ಲೋಕಸಭಾ ಚುನಾವಣೆ: ಸ್ವೀಪ್ ಸಮಿತಿಯಿಂದ ವಿನೂತನ ಜಾಗೃತಿ ಕಾರ್ಯಕ್ರಮ
ವಿಜಯಪುರ: ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಮತದಾರರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶನಿವಾರ ಸಂಜೆ ನಗರದ ಸೆಟ್ ಲೈಟ್ ಬಸ್ ನಿಲ್ಲಾಣ ( ಹೊಸ ಬಸ್ ನಿಲ್ದಾಣ)ದಿಂದ ಹಮ್ಮಿಕೊಂಡ ಐತಿಹಾಸಿಕ ಪಾರಂಪರಿಕ ಟಾಂಗಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಸಾರ್ವತ್ರಿಕ ಲೋಕಸಭಾ ಚುನಾವಣೆ ೨೦೨೪ ರ ಮತದಾನ ಮಹತ್ವ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತ್, ಜಿಲ್ಲಾ ಸ್ವೀಪ್ ಸಮಿತಿ ವತಿಯಿಂದ ಹಮ್ಮಿಕೊಂಡ ಜಾಗೃತಿಯ ಟಾಂಗಾ ಅಭಿಯಾನವನ್ನು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರಾದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ವಿಶೇಷವಾಗಿ ಅಲಂಕೃತಗೊಂಡ ಪಾರಂಪರಿಕ ಟಾಂಗಾದಲ್ಲಿ ಕುಳಿತು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಮತದಾನ ಜಾಗೃತಿ ವಿವಿಧ ಘೋಷಣೆಗಳನ್ನೊಂಡ ಅಲಂಕೃತವಾಗಿರುವ ಟಾಂಗಾದಲ್ಲಿ ಸ್ವತ: ರಿಷಿ ಆನಂದ ಸೇರಿದಂತೆ ವಿವಿಧ ಇಲಾಖೆಯು ಅಧಿಕಾರಿಗಳು, ರಾಯಭಾರಿಗಳಾದ ಸಹನಾ ಕೂಡಿಗನೂರ, ಸಾಕ್ಷಿ ಹಿರೇಮಠ ಸೇರಿದಂತೆ ಇತರ ಅಧಿಕಾರಿಗಳು, ಸ್ವೀಪ್ ಸಮಿತಿ ಸದಸ್ಯರು ಕುಳಿತು ನಗರದಾದ್ಯಂತ ಸಂಚರಿಸುವ ಮೂಲಕ ಮತದಾನ ಜಾಗೃತಿಯೊಂದಿಗೆ ಮತದಾರರಲ್ಲಿ ಉತ್ಸಾಹ ಹುಮ್ಮಸ್ಸು ಮೂಡಿಸಿ,ಪ್ರಜಾಪ್ರಭುತ್ವದ ಹಬ್ಬದಲ್ಲಿ ಭಾಗವಹಿಸಿ ಮತದಾನ ಮಾಡುವಂತೆ ಪ್ರೇರೇಪಿಸಿದರು. ಜಾಥಾದ್ದುದ್ದಕ್ಕೂ ಡೊಳ್ಳು ಬಾರಿಸುವುದು ಆಕರ್ಷಣೀಯವಾಗಿತ್ತು.
೪೦ ಟಾಂಗಾಗಳನ್ನೊಳಗೊಂಡ ಟಾಂಗಾ ಜಾಥಾವು ನಗರದ ಸೆಟ್ ಲೈಟ್ ಬಸ್ ನಿಲ್ಲಾಣದಲ್ಲಿ ( ಹೊಸ ಬಸ್ ನಿಲ್ದಾಣ)ದಿಂದ ಆರಂಭಗೊಂಡು, ವಿಜಯಪುರದ ಗ್ಯಾಂಗ್ ಬಾವಡಿ, ಮಹಾತ್ಮಾ ಗಾಂಧಿ ಶಾಲೆ, ಮಾನಸ ರೆಸಿಡೆನ್ಸಿ, ದರ್ಗಾ ಕ್ರಾಸ್, ಚಾಲುಕ್ಯ ನಗರ, ಉಮದಿ ಸೂಪರ್ ಬಜಾರ್ ಎದುರಿನ ರಸ್ತೆ, ಮಹೇಶ್ವರಿ ಭವನ ರಸ್ತೆ, ರೀಲೈನ್ಸ್ ಮಾಲ್ ರಸ್ತೆ, ಮಾರವಾಡಿ ಕಾಲೋನಿ, ಸಿದ್ದೇಶ್ವರ ದೇವಸ್ಥಾನ, ಗಾಂಧಿ ವೃತ್ತ ಮಾರ್ಗವಾಗಿ ಸಂಚರಿಸಿ ಡಾ.ಬಿ.ಆರ್.ಅಂಬೇಡ್ಕರ್ ವೃತ್ತಕ್ಕೆ ತಲುಪಿ ಸಮಾವೇಶಗೊಂಡಿತು.
