್ವರ ಮೆಡಿಕಲ್ ೨೪/೭ ನ ಕಾರ್ಯವೈಖರಿ ಒಂದು ಅತ್ಯುತ್ತಮವಾದ ಉದಾಹರಣೆಯಾಗಿದೆ.
ನಗರ ಶಾಸಕ ಬಸನಗೌಡ ರಾ ಪಾಟೀಲ ಯತ್ನಾಳರ ಅಪೇಕ್ಷೆಯಂತೆ ಸ್ಥಾಪನೆಯಾದ ಈ ಮಳಿಗೆ ಇಂದು ಜನಪರ ಮೆಡಿಕಲ್ ಆಗಿ ಗುರುತಿಸಿಕೊಂಡಿದ್ದು ಇಡೀ ತಂಡದ ದಕ್ಷ ಕಾರ್ಯಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತ ಬೆಂಗಳೂರ ನ ನಿರ್ದೇಶಕ ರಾಮನಗೌಡ ಬ. ಪಾಟೀಲ್ ಯತ್ನಾಳ ಅವರು ಹೇಳಿದರು.
ನಗರದ ಸಿದ್ಧೇಶ್ವರ ದೇವಸ್ಥಾನದ ಹತ್ತಿರ ಇರುವ ಶ್ರೀ ಸಿದ್ಧೇಶ್ವರ ಮೆಡಿಕಲ್ ೨೪/೭ ಪ್ರಾರಂಭಗೊಂಡು ಎರಡು ವರ್ಷಗಳನ್ನು ಪೂರೈಸಿದ್ದರ ಪ್ರಯುಕ್ತವಾಗಿ ಆಯೋಜಿಸಲಾಗಿದ್ದ ಸಾರ್ಥಕ ಸಂಭ್ರಮ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು; ಯಾವುದೇ ಕೆಲಸವಾಗಲಿ ಅದನ್ನು ನಿಷ್ಠೆಯಿಂದ ಮಾಡಬೇಕು. ವ್ಯಾಪಾರದಲ್ಲಿ ಸಹ ಪಾರದರ್ಶಕತೆಯ ಜೊತೆಗೆ ನೈತಿಕತೆಯನ್ನು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಶೀಘ್ರದಲ್ಲಿ ಗ್ರಾಹಕರ ಹೃದಯವನ್ನು ಗೆಲ್ಲುವುದಕ್ಕೆ ಸಾಧ್ಯವಾಗುತ್ತದೆ. ಆ ತತ್ವವನ್ನು ಅಕ್ಷರಶಃ ಪಾಲಿಸುತ್ತ ಬಂದಿರುವ ಶ್ರೀ ಸಿದ್ಧೇಶ್ವರ ಮೆಡಿಕಲ್ ಪ್ರಾರಂಭಗೊAಡ ಎರಡು ವರ್ಷಗಳ ಅವಧಿಯಲ್ಲಿ ಸರಿ ಸುಮಾರು ಮೂರು ಲಕ್ಷ ಗ್ರಾಹಕರ ಸಂತೃಪ್ತಿಗೆ ಕಾರಣವಾಗಿದೆ. ಒಂದು ರೂಪಾಯಿಯ ಮಾತ್ರೆಯಾದರೂ ಸಹ ಅದನ್ನು ಮಧ್ಯರಾತ್ರಿ ಮನೆಬಾಗಿಲಿಗೆ ತಲುಪಿಸಿ ಸಾರ್ಥಕತೆಯನ್ನು ಪಡೆದುಕೊಂಡಿದೆ. ಅದರಲ್ಲೂ ಕೆಲವು ಜನ ಗ್ರಾಹಕರು ಅತ್ಯಂತ ಕಷ್ಟದ ಸಂದರ್ಭದಲ್ಲಿ ಮನೆಬಾಗಿಲಿಗೆ ಮಾತ್ರೆಗಳನ್ನು ಔಷಧಿಗಳನ್ನು ತಲುಪಸಿದ ಸಿದ್ಧೇಶ್ವರ ಮೆಡಿಕಲ್ ನಿಜಕ್ಕೂ ಜನಪರವಾದ ಕಾರ್ಯದಲ್ಲಿ ಯಶಸ್ವಿಯಾಗಿದೆ ಎಂದು ಹೇಳುವಾಗ ನಿಜಕ್ಕೂ ಹೆಮ್ಮೆ ಎನಿಸುತ್ತದೆ ಮಾತ್ರವಲ್ಲ ಸೇವೆ ಮಾಡಿದ್ದು ಸಾರ್ಥಕವಾಯಿತು ಎನ್ನುವ ಭಾವ ಮೂಡುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಶರಣ ಮಳಖೇಡ್ಕರ್ ಮಾತನಾಡಿ; ಗ್ರಾಹಕರಿಗೆ ನೆರವಾಗುವ ದೃಷ್ಠಿಯಿಂದ ಅತ್ಯಂತ ಹೆಚ್ಚಿನ ರಿಯಾಯಿತಿ ನೀಡುತ್ತ ಬಂದಿರುವ ಮೆಡಿಕಲ್ ತುರ್ತು ಸಂದರ್ಭದಲ್ಲಿ ಬಳಕೆಯಾಗುವ ನಲವತ್ತೂ ಸಾವಿರ ರೂಪಾಯಿಗಳ ಮೊತ್ತಕ್ಕೆ ಮಾರಾಟವಾಗುವ ಇಂಜೆಕ್ಷನ್‌ನನ್ನು ಕೇವಲ ಎಂಟು ಸಾವಿರಕ್ಕೆ ವಿತರಿಸಿದೆ ಎನ್ನುವುದನ್ನು ಗಮನಿಸಿದರೆ ಇಲ್ಲಿ ಲಾಭಕ್ಕಿಂತ ಸೇವೆ ಮುಖ್ಯವಾಗಿದೆ ಎನ್ನುವುದು ಸ್ಪಷ್ಟವಾಗುತ್ತದೆ. ಶುಗರ್‌ನಿಂದ ಸಂಕಷ್ಟಕ್ಕೀಡಾದ ವ್ಯಕ್ತಿಯ ಮನೆಬಾಗಿಲಿಗೆ ತೆರಳಿ ಮಾತ್ರೆಗಳನ್ನು ನೀಡಿದ್ದಲ್ಲದೇ ತುರ್ತು ಚಿಕಿತ್ಸೆಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವರೆಗೂ ನಮ್ಮ ಸಿಬ್ಬಂಧಿಗಳು ಕಾರ್ಯ ಪ್ರವೃತ್ತರಾಗಿದ್ದು ಸಿಬ್ಬಂಧಿಗಳಲ್ಲಿನ ಮಾನವೀಯತೆಗೆ ಸಾಕ್ಷಿ ಒದಗಿಸುತ್ತದೆ. ಶತಮಾನದ ಇತಿಹಾಸವುಳ್ಳ ಸಿದ್ಧೇಶ್ವರ ಸಂಸ್ಥೆ ಹಾಗೂ ರಾಜ್ಯದ ನಂಬರ್ ಒನ್ ಸೌಹಾರ್ದವಾಗಿರುವ ಸಿದ್ಧಸಿರಿ ಸಹಯೋಗದಲ್ಲಿ ಸ್ಥಾಪನೆಯಾದ ಸಿದ್ಧೇಶ್ವರ ಲೋಕಕಲ್ಯಾಣ ಚಾರಿಟೇಬಲ್ ಟ್ರಸ್ಟ್ನ ಅಡಿಯಲ್ಲಿ ನಿರ್ಮಾಣವಾಗಿರುವ ಶ್ರೀ ಸಿದ್ಧೇಶ್ವರ ೨೪/೭ ಮೆಡಿಕಲ್ ಇಂದು ವಿಜಯಪುರ ಜಿಲ್ಲೆಯಾಧ್ಯಂತ ತನ್ನ ಸೇವಾ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಸಾಗಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲ ಭಾಗಗಳಲ್ಲಿಯೂ ಗ್ರಾಹಕ ಸ್ನೇಹಿ ಮೆಡಿಕಲ್ ಪ್ರಾರಂಭಿಸುವ ಕನಸನ್ನು ಸಂಸ್ಥೆ ಹೊಂದಿದ್ದು ಇದಕ್ಕೆ ಗ್ರಾಹಕರ ಬೆಂಬಲ ಕೂಡ ಲಭಿಸುತ್ತಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸಿದ್ಧೇಶ್ವರ ಮೆಡಿಕಲ್ ಹಾಗೂ ಜೆಎಸ್‌ಎಸ್ ಆಸ್ಪತ್ರೆಯ ಸರ್ವ ಸಿಬ್ಬಂಧಿವರ್ಗ ಉಪಸ್ಥಿತರಿದ್ದರು.


