ಸಿಐಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲು | ಜ.1, 2021ರಿಂದ ಏ.25, 2024ರ ನಡುವೆ ಅತ್ಯಾಚಾರವೆಸಗಿರುವುದಾಗಿ ದೂರು
ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ ನಡೆಯುತ್ತಿದೆ.
ಈ ನಡುವೆ ಮತ್ತೊಬ್ಬರು 44 ವರ್ಷದ ಮಹಿಳೆ ಪ್ರಜ್ವಲ್ ಗನ್ ಪಾಯಿಂಟ್ ಇಟ್ಟು ಬೆದರಿಸಿ ಹಲವು ಬಾರಿ ತನ್ನ ಮೇಲೆ ಅತ್ಯಾಚಾರವೆಸಗಿರುವುದಾಗಿ ದೂರು ನೀಡಿದ್ದಾರೆ.
ಮಹಿಳೆಯ ದೂರು ಆಧರಿಸಿ ಸಿಐಡಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರು ನೀಡಿದ ಮಹಿಳೆ ಹಾಸನ ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯೆ ಹಾಗೂ ಜೆಡಿಎಸ್ ನಾಯಕಿ ಎಂದು ಹೇಳಲಾಗ್ತಿದೆ. ಜನವರಿ 1, 2021ರಿಂದ 25 ಏಪ್ರಿಲ್ 2024ರ ನಡುವೆ ಪ್ರಜ್ವಲ್ ತನ್ನ ಮೇಲೆ ಅತ್ಯಾಚಾರವೆಸಗಿ, ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾಗಿ ತಿಳಿದು ಬಂದಿದೆ.
ಮಹಿಳೆಯ ದೂರಿನಲ್ಲಿ ಏನಿದೆ?
“ಜನ ಸೇವೆ ಮಾಡುವ ನಾನು ಆಗಾಗ ಶಾಸಕ, ಸಂಸದರನ್ನು ಭೇಟಿಯಾಗುತ್ತಿದ್ದೆ. ಒಂದು ಬಾರಿ ಸರ್ಕಾರಿ ಬಿಸಿಎಂ ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿನಿಯರಿಗೆ ಸೀಟು ಕೊಡಿಸಲು ಸಂಸದ ಪ್ರಜ್ವಲ್ ರೇವಣ್ಣ ಅವರ ಕಚೇರಿ ಮತ್ತು ಕ್ವಾಟ್ರಸ್‌ಗೆ ಹೋಗಿದ್ದೆ. ಆಗ ಸಂಸದರು ಕೆಲಸದ ನಿಮಿತ್ತ ಸ್ಥಳದಿಂದ ಹೊರಟು ಹೋಗಿದ್ದರು. ಮರುದಿನ ಬರುವಂತೆ ಹೇಳಿದ್ದರು.”
“ಮರುದಿನ ಪುನಃ ನಾನು ಪ್ರಜ್ವಲ್ ರೇವಣ್ಣ ಅವರ ಕ್ವಾಟ್ರಸ್‌ಗೆ ಹೋಗಿದ್ದೆ. ಆಲ್ಲಿ ಪ್ರಜ್ವಲ್ ಕಡೆಯವರು ನನ್ನನ್ನು ಮೊದಲ ಮಹಡಿಗೆ ಕಳುಹಿಸಿದ್ದರು. ಅಲ್ಲಿಯೂ ಕೆಲ ಮಹಿಳೆಯರು ಇದ್ದರು. ಸ್ಥಳಕ್ಕೆ ಬಂದಿದ್ದ ಪ್ರಜ್ವಲ್ ಇತರ ಮಹಿಳೆಯರನ್ನು ಮಾತನಾಡಿಸಿ ವಾಪಸ್ ಕಳುಹಿಸಿದ್ದರು. ನಾನು ಒಬ್ಬಳೇ ಉಳಿದುಕೊಂಡಿದ್ದೆ. ಎಲ್ಲರೂ ಹೋದ ಬಳಿಕ ಪ್ರಜ್ವಲ್ ನನ್ನ ಕೈ ಹಿಡಿದು ಕೊಠಡಿಯೊಂದಕ್ಕೆ ಎಳೆದೊಯ್ದರು. ಕೊಠಡಿ ಬಾಗಿಲು ಹಾಕಿ ಒಳಗಿನಿಂದ ಲಾಕ್ ಮಾಡಿದ್ದರು. ನಾನು ಲಾಕ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಏನು ಆಗಲ್ಲ ಎಂದಿದ್ದರು.”