ಟಾಂಗಾ ಜಾಥಾವು ೮ ರಿಂದ ೧೦ ಕಿ.ಮೀ.ವರೆಗೆ ಸಂಚರಿಸಿ ಜಾಗೃತಿ ಮೂಡಿಸಿತು. ರಸ್ತೆಯುದ್ದಕ್ಕೂ ‘ಮಾಡಲೇಬೇಕು-ಮಾಡಲೇಬೇಕು ಮತದಾನ ಮಾಡಲೇಬೇಕು’ ನಮ್ಮ ಮತ ನಮ್ಮ ಹಕ್ಕು, ‘ಮೇ.೭ರಂದು ಕಡ್ಡಾಯವಾಗಿ ಮತದಾನ ಮಾಡಿ’ ‘ಚುನಾವಣಾ ಪರ್ವ ನಮ್ಮ ಗರ್ವ’ ಹೀಗೆ ಹತ್ತು ಹಲವಾರು ಮತದಾನ ಜಾಗೃತಿಯ ಘೋಷಣೆಗಳನ್ನು ಕೂಗಲಾಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪ ಆಯುಕ್ತ ಮಹಾವೀರ ಬೋರಣ್ಣವರ ನೆರೆದ ಎಲ್ಲರಿಗೂ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಿಷಿ ಆನಂದ ಅವರು ಮಾತನಾಡಿ, ಮತದಾನ ಅತ್ಯಂತ ಅಮೂಲ್ಯವಾದದ್ದು, ನನ್ನ ಒಂದು ಮತದಿಂದ ಏನಾಗುತ್ತದೆ ಎಂಬ ಅಸಡ್ಡೆ ಭಾವನೆ ತೋರಬಾರದು. ಒಂದು ಮತಕ್ಕೆ ದೇಶ ಕಟ್ಟುವ ಶಕ್ತಿಯಿದೆ. ಮತದಾರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊAಡ ೧೮ ವರ್ಷ ಮೇಲ್ಪಟ್ಟ ಎಲ್ಲ ಮತದಾರರು ಮೇ.೭ ರಂದು ನಡೆಯುವ ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ಕಡ್ಡಾಯವಾಗಿ ಮತದಾನ ಮಾಡುವ ಮೂಲಕ ಸುಭದ್ರ ರಾಷ್ಟ್ರ ನಿರ್ಮಾಣದಲ್ಲಿ ಕೈ ಜೋಡಿಸುವಂತೆ ಕರೆ ನೀಡಿದರು.
ದೇಶದ ಪ್ರಗತಿಯಲ್ಲಿ ಪ್ರತಿಯೊಬ್ಬ ನಾಗರಿಕರ ಪಾತ್ರ ಅತ್ಯಂತ ಮುಖ್ಯವಾಗಿದೆ. ದೇಶ ಕಟ್ಟಲು ಪ್ರತಿಯೊಬ್ಬರ ಮತ ಅಮೂಲ್ಯವಾಗಿದೆ. ದೇಶದ ಹಿತದೃಷ್ಟಿಯಿಂದ ಪ್ರತಿಯೊಬ್ಬರು ಪ್ರಜಾಪ್ರಭುತ್ವ ಹಬ್ಬದಲ್ಲಿ ಭಾಗವಹಿಸಿ ತಮ್ಮ ಕರ್ತವ್ಯ ನಿಭಾಯಿಸುವುದಲ್ಲದೇ ತಮ್ಮ ನೆರೆ ಹೊರೆಯವರನ್ನು ಮತದಾನಕ್ಕೆ ಪ್ರೇರೆಪಿಸಬೇಕು ಎಂದು ಅವರು ಹೇಳಿದರು.
ಇದೇ ಸಂದರ್ಭದಲ್ಲಿ ಮತದಾನ ಜಾಗೃತಿಯಲ್ಲಿ ಶ್ರಮಿಸಿದ ಸ್ವೀಪ್ ಅಧಿಕಾರಿಗಳು, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಮಹಾನಗರ ಪಾಲಿಕೆ ಅಧಿಕಾರಿಗಳು ಸೇರಿದಂತೆ ಟಾಂಗಾ ಅಭಿಯಾನದಲ್ಲಿ ಭಾಗವಹಿಸಿ ಟಾಂಗಾ ಚಾಲಕರಿಗೆ ಅವರು ಕೃತಜ್ಞತೆಯನ್ನು ಸಲ್ಲಿಸಿದರು.
ಜಾಥಾ ಕಾರ್ಯಕ್ರಮದಲ್ಲಿ ಸ್ವೀಪ್ ಜಿಲ್ಲಾ ನೋಡಲ್ ಅಧಿಕಾರಿ ಸಿ ಆರ್ ಮುಂಡರಗಿ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ನಿಂಗಪ್ಪ ಗೋಠೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಬಸವರಾಜ ಹುಬ್ಬಳ್ಳಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ಸೇರಿ ಇತರರು ಉಪಸ್ಥಿತರಿದ್ದರು.

