ಬಸವನಬಾಗೇವಾಡಿ: ಈ ಸಲ ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪರ ಅಲೆ ಇದೆ. ಮತದಾರರು ನಮ್ಮ ಪರ ಇದ್ದಾರೆ. ನಮ್ಮ ಪಕ್ಷದ ಪಂಚ ಗ್ಯಾರಂಟಿ ಯೋಜನೆಗಳು ನಮ್ಮ ಕೈಹಿಡಿಯಲಿವೆ. ನಮ್ಮ ಪಕ್ಷದ ಅಭ್ಯರ್ಥಿ ಪ್ರೊ.ರಾಜು ಆಲಗೂರ ಅವರು ಅಂದಾಜು ೧ ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಈ ಸಲ ಲೋಕಸಭೆ ಪ್ರವೇಶಿಸಿ ಜನಪರ ಕೆಲಸ ಮಾಡುವ ವಿಶ್ವಾಸ ಇದೆ ಎಂದು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಸುರೇಶ ಹಾರಿವಾಳ ಹೇಳಿದರು.
ಪಟ್ಟಣದ ವಿಜಯಪುರ ರಸ್ತೆಯಲ್ಲಿರುವ ಲೋಕಸಭಾ ಚುನಾವಣಾ ಕಾರ್ಯಾಲಯದ ಮುಂಭಾಗ ಶನಿವಾರ ಬೈಕ್ ರ್ಯಾಲಿಗೆ ಚಾಲನೆ ನೀಡಿದ ನಂತರ ಮಾತನಾಡಿದ ಅವರು, ರಾಜು ಆಲಗೂರ ಅವರು ಎರಡು ಸಲ ಶಾಸಕರಾಗಿ, ಪಕ್ಷದ ಜಿಲ್ಲಾಧ್ಯಕ್ಷರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಇವರು ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದಾರೆ. ಇವರು ಲೋಕಸಭೆಯಲ್ಲಿ ಜಿಲ್ಲೆಯ ಜನತೆಯ ಪರವಾಗಿ ಧ್ವನಿಯಾಗಿ, ಜನಪರ ಸಮಸ್ಯೆಗಳ ಪರ ಮಾತನಾಡುವ ವ್ಯಕ್ತಿಯಾಗಿದ್ದಾರೆ. ಇವರನ್ನು ಮತದಾರರು ಆಯ್ಕೆ ಮಾಡಿದರೆ ಖಂಡಿತ ಜಿಲ್ಲೆಯ ಅಭಿವೃದ್ಧಿಯಾಗುವದರಲ್ಲಿ ಸಂದೇಹವಿಲ್ಲ ಎಂದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಬ್ಲಾಕ್ ಪ್ರಧಾನ ಕಾರ್ಯದರ್ಶಿ ರವಿ ರಾಠೋಡ, ಮುಖಂಡರಾದ ಪ್ರೇಮಕುಮಾರ ಮ್ಯಾಗೇರಿ, ಶಂಕರಗೌಡ ಬಿರಾದಾರ, ಜಟ್ಟಿಂಗರಾಯ ಮಾಲಗಾರ, ಉದಯ ಮಾಂಗಲೇಕರ, ಅಜೀಜ ಬಾಗವಾನ, ಸಂಗಯ್ಯ ಕಾಳಹಸ್ತೇಶ್ವರಮಠ, ರಮಜಾನ ಹೆಬ್ಬಾಳ, ಮುರುಗೇಶ ನಾಯ್ಕೋಡಿ, ಕಾಶೀನಾಥ ರಾಠೋಡ ಇತರರು ಇದ್ದರು. ಬೈಕ್ ರ್ಯಾಲಿ ನಂದಿ ಬಡಾವಣೆ, ಗಣೇಶ ನಗರ, ಇಕ್ಬಾಲ್ ನಗರ, ಬಸವ ನಗರ, ನವನಗರ ಸೇರಿದಂತೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ರಾಜು ಆಲಗೂರ ಪರ ಘೋಷಣೆ ಕೂಗಿ ಮತಯಾಚಿಸಿದರು.
Subscribe to Updates
Get the latest creative news from FooBar about art, design and business.
Related Posts
Add A Comment

