ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಅಭಿಮತ
ವಿಜಯಪುರ: ೫ ಗ್ಯಾರಂಟಿಗಳನ್ನು ಘೋಷಣೆ ಮಾಡಿ, ನುಡಿದಂತೆ ನಡೆದ ಸರ್ಕಾರ ಯಾವುದಾದರೂ ಇದ್ದರೆ ಅದು ಕಾಂಗ್ರೆಸ್ ಸರಕಾರ. ಈಗಿನ ಬಿಜೆಪಿ ಸರ್ಕಾರದ ಸರ್ವಾಧಿಕಾರ ಧೋರಣೆಯಿಂದ ಜನ ಬೇಸತ್ತು ಹೋಗಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುತ್ತ ಜನರ ಭಾವನೆ ಕೆರಳಿಸಿದ್ದಾರೆ. ಹೀಗಾಗಿ ದೇಶದ ಹಿತಕ್ಕಾಗಿ ಕೇಂದ್ರದಲ್ಲಿ ಈ ಬಾರಿ ಬದಲಾವಣೆ ಅಗತ್ಯವಾಗಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಎಸ್‌ಪಿ, ನಿರುದ್ಯೋಗ ಯುವಕರಿಗೆ ೨ ಕೋಟಿ ಉದ್ಯೋಗ ಕೊಡುವುದು, ೧೫ ಲಕ್ಷ ರೂ ಕಪ್ಪುಹಣ ತರುವುದು ಸೇರಿದಂತೆ ಎಲ್ಲ ಆಶ್ವಾಸನೆಗೆ ನಮ್ಮ ಪ್ರಧಾನಿಗಳು ವಿಫಲರಾಗಿದ್ದಾರೆ. ಇವರ ಸಾಧನೆ ಶೂನ್ಯವಾಗಿದೆ. ಇಂದಿನ ಯುವಪೀಳಿಗೆ ಎಲ್ಲವನ್ನು ಅರಿತಿದ್ದು, ಈ ಚುನಾವಣೆಯಲ್ಲಿ ಪಾಠ ಕಲಿಸಲಿದ್ದಾರೆ ಎಂದರು.
ವಿಜಯಪುರ ಜಿಲ್ಲೆಯ ಹಿಂದಿನ ಬಿಜೆಪಿ ಸಂಸದರು ಒಂದೂ ಸಲ ಸಂಸತ್‌ನಲ್ಲಿ ಭಾಗಿಯಾಗಿಲ್ಲ. ಸ್ಥಳಿಯ ಸಮಸ್ಯೆಗಳನ್ನು ಬಗೆಹರಿಸಿಲ್ಲ. ಸ್ಮಾರ್ಟಸಿಟಿ, ದತ್ತುಗ್ರಾಮದಂತಹ ಯೋಜನೆ ಅನುಷ್ಠಾನಗೊಳಿಸಿಲ್ಲ. ೩ ಬಾರಿ ಸಂಸದರಾದರೂ ಕೇವಲ ಮೋದಿ ಹೆಸರು ಹೇಳಿ ಆರಿಸಿ ಬಂದು ಜಿಲ್ಲೆಯ ಜನತೆಗೆ ದ್ರೋಹ ಬಗೆದಿದ್ದಾರೆ. ನೀರಾವರಿಯಂತಹ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಸಿಕ್ಕಿಲ್ಲ. ಪ್ರವಾಸೋದ್ಯಮ ಬೆಳವಣಿಗೆ ಆಗಿಲ್ಲ, ಬರ ಹಣೆಪಟ್ಟಿ ಅಳಿಸುವಲ್ಲಿ ವಿಫಲರಾದ ಜಿಗಜಿಣಗಿ ಮತ್ತೆ ಮೋದಿ ಮುಖ ನೋಡಿ ಮತ ಕೇಳುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದರು.
ನಾವು ವಿಜಯಪುರದಲ್ಲಿ ಒಳ್ಳೆಯ ಅಭ್ಯರ್ಥಿಯನ್ನು ನೀಡಿದ್ದೇವೆ. ವಿಜಯಪುರದ ಅಭಿವೃದ್ಧಿ ಮಾಡುವುದೇ ಮುಖ್ಯ ಗುರಿಯಾಗಿದೆ. ರಾಜ್ಯದಲ್ಲಿ ಮತದಾರರು ಸಾಕಷ್ಟು ಬದಲಾವಣೆ ನಾವು ಕೇಳಿದ್ದೇವೆ. ಬಿಜೆಪಿಯ ಶೇ.೧೦ ರಿಂದ ೧೫ ರಷ್ಟು ಮತಗಳು ನಾವು ಹೆಚ್ಚು ತೆಗೆದುಕೊಳ್ಳಲಿದ್ದೇವೆ. ರಾಜ್ಯದಲ್ಲಿ ೨೦ಕ್ಕಿಂತ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸನ್ನಿವೇಶ ಇದೆ ಎಂದರು.
ಕೆಪಿಸಿಸಿ ವಕ್ತಾರೆ ಹಾಗೂ ಮಾಜಿ ಸಂಸದೆ ತೇಜಶ್ವಿನಿ ಗೌಡರವರು ಮಾತನಾಡಿ, ದೇವೆಗೌಡರು ಬಿಜೆಪಿಯ ಜೊತೆ ಮೈತ್ರಿ ಮಾಡಿಕೊಳ್ಳುವ ಭರದಲ್ಲಿ ಜೆಡಿಎಸ್ ಅಸ್ತಿತ್ವವನ್ನೇ ಅಳಿಸಿ ಹಾಕಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಠೋಡ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಮಹ್ಮದ್ ರಫೀಕ್ ಟಪಾಲ್, ಕೆಪಿಸಿಸಿ ಸದಸ್ಯ ಅಬ್ದುಲ್ ಹಮೀದ್ ಮುಶ್ರೀಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರುಕ್ಸಾನಾ ಉಸ್ತಾದ್, ಐ ಎಂ ಇಂಡಿಕರ ಉಪಸ್ಥಿತರಿದ್ದರು.

