ಕೊಲ್ಹಾರ: ಮೋದಿ ಮತ್ತವರ ಬಳಗ ಮತ್ತು ಬಿಜೆಪಿಯವರ ಸುಳ್ಳುಗಳನ್ನು ಜನ ಅರಿತಿದ್ದು, ಈ ಸಲ ಸರಿಯಾಗಿ ಪಾಠ ಕಲಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ ಶನಿವಾರ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ನಡೆದ ಬಸವನ ಬಾಗೇವಾಡಿ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಪ್ರಚಾರ ಸಭೆಯಲ್ಲಿ ಮಾತನಾಡಿ, ಬಿಜೆಪಿಯವರು ಸುಳ್ಳಿನ ಮೇಲೆ ಸಾಮ್ರಾಜ್ಯ ಕಟ್ಟುತ್ತಾರೆ. ಇಲ್ಲದ್ದನ್ನು ಅಚ್ಚುಕಟ್ಟಾಗಿ ಸೃಷ್ಟಿಸುತ್ತಾರೆ. ಭ್ರಮೆಗಳನ್ನು ಬಿತ್ತಿ ಮುಗ್ಧ ಜನರ ಮತ ಕೇಳುತ್ತಾರೆ. ಇದೆಲ್ಲದರಿಂದ ಬೇಸತ್ತು ತಾವು ಬಿಜೆಪಿ ತೊರೆಯಬೇಕಾಯಿತು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮೊದಲಿಂದ ದೇಶ ಪ್ರೇಮ ಮೆರೆಯುತ್ತ ಬಂದಿದೆ. ಈ ದೇಶವನ್ನು ಕಟ್ಟಿದೆ. ರಾಜ್ಯದ ಸಿದ್ದರಾಮಯ್ಯರ ಸರಕಾರ ಗ್ಯಾರಂಟಿಗಳ ಮೂಲಕ ಜನಮನವನ್ನು ಗೆದ್ದಿದೆ. ಬಡವರ ನಿತ್ಯ ಜೀವನಕ್ಕೆ ಸಹಾಯವಾಗಲಿ ಎಂದು ಭಾಗ್ಯಗಳನ್ನು ಕೊಟ್ಟಿದೆ. ಕೆಂದ್ರ ಸರಕಾರದ ಕೆಟ್ಟ ಆಡಳಿತದಿಂದ ಬೆಲೆ ಏರಿಕೆ, ಹಣದುಬ್ಬರ, ಜಿಎಸ್‌ಟಿ, ನೋಟ್ ಬಂದಿಯಿಂದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿತ್ತು. ಇದರಿಂದ ಸಾಮಾನ್ಯ ಜನ ತತ್ತರಿಸಿದ್ದರು. ಅವರಿಗೆಲ್ಲ ಗ್ಯಾರಂಟಿಗಳಿಂದ ಉಸಿರಾಡುವಂತಾಗಿದೆ ಎಂದರು.
ಜಿಲ್ಲೆಯ ಅಭಿವೃದ್ಧಿಗಾಗಿ ಆಲಗೂರರನ್ನು ಆಯ್ಕೆ ಮಾಡಿದರೆ ಒಳಿತಾಗಲಿದೆ. ದಶಕಗಳ ಕಾಲ ಈ ಲೋಕಸಭೆ ಕ್ಷೇತ್ರ ಏಳಿಗೆಯಿಂದ ವಂಚಿತವಾಗಿದೆ. ಕಾಂಗ್ರೆಸ್ ಇಲ್ಲಿ ಗೆಲ್ಲವುದು ಖಚಿತ. ಆರಿಸಿ ಬಂದ ನಂತರ ನಿಮ್ಮ ಅಗತ್ಯಗಳಿಗೆ ನಮ್ಮ ಅಭ್ಯರ್ಥಿ ಸ್ಪಂದಿಸಲಿದ್ದಾರೆ ಎಂದು ಹೇಳಿದರು.
ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹಾದೇವಪ್ಪ ಅವರು ಮಾತನಾಡಿ, ಆರು ಸಲ ಸಂಸದರಾಗಿದ್ದ ಜಿಗಜಿಣಗಿಯವರಿಂದ ಯಾವ ಕೆಲಸವೂ ಆಗಿಲ್ಲ. ಇವರು ಬೇಕೊ ಆಲಗೂರರು ಬೇಕೊ ನಿವೇ ನಿರ್ಧರಿಸಿ. ಪ್ರಜಾಪ್ರಭುತ್ವದ ಉಳಿವಿಗಾಗಿ ನೀವು ಕಾಂಗ್ರೆಸ್ ಬೆಂಬಲಿಸಬೇಕು. ದೇಶ ಸಂಕಷ್ಟದಲ್ಲಿದೆ. ದುರಾಡಳಿತ ಹೆಚ್ಚಿದೆ ಎಂದರು.
ಅಭ್ಯರ್ಥಿ ಪ್ರೊ.ರಾಜು ಆಲಗೂರ ಮಾತನಾಡಿ, ಬಿಜೆಪಿ ಹುರಿಯಾಳಾದ ಜಿಗಜಿಣಗಿಯವರು ಹತಾಶರಾಗಿದ್ದಾರೆ. ಸಹನೆ ಕಳೆದುಕೊಂಡು ಏನೇನೊ ಮಾತನಾಡುತ್ತಿದ್ದಾರೆ. ಇದು ಅವರ ಸೋಲಿನ ದಿಕ್ಸೂಚಿಯಾಗಿದೆ. ಮತದಾರರಾದ ನೀವು ನನ್ನನ್ನು ಆಯ್ಕೆ ಮಾಡಿದರೆ ನಿಮ್ಮ ವಿಶ್ವಾಸ ಉಳಿಸಿಕೊಳ್ಳುವೆ ಎಂದು ಹೇಳಿದರು.
ಮಾಜಿ ಜಿಪಂ ಸದಸ್ಯ ಕಲ್ಲು ದೇಸಾಯಿ ಪ್ರಸ್ತಾವಿಕ ಮಾತನಾಡಿದರು.
ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಆಲಗೂರರ ಗೆಲುವು ನೂರಕ್ಕೆ ನೂರು ಸಾಧ್ಯ. ಮಾತು ಕೊಟ್ಟಂತೆ ರಾಜ್ಯ ಸರಕಾರ ನಡೆದುಕೊಂಡಿದ್ದಕ್ಕೆ ಜನರ ಪ್ರೀತಿ ಗಳಿಸಿದೆ ಎಂದರು.
ಮುಖಂಡರಾದ ಶಿವನಗೌಡ ಗುಜಗೊಂಡ, ಸಿ.ಎಸ್. ಗಿಡ್ಡಪ್ಪಗೋಳ, ಬಿ.ಯು.ಗಿಡ್ಡಪ್ಪಗೋಳ, ಎಸ್.ಬಿ. ಪತಂಗಿ, ಆರ್. ಬಿ. ಪಕಾಲಿ, ಉಸ್ಮಾನ ಪಟೇಲ್, ವಿಜಯ ಮಹಾಂತೇಶ ಗಿಡ್ಡಪ್ಪಗೋಳ, ಎಂ.ಆರ್. ಕಲಾದಗಿ, ಶ್ರೀಶೈಲ ಗೌಡರ, ಡಾ.ಮೇತ್ರಿ ಅನೇಕರಿದ್ದರು. ಪುಟ್ಟು ಪಾಟೀಲ್ ನಿರೂಪಿಸಿದರು.
ಇದೇ ಸಂದರ್ಭ ಬಿಜೆಪಿ ಪಕ್ಷವನ್ನು ತೊರೆದು ಅನೇಕರು ಕಾಂಗ್ರೆಸ್ ಸೇರಿದರು.
Subscribe to Updates
Get the latest creative news from FooBar about art, design and business.
Related Posts
Add A Comment