“ನನ್ನ ಪತಿ ಬಗ್ಗೆಯೂ ಮಾತನಾಡಿದ್ದ ಪ್ರಜ್ವಲ್ ಅವರಿಂದಾಗಿ ತನ್ನ ತಾಯಿಗೆ ಎಂಎಲ್‌ಎ ಟಿಕೆಟ್ ತಪ್ಪಿತೆಂದು ಹೇಳಿದ್ದರು. ನಂತರ ನನಗೆ ಬಟ್ಟೆ ಬಿಚ್ಚುವಂತೆ ಹಾಗೂ ಮಂಚದ ಮೇಲೆ ಮಲಗುವಂತೆ ಒತ್ತಾಯಪಡಿಸಿದ್ದರು. ನಾನು ಅದಕ್ಕೆ ಒಪ್ಪದಿದ್ದಾಗ ‘ನನ್ನ ಬಳಿ ಗನ್ ಇದೆ’, ನಾನು ಹೇಳಿದಂತೆ ಕೇಳದಿದ್ದರೆ ನಿನ್ನನ್ನು ಹಾಗೂ ನಿನ್ನ ಪತಿಯನ್ನು ಮುಗಿಸುತ್ತೇನೆ ಎಂದು ಬೆದರಿಸಿದ್ದರು. ನಾನು ಆತನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದೆ. ಆದರೆ, ಆತ ಕೈಗಳನ್ನು ಬಿಗಿಯಾಗಿ ಹಿಡಿದಿದ್ದರು. ನನ್ನ ಬಟ್ಟೆಗಳನ್ನು ಒತ್ತಾಯದಿಂದ ಬಿಚ್ಚಿಸಿದ್ದರು. ನಾನು ಕೂಗುತ್ತೇನೆ ಎಂದಾಗ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡು ನನಗೆ ತೋರಿಸಿದ್ದರು. ಹೇಳಿದಂತೆ ಕೇಳದಿದ್ದರೆ ವಿಡಿಯೋವನ್ನು ಎಲ್ಲರಿಗೂ ತೋರಿಸಿ ಮರ್ಯಾದೆ ಕಳೆಯುವುದಾಗಿ ಬ್ಲ್ಯಾಕ್ ಮೇಲ್ ಮಾಡಿದ್ದರು. ಬಳಿಕ ತನ್ನ ಮೇಲೆ ಅತ್ಯಾಚಾರವೆಸಗಿ ಕಿರುಕುಳ ನೀಡಿದ್ದರು. ವಿಡಿಯೋ ಮುಂದಿಟ್ಟುಕೊಂಡು ಪ್ರಜ್ವಲ್ ಹಲವು ಬಾರಿ ನನ್ನನ್ನು ಒತ್ತಾಯದಿಂದ ತಮ್ಮ ಕ್ವಾಟ್ರಸ್‌ಗೆ ಕರೆಸಿ ಅತ್ಯಾಚಾರವೆಸಗಿದ್ದಾರೆ. ಆಗಾಗ ವಿಡಿಯೋ ಕಾಲ್ ಮಾಡಿ ಬಟ್ಟೆ ಬಿಚ್ಚುವಂತೆಯೂ ಪೀಡಿಸಿದ್ದಾರೆ. ಪತಿಯನ್ನು ಕೊಲ್ಲುವ ಬೆದರಿಗೆ ಹಾಕಿದ್ದಾರೆ” ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಗಿ ವರದಿಗಳು ಹೇಳಿವೆ
ಇದುವರೆಗೆ ಭಯದಿಂದ ದೂರು ನೀಡಿಲ್ಲ. ಆದರೆ, ಈಗ ಪ್ರಜ್ವಲ್ ರೇವಣ್ಣ ವಿರುದ್ಧದ ಆರೋಪಗಳ ತನಿಖೆಗೆ ಎಸ್‌ಐಟಿ ರಚನೆಯಾಗಿರುವ ಕಾರಣ ದೂರು ನೀಡಲು ನಿರ್ಧರಿಸಿದೆ ಎಂದು ಮಹಿಳೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಹೆಚ್‌ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ದಾಖಲಾಗಿರುವುದು ಇದು ಮೂರನೇ ಎಫ್‌ಐಆರ್ ಆಗಿದೆ . ಮೊದಲು ಹೊಳೆನರಸೀಪುರ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದರು. ಬಳಿಕ ಲೈಂಗಿಕ ದೌರ್ಜನ್ಯದ ಸಂತ್ರಸ್ತೆಯಾಗಿರುವ ಮನೆ ಕೆಲಸದ ಮಹಿಳೆಯನ್ನು ಅಪಹರಿಸಿದ ಆರೋಪದ ಮೇಲೆ ಹೆಚ್‌ಡಿ ರೇವಣ್ಣ ವಿರುದ್ದ ಎಫ್‌ಐಆರ್ ದಾಖಲಾಗಿದೆ.
ಸೌಜನ್ಯ: ನಾನು.ಗೌರಿ.ಕಾಂ

