ಬಿಜೆಪಿ ಮುಖಂಡ ಡಾ.ಗೌತಮ್ ಚೌಧರಿ ಭವಿಷ್ಯ
ವಿಜಯಪುರ: ದೇಶದ ಸೇವಕ ನಮ್ಮ ಹೆಮ್ಮೆಯ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ದೇಶದ ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನಗಳಿಲ್ಲ. ಇದು ಸೂರ್ಯ-ಚಂದ್ರರಿರುವಷ್ಟೇ ಸತ್ಯ ಎಂದು ಭಾರತೀಯ ಜನತಾ ಪಕ್ಷದ ಮುಖಂಡ ಡಾ.ಗೌತಮ್ ಆರ್.ಚೌಧರಿ ಅಭಿಪ್ರಾಯಪಟ್ಟಿದ್ದಾರೆ.
ಶುಕ್ರವಾರ ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಸುಳ್ಳು ಹೇಳಿಕೆಗಳಿಂದ ಜನರ ದಾರಿ ತಪ್ಪಿಸಲು ಮಾಡುವ ಪ್ರಯತ್ನಗಳು ಫಲಕಾರಿಯಾಗುವದಿಲ್ಲ. ಇವರ ಸುಳ್ಳು ಆರೋಪಗಳಿಗೆ ದೇಶದ ಜನತೆ ಸೊಪ್ಪು ಹಾಕುವುದಿಲ್ಲ ಎಂದಿದ್ದಾರೆ.
ಮೋದಿಯವರ ಅಭಿವೃದ್ಧಿ ಕಾರ್ಯಗಳು, ದೇಶದ ರಕ್ಷಣೆ, ಬಡವರ ರಕ್ಷಣೆ, ರೈತರ ಪರ ಕಾಳಜಿ, ಸ್ತ್ರೀಯರಿಗೆ ವಿಶೇಷ ಸೌಲಭ್ಯಗಳು ಮತ್ತು ಆಧುನಿಕ ಭಾರತದ ಕನಸಿನೊಂದಿಗೆ ಹೆಜ್ಜೆಹಾಕುತ್ತಿರುವ ಮೋದಿಜಿ ಅವರು ಹೋದಲ್ಲೆಲ್ಲಾ ವ್ಯಕ್ತವಾಗುತ್ತಿರುವ ಅಪಾರ ಪ್ರಮಾಣದ ಜನಬೆಂಬಲವೇ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಕ್ಕೆ ಮುನ್ಸೂಚನೆಯಾಗಿದೆ. ಮೋದಿಜಿ ಅವರು ಮೂರನೆಯ ಬಾರಿ ಈ ದೇಶದ ಪ್ರಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಡಾ.ಗೌತಮ್ ಚೌಧರಿ ಭವಿಷ್ಯ ನುಡಿದಿದ್ದಾರೆ.

